ಅಮೂಲ್ಯ
‘ಚೆಲುವಿನ ಚಿತ್ತಾರದ’ ಐಶುವಾಗಿ ಜನಪ್ರಿಯವಾದ ನಟಿ ಅಮೂಲ್ಯ ಎಂಟು ವರ್ಷಗಳ ವಿರಾಮದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಹೊಸ ಸಿನಿಮಾ, ಪಾತ್ರ, ಭವಿಷ್ಯದ ಕನಸುಗಳ ಕುರಿತು ಅವರು ಮಾತನಾಡಿದ್ದಾರೆ.
ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು ಅಮೂಲ್ಯ. ಮೊದಲು ನಾಯಕಿಯಾಗಿ ಕಾಣಿಸಿಕೊಂಡ ‘ಚೆಲುವಿನ ಚಿತ್ತಾರ’ ಚಿತ್ರ ಸೂಪರ್ ಹಿಟ್. ಆಗ ಅವರಿಗೆ ಕೇವಲ ಹದಿಮೂರು ವರ್ಷ. ಈ ಕಾರಣಕ್ಕಾಗಿ ಚಿತ್ರ ಒಂದಷ್ಟು ಚರ್ಚೆಗೆ ಒಳಗಾಯಿತು. ಚಿಕ್ಕ ಮಕ್ಕಳಿಗೆ ತಪ್ಪು ಸಂದೇಶ ನೀಡುವ ಚಿತ್ರವೆಂದು ನಿರ್ದೇಶಕ ಎಸ್.ನಾರಾಯಣ್ ಹಲವರ ಟೀಕೆಗೂ ಗುರಿಯಾದರು. ಆದರೆ ಅಮೂಲ್ಯ ಮಾತ್ರ ಈ ಚಿತ್ರದಲ್ಲಿ ತಮ್ಮ ಮುಗ್ಧ ನಟನೆಯಿಂದ ಜನಪ್ರಿಯರಾದರು. ಅದಾದ ಬಳಿಕ ‘ಮಳೆಯಲಿ ಜೊತೆಯಲಿ’, ‘ಗಜಕೇಸರಿ’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಯಶಸ್ಸು ಉತ್ತುಂಗದಲ್ಲಿದ್ದಾಗಲೇ ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದರು. ಗಣೇಶ್ ನಟನೆಯ ‘ಮುಗುಳು ನಗೆ’ ಅಮೂಲ್ಯ ತೆರೆಯಲ್ಲಿ ಕಾಣಿಸಿಕೊಂಡ ಕೊನೆಯ ಚಿತ್ರ.
ಇದೀಗ ಮಂಜು ಸ್ವರಾಜ್ ನಿರ್ದೇಶನದ ‘ಪೀಕಬೂ’ ಚಿತ್ರದೊಂದಿಗೆ ‘ಚೆಲುವಿನ ಚಿತ್ತಾರ’ದ ಚೆಲುವೆ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ‘ಪಾತ್ರಕ್ಕೆ ಇನ್ನೂ ಹೆಸರು ಅಂತಿಮವಾಗಿಲ್ಲ. ಹಾಸ್ಯದ ಜತೆಗೆ ಭಾವನಾತ್ಮಕ ಪಾತ್ರ. ಅಕ್ಟೋಬರ್ 2ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಶೀಘ್ರದಲ್ಲಿಯೇ ಚಿತ್ರದ ನಾಯಕ ಮತ್ತಿತರ ವಿವರಗಳನ್ನು ಚಿತ್ರತಂಡ ನೀಡಲಿದೆ. ನಟಿಯರು ಮಹಿಳಾ ಪ್ರಧಾನ ಚಿತ್ರಗಳೊಂದಿಗೆ ಮರಳುತ್ತಾರೆ ಎಂದುಕೊಳ್ಳುತ್ತಾರೆ. ಆದರೆ ಇದು ನಾಯಕನಿಗೂ ಪ್ರಾಶಸ್ತ್ಯ ಇರುವ ಕಮರ್ಷಿಯಲ್ ಕಥೆ. ನನ್ನ ಪಾತ್ರಕ್ಕೂ ಅಷ್ಟೇ ಅವಕಾಶವಿದೆ’ ಎಂದು ಮಾತು ಪ್ರಾರಂಭಿಸಿದರು ಅಮೂಲ್ಯ.
ಮಂಜು ಸ್ವರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಗಣೇಶ್ ಕೆಂಚಾಂಬಾ ಬಂಡವಾಳ ಹೂಡುತ್ತಿರುವ ಈ ಚಿತ್ರದ ಟೈಟಲ್ ಟೀಸರ್ ಹಾಗೂ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಗೊಂಡಿದೆ. ಅಮೂಲ್ಯ ಹಾಸ್ಯಭರಿತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ವೀರ್ ಸಮರ್ಥ್ ಮತ್ತು ಶ್ರೀಧರ್ ಸಂಗೀತ, ಸುರೇಶ್ ಬಾಬು ಬಿ. ಛಾಯಾಚಿತ್ರಗ್ರಹಣ, ಎನ್.ಎಂ. ವಿಶ್ವ ಸಂಕಲನ ಈ ಚಿತ್ರಕ್ಕಿದೆ. ಮಂಜು ಸ್ವರಾಜ್ ಈ ಹಿಂದೆ ‘ಶ್ರಾವಣಿ ಸುಬ್ರಮಣ್ಯ’ ಚಿತ್ರ ನಿರ್ದೇಶಿಸಿದ್ದರು. ‘ಪೀಕಬೂ’ ಎಂಬುದು ಗಿಬರೀಶ್ ಭಾಷೆ. ಅಚ್ಚರಿ ಎಂಬ ಅರ್ಥ ನೀಡುತ್ತದೆ ಎಂದಿದೆ ಚಿತ್ರತಂಡ.
‘ಚಿಕ್ಕ ವಯಸ್ಸಿನಲ್ಲಿಯೇ ನಟನೆಗೆ ಬಂದೆ. ಅಮ್ಮ, ಚಿತ್ರೀಕರಣ ಇಷ್ಟೇ ಪ್ರಪಂಚವಾಗಿತ್ತು. ಕಾಲೇಜು ಜೀವನವನ್ನು ಅಷ್ಟೇನು ಆನಂದಿಸಲಿಲ್ಲ. ಒಂಟಿಯಾಗಿ ತರಕಾರಿ ತರಲು ಹೋದವಳಲ್ಲ. ಹೀಗಾಗಿ ಮದುವೆ ಬಳಿಕ ನಟನೆಯಿಂದ ವಿರಾಮ ತೆಗೆದುಕೊಂಡು ಕುಟುಂಬಕ್ಕೆ ಸಮಯ ನೀಡಬೇಕು, ಪ್ರಪಂಚ ಜ್ಞಾನ ಪಡೆಯಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ಜನಪ್ರಿಯತೆ ಉತ್ತುಂಗದಲ್ಲಿದ್ದಾಗಲೇ ನಟನೆಯಿಂದ ದೂರ ಸರಿದೆ. ಹಾಗಂತ ಪೂರ್ತಿ ನಟನೆಯಿಂದ ವಿಮುಖಳಾಗಬೇಕು ಎಂದುಕೊಂಡಿರಲಿಲ್ಲ. ಮದುವೆ ಬಳಿಕ ತುಂಬ ಅವಕಾಶಗಳು ಬಂದವು, ಸಾಕಷ್ಟು ಸಿನಿಮಾಗಳನ್ನು ತಿರಸ್ಕರಿಸಿದೆ ಎಂಬಂತೇನೂ ಇರಲಿಲ್ಲ. ಅವಕಾಶಗಳು ಬಂದಿದ್ದು ಅಷ್ಟರಲ್ಲೇ ಇತ್ತು. ಬರುತ್ತಿದ್ದ ಅವಕಾಶಗಳಲ್ಲಿ ಕಥೆ ಇಷ್ಟವಾಗುತ್ತಿರಲಿಲ್ಲ. ಹಾಸ್ಯದ ಜತೆಗೆ ಒಂದು ಗಂಭೀರ ಪಾತ್ರವನ್ನು ಎದುರು ನೋಡುತ್ತಿದ್ದೆ. ‘ಪೀಕಬೂ’ ಚಿತ್ರದಲ್ಲಿ ಆ ಅಂಶಗಳು ಇವೆ ಎನ್ನಿಸಿತು’ ಎಂದರು.
‘ನಟನೆಯಿಂದ ವಿರಾಮ ತೆಗೆದುಕೊಂಡ ಅವಧಿಯಲ್ಲಿ ಕುಟುಂಬ, ಮಕ್ಕಳಿಗೆ ಶೇಕಡ 100ರಷ್ಟು ಸಮಯ ನೀಡಿದ್ದೇನೆ. ನಟನೆಗೆ ಮರಳಿದರೆ ಅಲ್ಲಿಯೂ ಶೇಕಡ 100ರಷ್ಟು ನೀಡಬೇಕು ಅಂದುಕೊಂಡಿದ್ದೆ. ಏನೂ ಅಂದುಕೊಂಡು ನಟನೆಗೆ ಬಂದಿದ್ದಲ್ಲ. ಈಗಲೂ ಹಾಗೇ ಇದಾದ ಬಳಿಕ ಮತ್ತೇನೋ ಮಾಡುತ್ತೇನೆ, ಇಲ್ಲಿಯೇ ಮುಂದುವರಿಯುತ್ತೇನೆ ಎಂದುಕೊಂಡು ಬಂದಿಲ್ಲ. ಸಮಯದ ಜೊತೆಗೆ ಸಾಗುವವಳು’ ಎಂದು ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.