ADVERTISEMENT

ಪ್ರೇಕ್ಷಕರ ಮನದಲ್ಲಿ ಪ್ರಶ್ನೆಗಳನ್ನು ಬಿತ್ತುವ ‘ಅನುತ್ತರ‘

ಅಭಿಲಾಷ್ ಎಸ್‌.ಡಿ.
Published 26 ಫೆಬ್ರುವರಿ 2019, 6:41 IST
Last Updated 26 ಫೆಬ್ರುವರಿ 2019, 6:41 IST
‘ಅನುತ್ತರ’ ಸಿನಿಮಾದ ದೃಶ್ಯ.
‘ಅನುತ್ತರ’ ಸಿನಿಮಾದ ದೃಶ್ಯ.   

ನಾವು ನೋಡಿದ ಸಿನಿಮಾ

–––

ಸಿನಿಮಾ: ಅನುತ್ತರ
ನಿರ್ದೇಶನ: ಗಾರ್ಗಿ ಕಾರೆಹಕ್ಲು
ನಿರ್ಮಾಣ: ನಿಡಸಾಲೆ ಎಂ. ಪುಟ್ಟಸ್ವಾಮಯ್ಯ
ಸಂಗೀತ ನಿರ್ದೇಶನ: ವಿಠಲ್‌ ರಂಗಧೊಳ್‌
ಪಾತ್ರವರ್ಗ: ನಾಗೇಶ್‌, ನಾಗನಾಥ್‌, ಅಶ್ವಿನಿ, ವಿಕ್ರಮ್‌ ಸಾಗರ್‌

ADVERTISEMENT

**

ಉಳ್ಳವರ ದಬ್ಬಾಳಿಕೆ ಮುಗಿಯುವುದೆಂದು? ರಾಜಕಾರಣಿಗಳ ದುರಾಡಳಿ ಕೊನೆಗಾಣುವುದು ಯಾವಾಗ? ಎಡ–ಬಲ ವರ್ಗಗಳ ದ್ವಂದ್ವ ಮನಸ್ಥಿತಿ ಬದಲಾಗುವುದು ಯಾವಾಗ? ಶಾಸ್ತ್ರವೇಕೆ? ಸಂಸಾರವೇಕೆ? ಜಾತಿ ಅಳಿಯುವುದಿಲ್ಲವೇ... ಹೀಗೆ ಹಲವು ಪ್ರಶ್ನೆಗಳನ್ನು ತೆರೆದಿಡುತ್ತಾ ವಾಸ್ತವ ಸ್ಥಿತಿಗತಿಯ ಸುತ್ತಲೇ ಸುತ್ತುತ್ತದೆ ‘ಅನುತ್ತರ’.

ಪ್ರತಿ ಪ್ರಶ್ನೆಯ ಉತ್ತರ ಹಾಗೂ ಪರಿಹಾರವನ್ನು ಪ್ರೇಕ್ಷಕರ ಆಲೋಚನೆಗೇ ಬಿಡುವ ಬುದ್ದಿವಂತಿಕೆ ತೋರಿರುವ ನಿರ್ದೇಶಕರು ಎಡ–ಬಲಗಳ ಅಂಟಿನಿಂದ ನಾಜೂಕಾಗಿ ನುಣಚಿಕೊಂಡಿದ್ದಾರೆ.‌

ಮಲೆನಾಡಿದ ದಟ್ಟಾರಣ್ಯದ ಮಧ್ಯೆ ಇಳಿಸಂಜೆಯಲ್ಲಿ ಕಥೆಗಾರನೊಬ್ಬನ ಕಾರು ಕೆಟ್ಟು ನಿಲ್ಲುವುದರೊಂದಿಗೆ ಸಿನಿಮಾ ಶುರುವಾಗುತ್ತದೆ. ಒಂದೇ ಸಮನೆ ಎಡಬಿಡದೆ ಸುರಿಯುತ್ತಿದ್ದ ಮಳೆಯಲ್ಲಿ ಅಲ್ಲಿಗೆ ತನ್ನ ಸಹಚರನೊಂದಿಗೆ ಬರುವ ಮಂಜಪ್ಪಯ್ಯ ಎನ್ನುವ ಹಿರಿಯರು ಆತನನ್ನು ಮನೆಗೆ ಕರೆದೊಯ್ದು ಆಶ್ರಯ ನೀಡುತ್ತಾರೆ. ಅದೇ ರಾತ್ರಿ ಇನ್ನಿಬ್ಬರು ಯುವಕರು(ಸತೀಶ, ಪ್ರಕಾಶ) ಪೊಲೀಸರ ಕಣ್ತಪ್ಪಿಸಿಕೊಂಡು ಬಂದು ಅದೇ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಆ ಮನೆಗೆಯುವಕರು ಬರಬಹುದು ಎನ್ನುವ ಲೆಕ್ಕಾಚಾರದಲ್ಲಿಪೊಲೀಸರೂ ಬಂದು ಉಳಿಯುತ್ತಾರೆ.

ಆ ರಾತ್ರಿ ಪರಸ್ಪರರ ಸಂಭಾಷಣೆ ಮುಂದುವರಿದಂತೆ, ಒಬ್ಬೊಬ್ಬರ ಹಿನ್ನಲೆಯೂ ತೆರೆದುಕೊಳ್ಳುತ್ತವೆ. ಕಥೆಗಾರ ಮಾತು ಮುಂದುವರಿಸುತ್ತಾನೆ. ಮದುವೆಯಾದರೆ ಬಾವಿಯಲ್ಲಿನ ಕಪ್ಪೆಯಂತಾಗುತ್ತೇನೆಂದು ಭಾವಿಸಿ ಮದುವೆಯಾಗುವ ಆಲೋಚನೆಯನ್ನೇ ಬಿಟ್ಟಿದ್ದೆ. ಆದರೆ ಬದುಕಿನ ಪ್ರತಿ ಹಂತವನ್ನೂ ದಾಟಬೇಕು ಎಂಬುದುನಿಧಾನವಾಗಿ ಅರ್ಥವಾಯಿತು. ಜೋತಿಷ್ಯ ನೋಡಿ ಅಪ್ಪ–ಅಮ್ಮನೇ ಹೇಳಿದ ಹುಡುಗಿಯನ್ನು ಮದುವೆಯಾದೆ. ಅವಳಿಗೆ ನನ್ನಪ್ಪ ಅಮ್ಮನ ಮೇಲೆ ಒಲವಿಲ್ಲ. ಶಾಸ್ತ್ರದ ಲೆಕ್ಕಾಚಾರ ಫಲಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾ, ಅಪ್ಪ ಅಮ್ಮನೂ ನನ್ನಿಂದ ದೂರಾಗಿದ್ದಾರೆ. ಸಂಪಾದನೆಯಿದ್ದರೂ ನಾ ಅಂದುಕೊಂಡಂತೆ ಬದುಕಲು ಸಾಧ್ಯವಾಗಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾನೆ.

ಜೊತೆಜೊತೆಗೆ ಸತೀಶನ ಕಥೆಯೂ ಬಿಚ್ಚಿಕೊಳ್ಳುತ್ತದೆ. ಹೋರಾಟಗಾರನಾಗಿದ್ದ ಅಪ್ಪನ ಕೊಲೆಯಾಗಿದ್ದರೂ ವ್ಯವಸ್ಥೆ ವಿರುದ್ಧದ ಆತನ ದ್ವನಿ ಅಡಗುವುದಿಲ್ಲ. ಸ್ಥಳೀಯ ರಾಜಕೀಯ ನಾಯಕನ ವಿರುದ್ಧ ಜನರನ್ನು ಸಂಘಟಿಸುತ್ತಾನೆ. ಸತೀಶನ ಬೆಳವಣಿಗೆಯಿಂದ ಗಾಬರಿಯಾದ ರಾಜಕಾರಣಿ ಆತನ ಅಮ್ಮನಿಗೆ ಬೆದರಿಕೆ ಹಾಕುತ್ತಾನೆ. ಗಂಡನ ಹಾಗೆ ಮಗನನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸುತ್ತಾನೆ. ಮಗ ಮಾತು ಕೇಳುವುದಿಲ್ಲ. ಅಮ್ಮ ನದಿಗೆ ಹಾರಿಬಿಡುತ್ತಾಳೆ. ರಾಜಕಾರಣಿಯ ವಿರುದ್ಧ ಸತೀಶನ ಸಿಟ್ಟು ಏರುತ್ತದೆ. ಬುದ್ದಿಕಲಿಸಲು ಹೋಗಿ ಆವೇಶದಲ್ಲಿ ಕೊಲೆಗೆ ಪ್ರಯತ್ನಿಸುತ್ತಾನೆ. ಅಪಾಯಕ್ಕೆ ಸಿಕ್ಕಿಕೊಳ್ಳುತ್ತಾನೆ. ಪೊಲೀಸರಿಗೆ ದೂರು ನೀಡುವ ರಾಜಕಾರಣಿ ಸಂಕಟದಿಂದ ಪಾರಾಗಿ ಸಂಭ್ರಮಿಸುತ್ತಾನೆ.

ಅವನ ಬೆನ್ನುಬಿದ್ದಿದ್ದ ಪೊಲೀಸ್‌ ಕೂಡ ನೋವು ತೋಡಿಕೊಳ್ಳುತ್ತಾನೆ.ಸರ್ಕಾರಿ ಕೆಲಸವಿಲ್ಲದಿದ್ದರೆ ತಾನು ಅಪ್ಪ–ಅಮ್ಮನೊಂದಿಗೆ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿರುತ್ತಿದ್ದೆ. ಸ್ವಲ್ಪ ಸಂಪಾದನೆ ಮಾಡಿಕೊಂಡು ಬಳಿಕ ಈ ಕೆಲಸವನ್ನು ಬಿಟ್ಟುಬಿಡೋಣ ಎಂದುಕೊಂಡಿದ್ದೆ. ಸಂಸಾರವಾದ ಮೇಲೆ ಜವಾಬ್ದಾರಿ ಹೆಚ್ಚಾಯಿತು. ಇದೀಗ ನಿವೃತ್ತಿಯ ಅಂಚಿಗೆ ಬಂದು ನಿಂತಿದ್ದೇನೆ ಎನ್ನುತ್ತಾ, ಯಾವ ಬಂಧವನ್ನಾದರೂ ಅಷ್ಟು ಸುಲಭದಲ್ಲಿ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸಾರುತ್ತಾನೆ.

ಹೀಗೆಯೇ ಆಶ್ರಯವನ್ನರಸಿ ಬಂದಿದ್ದವನೊಬ್ಬ ಹಲವು ವರ್ಷಗಳ ಹಿಂದೆ ತನ್ನ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದರೂ ಅತಿಥಿಗಳನ್ನು ಸತ್ಕರಿಸುವ ಕಾರ್ಯ ಮುಂದುವರಿಸಿರುತ್ತಾನೆಮಂಜಪ್ಪಯ್ಯ. ‘ಯಾರನ್ನು ದೂರಲಿ, ಹಿಂಸೆಯಿಂದ ಯಾವ ಪರಿಹಾರವೂ ಇಲ್ಲ. ಎಡ ಹಾಗೂ ಬಲದ ಚಿಂತನೆಗಳೆರಡೂ ದೇಶವನ್ನು ಬಾಧಿಸುತ್ತಿರುವ ರೋಗಗಳು. ಅವು ಕೊನೆಯಾಗಬೇಕು. ಎಲ್ಲೆಡೆ ಶಾಂತಿ ಮೂಡಬೇಕು. ಅಹಿಂಸೆ ನೆಲಸಬೇಕು’ ಎನ್ನುತ್ತಾ ಗಾಂಧಿತತ್ವವನ್ನು ಹರಿಬಿಡುತ್ತಾನೆ.

ಯಾರೊಬ್ಬರ ಬದುಕಿನ ದ್ವಂದ್ವಗಳೂ ಪರಿಹಾರವಾಗುವುದಿಲ್ಲ. ಪ್ರಶ್ನೆಗಳನ್ನು ಉಳಿಸಿಯೇ ಸಿನಿಮಾ ಮುಗಿಯುತ್ತದೆ. ಪ್ರೇಕ್ಷಕರ ಆಲೋಚನೆಯಲ್ಲಿ ಬಗೆಬಗೆಯ ರೂಪ ಪಡೆದುಕೊಳ್ಳುವ ಸಿನಿಮಾ ಥಿಯೆಟರ್‌ನಿಂದ ಹೊರಬಂದ ಮೇಲೂ ಮನದಲ್ಲಿ ಉಳಿಯುತ್ತದೆ.

ಮಲೆನಾಡಿನಪ್ರಕೃತಿ ಸೌಂದರ್ಯವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಉತ್ತಮ ಗುಣಮಟ್ಟದ ಕ್ಯಾಮರಾ ಬಳಸಿದ್ದರೆ ಮತ್ತಷ್ಟು ಸೊಗಸಾಗಿರುತ್ತಿತ್ತು. ಹಿನ್ನಲೆ ಸಂಗೀತ ಉತ್ತಮವಾಗಿದೆ. ಕಥೆ, ಚಿತ್ರಕತೆಪರಿಣಾಮಕಾರಿಯಾಗಿದ್ದರೂ, ಪಾತ್ರ ಪೋಷಣೆಯಲ್ಲಿ ನಾಟಕೀಯತೆ ಎದ್ದುಕಾಣುವುದು ಸಿನಿಮಾದ ದೌರ್ಬಲ್ಯ. ತಾಂತ್ರಿಕವಾಗಿಯೂ ಚಿತ್ರದ ಗುಣಮಟ್ಟ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.