ಪೃಥ್ವಿ ಅಂಬಾರ್ ನಟನೆಯ ‘ಕೊತ್ತಲವಾಡಿ’ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದ ನಟ ಯಶ್ ತಾಯಿ ಪುಷ್ಪ ಅರುಣ್‌ಕುಮಾರ್ ಇದೀಗ ಸಿನಿಮಾ ವಿತರಣೆಯ ವಲಯ ಪ್ರವೇಶಿಸಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ ನಟನೆಯ ತೆಲುಗು ಸಿನಿಮಾ ‘ಘಾಟಿ’ಯನ್ನು ಪುಷ್ಪ ಅರುಣ್‌ಕುಮಾರ್ ಕರ್ನಾಟಕದಲ್ಲಿ ವಿತರಣೆ ಮಾಡಲಿದ್ದಾರೆ. ಈ ಸಿನಿಮಾವನ್ನು ಕ್ರಿಶ್ ಜಗರ್ಲಾಮುಡಿ ನಿರ್ದೇಶಿಸಿದ್ದು, ಯುವಿ ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ. ತಮಿಳು, ತೆಲುಗಿನಲ್ಲಿ ಈ ಸಿನಿಮಾ ತೆರೆಕಾಣುತ್ತಿದೆ. ಪಿಎ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಧರ್ ಕೃಪ ಕಂಬೈನ್ಸ್ ಮೂಲಕ ಈ ಸಿನಿಮಾ ಸೆ.5ರಂದು ತೆರೆಕಾಣಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪುಷ್ಪ, ‘ಅನುಷ್ಕಾ ನಮ್ಮ ಮನೆ ಮಗಳು ಇದ್ದ ಹಾಗೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಿನಿಮಾಗಳ ವಿತರಣೆಯನ್ನು ಮುಂದುವರಿಸಲಿದ್ದೇನೆ. ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಘಾಟಿ’ ಸಿನಿಮಾ ತೆರೆಕಾಣಲಿದೆ. ನಾನೊಬ್ಬಳೇ ಈ ಸಿನಿಮಾದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಮೊದಲು ತೆಲುಗು ಭಾಷೆಯ ಸಿನಿಮಾವನ್ನು ವಿತರಣೆಗೆ ತೆಗೆದುಕೊಂಡಿದ್ದೇನೆ. ಇದರ ಯಶಸ್ಸಿನ ಆಧಾರದ ಮೇಲೆ ಕನ್ನಡದಲ್ಲಿ ಡಬ್ ಆದ ಸಿನಿಮಾವನ್ನು ತೆಗೆದುಕೊಳ್ಳುತ್ತೇವೆ. ‘ಕೊತ್ತಲವಾಡಿ’ ಸಿನಿಮಾಗೆ ಚಿತ್ರಮಂದಿರಗಳ ಸಮಸ್ಯೆ ನಮಗೆ ಆಯಿತು. ಆ ಸಂದರ್ಭದಲ್ಲೇ ಮುಂದಿನ ದಿನಗಳಲ್ಲಿ ನಾನೇ ವಿತರಣೆಯ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದಿದ್ದೆ. ಹೀಗಾಗಿ ಈ ಹೆಜ್ಜೆ ಇಟ್ಟಿದ್ದೇನೆ. ಹೆಣ್ಣುಮಕ್ಕಳಿಗೆ
ಪ್ರೋತ್ಸಾಹಕೊಟ್ಟು ಈ ರೀತಿ ಸಿನಿಮಾ ಮಾಡಿದ್ದಾರೆ. ಇದಕ್ಕೆ ಹೆಮ್ಮೆಪಡಬೇಕು’ ಎಂದರು.
‘ಆಂಧ್ರ ಪ್ರದೇಶ ಮತ್ತು ಒರಿಸ್ಸಾದ ಗಡಿ ಪ್ರದೇಶದಲ್ಲಿ ನಡೆಯುವ ಕಥೆ ಇದು. ಅಲ್ಲಿನ ಘಟ್ಟದ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ‘ಘಾಟಿ’ ಎಂದು ಕರೆಯಲಾಗುತ್ತದೆ. ಅವರ ವಿಶೇಷತೆಯೆಂದರೆ, ಒಬ್ಬೊಬ್ಬ ಘಾಟಿ 120 ರಿಂದ 150 ಕೆ.ಜಿ. ತೂಕ ಎತ್ತಿಕೊಂಡು ಬೆಟ್ಟ ಹತ್ತುತ್ತಾರೆ. ಅವರನ್ನು ಗಾಂಜಾ ಸಾಗಿಸುವುದಕ್ಕೆ ಬಳಸಿಕೊಳ್ಳಲಾಗುತ್ತದೆ. ಅವರ ಕಥೆಯನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಅನುಷ್ಕಾ ಇಲ್ಲಿ ‘ಶೀಲಾವತಿ’ ಎಂಬ ಪಾತ್ರ ಮಾಡಿದ್ದಾರೆ. ‘ದೇಸಿರಾಜು’ ಎಂಬ ಪಾತ್ರದಲ್ಲಿ ವಿಕ್ರಮ್ ಪ್ರಭು ನಟಿಸಿದ್ದಾರೆ’ ಎಂದರು ನಿರ್ದೇಶಕ ಕ್ರಿಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.