ADVERTISEMENT

ಅನುಪಮ್‌ ಖೇರ್ ತಾಯಿ, ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 9:50 IST
Last Updated 12 ಜುಲೈ 2020, 9:50 IST
   

ಮುಂಬೈನ ಬಹುದೊಡ್ಡ ಕೊಳೆಗೇರಿಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂಬ ಶುಭ ಸುದ್ದಿಯಾಗುತ್ತಿರುವ ಈ ಹೊತ್ತಿನಲ್ಲೇ, ಬಾಲಿವುಡ್‌ನ ನಟ ನಟಿಯರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೋಂಕು ತಗುಲಿರುವ ಸುದ್ದಿಗಳು ಕೇಳಿಬರುತ್ತಿವೆ.

ಶನಿವಾರ ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ನಂತರ ಅವರ ಕುಟುಂಬದ ಸದಸ್ಯರನ್ನೆಲ್ಲ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈಗ ಬಂದಿರುವ ಸುದ್ದಿ ಪ್ರಕಾರ ಅಮಿತಾಭ್ ಪತ್ನಿ ಜಯಾಬಚ್ಚನ್ ಅವರಿ ನೆಗೆಟಿವ್‌ ಬಂದಿದ್ದು, ಸೊಸೆಐಶ್ವರ್ಯ ರೈ, ಮೊಮ್ಮಗಳು ಆರಾಧ್ಯಾಗೆ ಸೋಂಕು ದೃಢಪಟ್ಟಿದೆ.

ಈಗ ಮತ್ತೊಬ್ಬ ಬಾಲಿವುಡ್‌ ನಟ ಅನುಪಮ್‌ ಖೇರ್‌ ಅವರ ತಾಯಿ ದುಲ್ಹಾರಿ ಖೇರ್‌ ಮತ್ತು ಸಹೋದರ ರಾಜು ಖೇರ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ವಿಷಯವನ್ನು ಸ್ವತಃ ಅನುಪಮ್ ಖೇರ್ ಅವರೇ ತಮ್ಮ ಟ್ವಿಟರ್ ಖಾತೆ ಮೂಲಕ ದೃಢಪಡಿಸಿದ್ದಾರೆ.

ADVERTISEMENT

ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ನೀಡುವ ವಿಡಿಯೊವೊಂದನ್ನು ಅನುಪಮ್‌ ಖೇರ್ ಪೋಸ್ಟ್‌ ಮಾಡಿದ್ದಾರೆ. ಆ ವಿಡಿಯೊದಲ್ಲಿ ‘ನನ್ನ ತಾಯಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಅವರನ್ನು ಮುಂಬೈನ್ ಕೊಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ನನ್ನ ಅಣ್ಣ ಮತ್ತು ಅತ್ತಿಗೆ ಮತ್ತು ಕುಟುಂಬದವರಿಗೂ ಸೋಂಕಿರುವುದಾಗಿ ತಿಳಿದುಬಂದಿದೆ. ನಾನು ಪರೀಕ್ಷೆಗೊಳಪಟ್ಟೆ. ನನ್ನ ವರದಿ ನೆಗೆಟಿವ್ ಎಂದು ಬಂದಿದೆ. ಬೃಹನ್ ಮುಂಬೈ ಕಾರ್ಪೊರೇಷನ್‌ಗೆ ಮಾಹಿತಿ ನೀಡಲಾಗಿದೆ‘ ಎಂದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ವಿಡಿಯೊದಲ್ಲಿ ಅನುಪಮ್‌‌ ವಿವರಿಸಿದ್ದಾರೆ.

ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ, ಖೇರ್‌ ಅವರ ಸಹೋದರ ರಾಜು ಖೇರ್‌ ಕುಟುಂಬಕ್ಕೆ ಕೊರೊನಾದ ಸೌಮ್ಯ ರೂಪದ ಲಕ್ಷಣಗಳು ಕಾಣಿಸಿಕೊಂಡವು. ಹಾಗಾಗಿ ಸಹೋದರ ರಾಜು ಮತ್ತು ಇತರೆ ಸದಸ್ಯರು ಮನೆಯಲ್ಲೇ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.