ADVERTISEMENT

ಅನಂತ ನಾಗ್ ಉತ್ಸವಕ್ಕೆ ಬೆಂಗಳೂರಿನಲ್ಲಿ ಚಾಲನೆ

ಅನಂತನಾಗ್ ಅವರ ಅನಂತ ಪ್ರತಿಭೆಗೆ ಪದ್ಮ ಪ್ರಶಸ್ತಿ ಸಲ್ಲಬೇಕು– ಚಲನಚಿತ್ರ ಕ್ಷೇತ್ರದ ಪ್ರಮುಖರ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 14:30 IST
Last Updated 13 ಸೆಪ್ಟೆಂಬರ್ 2023, 14:30 IST
ಸಮಾರಂಭದಲ್ಲಿ ರಮೇಶ್ ಭಟ್ ಹಾಗೂ ಸುಂದರ ರಾಜ್ ಚರ್ಚಿಸಿದರು. ಸದಾಶಿವ ಶೆಣೈ, ಪ್ರಕಾಶ ಬೆಳವಾಡಿ, ಭಾರತೀಯ ವಿದ್ಯಾ ಭವನದ ನಿರ್ದೇಶಕ ಎಚ್.ಎನ್. ಸುರೇಶ್ ಮತ್ತು ಎನ್. ನರಹರಿ ರಾವ್ ಇದ್ದಾರೆ – ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ರಮೇಶ್ ಭಟ್ ಹಾಗೂ ಸುಂದರ ರಾಜ್ ಚರ್ಚಿಸಿದರು. ಸದಾಶಿವ ಶೆಣೈ, ಪ್ರಕಾಶ ಬೆಳವಾಡಿ, ಭಾರತೀಯ ವಿದ್ಯಾ ಭವನದ ನಿರ್ದೇಶಕ ಎಚ್.ಎನ್. ಸುರೇಶ್ ಮತ್ತು ಎನ್. ನರಹರಿ ರಾವ್ ಇದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜಗತ್ತಿನ ಶ್ರೇಷ್ಠ ನಟರ ಸಾಲಿಗೆ ಅನಂತ ನಾಗ್ ಸೇರುತ್ತಾರೆ. ಅವರ ಬಹುಮುಖ ಪ್ರತಿಭೆ, ಸುದೀರ್ಘ ಅಭಿನಯಕ್ಕೆ ಪದ್ಮ ಪ್ರಶಸ್ತಿ’ ಸಲ್ಲಬೇಕು’ ಎಂದು ಚಲನಚಿತ್ರ ಕ್ಷೇತ್ರದ ಪ್ರಮುಖರು ಆಗ್ರಹಿಸಿದರು. 

ಭಾರತೀಯ ವಿದ್ಯಾಭವನ ಮತ್ತು ಸುಚಿತ್ರ ಫಿಲಂ ಸೊಸೈಟಿ ಜಂಟಿಯಾಗಿ ‘ಪ್ರಜಾವಾಣಿ’ ಮಾಧ್ಯಮ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡ ಮೂರು ದಿನಗಳ ಅನಂತ ನಾಗ್ ಉತ್ಸವಕ್ಕೆ ಬುಧವಾರ ಚಾಲನೆ ದೊರೆಯಿತು. 

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸುಂದರ ರಾಜ್, ‘ಅನಂತ ನಾಗ್ ಅವರದ್ದು ವಿಚಿತ್ರ ವ್ಯಕ್ತಿತ್ವ. ಒಂದು ರೀತಿಯ ಮೌನ ಮತ್ತು ಕೋಪವನ್ನು ಅವರಲ್ಲಿ ಕಾಣಬಹುದು. ಅಷ್ಟೇ ಹೃದಯವಂತರೂ ಹೌದು. ಸಿನಿಮಾ ಮತ್ತು ರಂಗಭೂಮಿಯನ್ನು ಅತ್ಯಂತ ಗೌರವದಿಂದ ಅವರು ಕಾಣುತ್ತಾರೆ. ಅತ್ಯಂತ ಶ್ರೇಷ್ಠ ನಟನಷ್ಟೇ ಅಲ್ಲದೆ, ಪ್ರಭಾವಶಾಲಿ ವ್ಯಕ್ತಿಯೂ ಆಗಿದ್ದಾರೆ. ಅವರಿಗೆ ‘ಪ್ರದ್ಮಶ್ರೀ’, ‘ಪದ್ಮಭೂಷಣ’ ಪ್ರಶಸ್ತಿ ಸಿಗಬೇಕಾಗಿತ್ತು. ತೆಲುಗಿನಲ್ಲಿ ಹಾಸ್ಯ ಕಲಾವಿದರಿಗೆಲ್ಲ ಪದ್ಮ ಪ್ರಶಸ್ತಿ ದೊರೆತಿದೆ. ಅನಂತ ನಾಗ್‌ ಅವರಿಗೆ ಈವರೆಗೂ ಪದ್ಮ ಪ್ರಶಸ್ತಿ ನೀಡದಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು. 

ADVERTISEMENT

ಸಹಜ ನಟನೆ

ಚಲಚಿತ್ರ ನಟ ರಮೇಶ್ ಭಟ್, ‘ಅನಂತ ನಾಗ್ ಅವರು ಸಭೆ, ಸಭಾರಂಭ, ಹಾರ, ತುರಾಯಿಗಳಿಂದ ದೂರ ಇರುತ್ತಾರೆ. ಅವರು ಸಹಜ ನಟನೆಗೆ ಒತ್ತು ನೀಡಿದ್ದು, ಎಲ್ಲಾ ರೀತಿಯ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಅವರು ಅಭಿನಯದ ಅಕ್ಷಯ ಪಾತ್ರೆಯಾಗಿದ್ದು, ಅವರ ಪ್ರತಿಭೆಗೆ ಸಲ್ಲಬೇಕಾದ ಪ್ರಶಸ್ತಿ, ಪುರಸ್ಕಾರಗಳು ಸಲ್ಲಲಿಲ್ಲ. ಅವರಿಗೆ ‘ಪದ್ಮಭೂಷಣ ಪ್ರಶಸ್ತಿ’ ಹಾಗೂ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಸಲ್ಲಬೇಕು’ ಎಂದು ಹೇಳಿದರು. 

ಸುಚಿತ್ರ ಫಿಲಂ ಆ್ಯಂಡ್ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಹಾಗೂ ನಟ ಪ್ರಕಾಶ್ ಬೆಳವಾಡಿ, ‘ಅನಂತ ನಾಗ್ ಅವರು ಅದ್ಭುತ ಕಲಾವಿದ. ಅವರು ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡ ಚಿತ್ರರಂಗದ ಸ್ವರೂಪ ಬದಲಾಯಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಪತ್ರಕರ್ತ ಸದಾಶಿವ ಶೆಣೈ, ಸುಚಿತ್ರ ಫಿಲಂ ಸೊಸೈಟಿ ಅಧ್ಯಕ್ಷ ಎನ್. ನರಹರಿ ರಾವ್ ಅವರು ಅನಂತ ನಾಗ್ ಅವರ ನಟನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. 

1974ರಲ್ಲಿ ತೆರೆಕಂಡ ‘ಅಂಕುರ್’ ಹಿಂದಿ ಚಿತ್ರವನ್ನು ಭಾರತೀಯ ವಿದ್ಯಾಭವನದಲ್ಲಿ  ಪ್ರದರ್ಶಿಸಲಾಯಿತು. ಸುಚಿತ್ರ ಫಿಲಂ ಸೊಸೈಟಿಯಲ್ಲಿ ಕನ್ನಡದ ‘ಹಂಸಗೀತೆ’ ಹಾಗೂ ಮಲೆಯಾಳಂನ ‘ಸ್ವಾತಿ ತಿರುನಾಳ್’ ಚಲನಚಿತ್ರ ಪದರ್ಶನ ಕಂಡಿತು. 

ಅನಂತ ನಾಗ್ ಚಲನಚಿತ್ರ ಪ್ರದರ್ಶನ

ಅನಂತ ನಾಗ್ ಉತ್ಸವದ ಪ್ರಯುಕ್ತ ಅವರ ಚಲನಚಿತ್ರಗಳು ರೇಸ್‌ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನ ಹಾಗೂ ಬನಶಂಕರಿಯಲ್ಲಿ ಇರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಪ್ರದರ್ಶನ ಕಾಣಲಿವೆ. ಭಾರತೀಯ ವಿದ್ಯಾಭವನದಲ್ಲಿ ಸೆ.14ರಂದು ಬೆಳಿಗ್ಗೆ 10.30ಕ್ಕೆ ‘ಬರ’ ಮಧ್ಯಾಹ್ನ 3ಕ್ಕೆ ‘ಹಂಸಗೀತೆ’ ಸೆ.15ರಂದು ಬೆಳಿಗ್ಗೆ 10.30ಕ್ಕೆ ‘ಸ್ಟಂಬಲ್‌’ ಚಲನಚಿತ್ರಗಳ ಪ್ರದರ್ಶನ ನಡೆಯಲಿವೆ. ಸಂಜೆ 4ಕ್ಕೆ ಸ್ಮಿತಾ ಕಾರ್ತಿಕ್‌ ತಂಡದಿಂದ ಅನಂತ ನಾಗ್‌ ಅವರ ಚಿತ್ರಗಳಿಂದ ಆಯ್ದ ಗೀತೆಗಳ ಗಾಯನ ಹಮ್ಮಿಕೊಳ್ಳಲಾಗಿದೆ. ಸುಚಿತ್ರ ಫಿಲಂ ಸೊಸೈಟಿಯಲ್ಲಿ ಸೆ.14ರಂದು ಮಧ್ಯಾಹ್ನ 3ಕ್ಕೆ ‘ಅಂಕುರ್‌’ ಹಾಗೂ ಸಂಜೆ 6.30 ‘ಸ್ಟಂಬಲ್‌’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.