ADVERTISEMENT

ಶೃತಿಯ ಅದೃಷ್ಟದ ‘ಮಿಸ್ಟರಿ’ಯ ಹಿಸ್ಟರಿ

ಕೆ.ಎಂ.ಸಂತೋಷಕುಮಾರ್
Published 10 ಡಿಸೆಂಬರ್ 2020, 19:30 IST
Last Updated 10 ಡಿಸೆಂಬರ್ 2020, 19:30 IST
ಶ್ರುತಿ ಶಿವನಗೌಡ
ಶ್ರುತಿ ಶಿವನಗೌಡ   

ಬಣ್ಣದ ಲೋಕದಲ್ಲಿ ಟ್ಯಾಲೆಂಟ್ ಮುಖ್ಯ. ಆಗ ಅವಕಾಶಗಳು ಬರುತ್ತವೆ. ಜತೆಗೆ ಲಕ್‌, ನಮ್ಮ ಪರಿಶ್ರಮ ಇರಬೇಕು ಎನ್ನುತ್ತಾರೆ ಚಂದನವನಕ್ಕೆ ಹೊಸದಾಗಿ ಪ್ರವೇಶಿಸಿರುವ ಉತ್ತರ ಕರ್ನಾಟಕದ ನಟಿ ಶೃತಿ ಶಿವನಗೌಡ.

ಕನ್ನಡದ ಧಾರಾವಾಹಿ ‘ಮಾನಸ ಸರೋವರ’ ಮತ್ತು ಬಹುಭಾಷಾ ನಟಿ ಖುಷ್ಬು ನಿರ್ಮಾಣದ ‘ಲಕ್ಷ್ಮಿ ಸ್ಟೋರ್ಸ್‌’ತಮಿಳು ಧಾರಾವಾಹಿಯ ಬೆಡಗಿ ನಟಿ ಶೃತಿ ಶಿವನಗೌಡ ಈಗ ಬೆಳ್ಳಿತೆರೆಗೆ ದಾಂಗುಡಿ ಇಟ್ಟಿದ್ದಾರೆ. ಚಂದನವನಕ್ಕೆ ಕಾಲಿಟ್ಟ ಒಂದೇ ವರ್ಷದಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸುವ ಭರ್ಜರಿ ಅವಕಾಶಗಳನ್ನು ಬೆಳಗಾವಿಯ ಈ ಅಂದಗಾತಿ ಬಾಚಿಕೊಂಡಿದ್ದಾರೆ.

‘ಮಾನಸ ಸರೋವರ’ದಲ್ಲಿನ ಶೃತಿಯ ನಟನೆಯನ್ನು ಮನಸಾರೆ ಮೆಚ್ಚಿದ ಖುಷ್ಬು ‘ಲಕ್ಷ್ಮಿ ಸ್ಟೋರ್ಸ್‌’ ಸೀರಿಯಲ್‌ನಲ್ಲಿ ನಟಿಸುವ ಅವಕಾಶವನ್ನು ಇವರಿಗೆ ನೀಡಿದರು. ಬೆಳ್ಳಿ ತೆರೆಗೆ ಜಿಗಿಯಲು ‘ಲಕ್ಷ್ಮಿ ಸ್ಟೋರ್ಸ್‌’ ಚಿಮ್ಮು ಹಲಗೆಯಾಯಿತು.

ADVERTISEMENT

ಈಗ ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಶೃತಿ, ತಬಲಾ ನಾಣಿ ಪ್ರಮುಖ ಪಾತ್ರ ನಿಭಾಯಿಸಿರುವ ‘ಮಿಸ್ಟರಿ ಆಫ್‌ ಮಂಜುಳಾ’ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಚಿತ್ರ ಪೂರ್ಣಗೊಂಡಿದ್ದು ತೆರೆಗೆ ಬರುವ ಹೊಸ್ತಿಲಿನಲ್ಲಿದೆ. ಇದರ ಬೆನ್ನಿಗೆ ಮತ್ತೊಂದು ಮಹಿಳಾ ಪ್ರಧಾನ ಚಿತ್ರ ‘ಚಿ.ಸೌ.ಕನ್ಯಾಕುಮಾರಿ’ಗೂ ಶೃತಿ ಬಣ್ಣ ಹಚ್ಚಿದ್ದಾರೆ. ಇನ್ನು ಮೂರನೇ ಚಿತ್ರವಾಗಿ ‘ಬ್ಲಡ್‍ಹ್ಯಾಂಡ್’ ಒಪ್ಪಿಕೊಂಡಿದ್ದು, ಕೆಳವರ್ಗದ ಯುವತಿಯ ಆಸೆ, ಆಕಾಂಕ್ಷೆಗಳು ಹಾಗೂ ನಿತ್ಯ ಜೀವನದ ಹೋರಾಟ ಪ್ರತಿಬಿಂಬಿಸುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದಲ್ಲದೇ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೆಸರಿಡದ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಶೃತಿ ಮಾತಿಗಾರಂಭಿಸಿದರು.

ಪಾತ್ರಗಳತ್ತ ಮಾತು ಹೊರಳಿಸಿದ ಶೃತಿ, ‘ಮಿಸ್ಟರಿ ಆಫ್‌ ಮಂಜುಳಾ’ ಚಿತ್ರದಲ್ಲಿ ತಬಲಾ ನಾಣಿಯವರದು ಜಿಪುಣ ತಂದೆಯ ಪಾತ್ರ. ಅಂಥವರ ಮಗಳ ಪಾತ್ರ ನನ್ನದು. ಮಗಳನ್ನು ಬೆಂಬಲಿಸುವ ತಾಯಿ ಪಾತ್ರದಲ್ಲಿ ಲಕ್ಷ್ಮಿ ಸಿದ್ದಯ್ಯ ಇದ್ದಾರೆ. ಇವರ ಜತೆಗೆ ನಾನು ಹೇಗೆಜೀವಿಸುವೆ ಎನ್ನುವುದೇ ಚಿತ್ರದ ಕಥೆ.

‘ಮಿಸ್ಟರಿ ಆಫ್‌ ಮಂಜುಳಾ’ ಚಿತ್ರ ಮುಗಿಸಿದ ನಂತರ ‘ಚಿ.ಸೌ.ಕನ್ಯಾಕುಮಾರಿ’ ಚಿತ್ರದಲ್ಲಿ ಲೀಡ್‌ ರೋಲ್‌ ಸಿಕ್ಕಿತು. ಇದರಲ್ಲಿ ಕೂಲಿಕಾರ್ಮಿಕ ತಂದೆ–ತಾಯಿಯ ಮಗಳ ಪಾತ್ರ ನನ್ನದು. ಟೀನೇಜ್‌ನಿಂದ ಮದುವೆಯಾಗುವ ಹಂತದವರೆಗಿನ ಮೂರು ಶೇಡ್‌ಗಳಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ಮೂರು ಹಾಡುಗಳು ತುಂಬಾ ಚೆನ್ನಾಗಿವೆ. ಅನನ್ಯ ಭಟ್‌ ಕೂಡ ಹಾಡಿದ್ದಾರೆ. ‘ಸೋಜುಗದ ಸೂಜಿಮಲ್ಲಿಗೆ’ಯ ಹಾಡನ್ನು ಈ ಚಿತ್ರದ ಹಾಡು ನೆನಪಿಸಲಿದೆ’ ಎನ್ನುವುದು ಶೃತಿ ಅನಿಸಿಕೆ.

‘ಬ್ಲಡ್‌ ಹ್ಯಾಂಡ್‌’ ಚಿತ್ರದತ್ತ ಮಾತು ಹೊರಳಿದಾಗ, ‘ಬಾನು ವೆಡ್ಸ್‌ ಭುವಿ’ ಚಿತ್ರ ನಿರ್ದೇಶಿಸಿದ್ದ ಆದಿ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಹೊಸ ನಟ ಸುಮಿತ್‌ ಜತೆಗೆ ತೆರೆ ಹಂಚಿಕೊಂಡಿರುವೆ. ‘ದುನಿಯಾ’ ಚಿತ್ರದಂತೆ ಒಂದು ರಗಡ್‌ ಕಥಾಹಂದರ ಇದರಲ್ಲಿದೆ. ಸಾಮಾನ್ಯ ಕುಟುಂಬದ ಯುವತಿಯ ಪಾತ್ರ ನನ್ನದಾಗಿದ್ದರೂ, ಮಧ್ಯಂತರ ಹಲವು ತಿರುವು ಪಡೆಯುವ ಕುತೂಹಲದ ಕಥಾಹಂದರವಿದು’ ಎನ್ನುವುದು ಶೃತಿ ಅವರ ಮಾತು.

‘ನಾಯಕಿ ಪ್ರಧಾನಚಿತ್ರವಿದ್ದರೆ ಅದಕ್ಕೆ ಶ್ರುತಿ ಶಿವನಗೌಡ ಅವರನ್ನೇ ಆರಿಸಿಕೊಳ್ಳಿ ಎನ್ನುವ ಮಾತು ನಿರ್ದೇಶಕರಿಂದ ಕೇಳಿಬರುವಂತಹ ಮಟ್ಟಕ್ಕೆ ನಾನು ಬೆಳೆಯಬೇಕು’ ಎಂದು ಶೃತಿ ತಮ್ಮ ಕನಸು ಮತ್ತು ಗುರಿ ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.