ADVERTISEMENT

ಮದುವೆ ರಹಸ್ಯ ಬಿಚ್ಚಿಟ್ಟ ಅನುಷ್ಕಾ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:45 IST
Last Updated 17 ಜುಲೈ 2019, 19:45 IST
ಅನುಷ್ಕಾ ಶರ್ಮಾ–ವಿರಾಟ್‌ ಕೊಹ್ಲಿ
ಅನುಷ್ಕಾ ಶರ್ಮಾ–ವಿರಾಟ್‌ ಕೊಹ್ಲಿ   

ಕ್ರಿಕೆಟ್‌ ಸ್ಟಾರ್‌ ವಿರಾಟ್ ಕೊಹ್ಲಿ ಅವರೊಂದಿಗಿನ ವಿವಾಹ ಸಂಬಂಧಿ ವಿಷಯಗಳ ಮೇಲೆನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತುಂಬ ಮನಬಿಚ್ಚಿ ಮಾತನಾಡಿದ್ದಾರೆ. ‘ಪ್ರೇಕ್ಷಕರು ನಮ್ಮನ್ನು ತೆರೆಯ ಮೇಲೆ ನೋಡಲು ಇಷ್ಟಪಡುತ್ತಾರೆ. ಸಿನಿಮಾ ನೋಡುವ ಸಂದರ್ಭದಲ್ಲಿ ನಮ್ಮ ಸ್ವಂತ ಜೀವನದ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ನಟ ಅಥವಾ ನಟಿಗೆ ಮದುವೆಯಾಗಿದೆಯಾ, ತಾಯಿ ಅಥವಾ ತಂದೆಯಾಗಿದ್ದಾರಾ? ಎನ್ನುವುದು ಕೂಡ ಮುಖ್ಯ ಅಲ್ಲ. ಇದನ್ನೆಲ್ಲಾ ಮೊದಲು ನಾವು ನಮ್ಮ ತಲೆಯಿಂದ ತೆಗೆಯಬೇಕು. ನಾನು 29 ವರ್ಷಕ್ಕೆ ಮದುವೆಯಾದೆ. ನಟಿಯಾಗಿ ಯೋಚಿಸಿದರೆ ಇದು ಸಣ್ಣ ವಯಸ್ಸು. ಆದರೂ ನಾನು ಹಿಂದೆ ಸರಿಯಲಿಲ್ಲ. ಯಾಕೆಂದರೆ ನಾನು ಪ್ರೀತಿಯಲ್ಲಿದ್ದೆ. ಮದುವೆ ಅನ್ನುವುದು ನೈಸರ್ಗಿಕವಾದದ್ದು ಅಷ್ಟೇ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

‘ನಮ್ಮ ಸ್ಟಾರ್ ಪಟ್ಟವನ್ನು ಯಾವತ್ತೂ ತಲೆಗೆ ಹಚ್ಚಿಕೊಂಡಿಲ್ಲ. ಇದರಿಂದಾಗಿಯೇ ದಾಂಪತ್ಯ ಜೀವನ ಚೆನ್ನಾಗಿದೆ. ವಿರಾಟ್ ಅವರ ಪ್ರಾಮಾಣಿಕತೆಯನ್ನೂ ನಾನು ಮೆಚ್ಚುತ್ತೇನೆ. ಅವರಿಗೂ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದೆ. ಇಬ್ಬರೂ ನಮ್ಮ ವೃತ್ತಿಜೀವನ ಹಾಗೂ ದಾಂಪತ್ಯ ಎರಡಕ್ಕೂ ಸಮನಾದ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಪ್ರತಿಯೊಂದು ವಿಷಯವನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತೇವೆ. ಯಾವುದನ್ನೂ ಮುಚ್ಚಿಡುವ ಮನೋಭಾವ ಇಬ್ಬರಿಗೂ ಇಲ್ಲ. ನನ್ನ ಜೀವನದಲ್ಲಿ ವಿರಾಟ್ ಪಾತ್ರ ದೊಡ್ಡದು. ಅವರನ್ನು ಭೇಟಿಯಾದ ಸಂದರ್ಭವನ್ನು ನೆನೆದು ಈಗಲೂ ಖುಷಿಪಡುತ್ತೇನೆ’ ಎಂದಿದ್ದಾರೆ. ಇತ್ತೀಚೆಗೆ ಶಾರುಕ್‌ಖಾನ್ ಅಭಿನಯದ ‘ಜೀರೊ’ ಸಿನಿಮಾದಲ್ಲಿ ಅನುಷ್ಕಾ ಅಭಿನಯಿಸಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT