ADVERTISEMENT

ಕಥೆ ಚೆನ್ನಾಗಿದ್ದರಷ್ಟೇ ಪಾತ್ರ ಒಪ್ಪಿಕೊಳ್ಳುವೆ: ನಟಿ ಅಶ್ವಿನಿ ಚಂದ್ರಶೇಖರ್‌ ಮಾತು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 23:30 IST
Last Updated 6 ಆಗಸ್ಟ್ 2025, 23:30 IST
ಅಶ್ವಿನಿ ಚಂದ್ರಶೇಖರ್‌
ಅಶ್ವಿನಿ ಚಂದ್ರಶೇಖರ್‌   

ವಿಜಯ ರಾಘವೇಂದ್ರ ಹಾಗೂ ಅಶ್ವಿನಿ ಚಂದ್ರಶೇಖರ್‌ ಜೋಡಿಯಾಗಿ ನಟಿಸಿರುವ ‘ರಿಪ್ಪನ್‌ ಸ್ವಾಮಿ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಆಗಸ್ಟ್‌ 29ರಂದು ಚಿತ್ರ ತೆರೆಗೆ ಬರಲಿದ್ದು, ಇದರಲ್ಲಿ ವೈದ್ಯೆಯಾಗಿ ಕಾಣಿಸಿಕೊಂಡಿರುವ ಅಶ್ವಿನಿ ತಮ್ಮ ಸಿನಿಪಯಣದ ಕುರಿತು ಮಾತನಾಡಿದ್ದಾರೆ.

‘ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರ ಪತ್ನಿಯಾಗಿ ಮಂಗಳಾ ಎಂಬ ಪಾತ್ರ ನಿರ್ವಹಿಸಿದ್ದೇನೆ. ವೃತ್ತಿಯಿಂದ ವೈದ್ಯೆ. ಜತೆಗೆ ಎಸ್ಟೇಟ್‌ ಪ್ರದೇಶದಲ್ಲಿ ವಾಸಿಸುವ ಗೃಹಿಣಿಯಾಗಿರುತ್ತೇನೆ. ಇವತ್ತಿನ ತಲೆಮಾರಿನ ಗೃಹಿಣಿಯರನ್ನು ಪ್ರತಿನಿಧಿಸುವ ಪಾತ್ರ ಎನ್ನಬಹುದು. ಇದೊಂದು ಕಂಟೆಂಟ್‌ ಆಧಾರಿತ ಸಿನಿಮಾ. ಹೀಗಾಗಿ ಕಥೆ ಎಲ್ಲರ ಜೀವನದಲ್ಲಿ ನಡೆಯಬಹುದಾದ ಕಥೆಯಂತಿದೆ. ಮಲಯಾಳ ಸಿನಿಮಾಗಳ ಬಗ್ಗೆ ಯಾವಾಗಲೂ ಮಾತಾಡುತ್ತೇವೆ. ಅದೇ ರೀತಿಯ ಚಿತ್ರ ಹಾಗೂ ಪಾತ್ರ ಪೋಷಣೆ ಇಲ್ಲಿದೆ’ ಎಂದು ಮಾತು ಪ್ರಾರಂಭಿಸಿದರು ಅಶ್ವಿನಿ.

‘ನಾಯಕನಿಗೆ ಇರುವಷ್ಟೇ ಪ್ರಾಮುಖ್ಯ ನನ್ನ ಪಾತ್ರಕ್ಕೂ ಇದೆ. ಹೀಗಾಗಿ ಒಂದು ಸುದೀರ್ಘ ವಿರಾಮದ ಬಳಿಕ ಈ ಸಿನಿಮಾ ಒಪ್ಪಿಕೊಂಡೆ. ‘ಗೊಂಬೆಗಳ ಲವ್‌’, ‘ಆಕ್ಟೋಪಸ್’, ‘ಪ್ರೇಮ ಪಲ್ಲಕ್ಕಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದೆ. ನಂತರ ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿರಲಿಲ್ಲ. ಚಿತ್ರ ಮುಗಿದ ಮೇಲೆ ‘ಮಂಗಳಾ’ ಪಾತ್ರ ನೆನಪಿನಲ್ಲಿ ಉಳಿಯುತ್ತದೆ ಎಂಬ ಭರವಸೆಯಿದೆ. ಚಿಕ್ಕಮಗಳೂರಿನ ಎಸ್ಟೇಟ್‌ ಒಂದರಲ್ಲಿ ನಡೆದ ನೈಜ ಘಟನೆಯನ್ನೇ ನಿರ್ದೇಶಕರು ಚಿತ್ರವಾಗಿಸಿದ್ದಾರೆ. ನಾನು ಸುಮ್ಮನೆ ಬಂದು ಹೋಗುವ, ಹಾಡಿನಲ್ಲಿ ಕುಣಿದು ಹೋಗುವ ನಾಯಕಿಯ ಪಾತ್ರಗಳನ್ನು ಒಪ್ಪಿಕೊಳ್ಳಲಾರೆ. ಕಂಟೆಂಟ್‌ ಇದ್ದರಷ್ಟೇ ಪಾತ್ರ ಒಪ್ಪಿಕೊಳ್ಳುವೆ. ನಟಿಸಿದ ತೃಪ್ತಿ ಸಿಗಬೇಕು’ ಎನ್ನುತ್ತಾರೆ ಅವರು.

ADVERTISEMENT

‘ನಾನು ನೃತ್ಯಗಾರ್ತಿ. ಜತೆಗೆ ಮಾಡೆಲ್‌ ಆಗಿದ್ದೆ. ಓದುತ್ತಿರುವಾಗಲೇ ನಟನೆಗೆ ಬಂದೆ. ಆಗ ಇದನ್ನು ವೃತ್ತಿಯಾಗಿ ತೆಗೆದುಕೊಂಡಿರಲಿಲ್ಲ. ನಟನೆಯನ್ನೇ ವೃತ್ತಿಯಾಗಿಸಿಕೊಂಡು ಐದು ವರ್ಷಗಳಾಯ್ತು. ನನಗೆ ಕೆಲಸ ಮಾಡುವ ತಂಡ ಕೂಡ ಬಹಳ ಪ್ರಮುಖವಾಗುತ್ತದೆ. ಹೊಸ ತಂಡಗಳ ಜತೆ ಕೆಲಸ ಮಾಡಿದ್ದೇ ಹೆಚ್ಚು’ ಎಂದರು.

‘ಸದ್ಯ ತಮಿಳು ಮತ್ತು ಮಲಯಾಳದಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದೇನೆ. ಕನ್ನಡದಲ್ಲಿ ಈ ಚಿತ್ರ ಬಿಡುಗಡೆಗಾಗಿ ಕಾಯುತ್ತಿರುವೆ. ತಮಿಳಿನಲ್ಲಿ ರೋಬೊ ಶಂಕರ್‌ ಜತೆಗಿನ ಸಿನಿಮಾ ಕಳೆದು ತಿಂಗಳು ಬಿಡುಗಡೆಗೊಂಡಿದೆ. ಜೀವಿ–3 ಸಿನಿಮಾ ಬಿಡುಗಡೆಗಿದೆ. ಇನ್ನೆರಡು ಸಿನಿಮಾಗಳಲ್ಲಿ ನಟಿಸುತ್ತಿರುವೆ. ಮಲಯಾಳದಲ್ಲಿ ನಿವಿನ್‌ ಪೌಲಿ ಅವರ ಸಿನಿಮಾವೊಂದರಲ್ಲಿ ನಟಿಸುತ್ತಿರುವೆ’ ಎಂದು ತಮ್ಮ ಮುಂದಿನ ಸಿನಿಮಾಗಳ ಮಾಹಿತಿ ನೀಡಿದರು. 

‘ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂಬ ವಿಶ್ವಾಸವಿದೆ. ಆದರೆ ಜನ ನೋಡಿ ಅದನ್ನು ಹೇಳಬೇಕು. ವಿಜಯ ರಾಘವೇಂದ್ರ ಅವರಿಗೆ ಸರಿಹೊಂದುವ ಗಟ್ಟಿಯಾದ ಕಥೆಯನ್ನು ಹೊಂದಿರುವ ಚಿತ್ರವಿದು. ಇಂಥ ಸಿನಿಮಾದಲ್ಲಿ ಕೆಲಸ ಮಾಡಿದ ಖುಷಿಯಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.