ADVERTISEMENT

ಅಕ್ಟೋಬರ್‌ನಿಂದ ಅಕ್ಷಯ್‌ಕುಮಾರ್ ನಟನೆಯ ‘ಅಟ್ರಂಗಿ ರೆ’ ಚಿತ್ರದ ಶೂಟಿಂಗ್‌ ಆರಂಭ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 8:20 IST
Last Updated 27 ಜುಲೈ 2020, 8:20 IST
   

ಕಳೆದ ಮಾರ್ಚ್‌ನಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಸಾರಾ ಅಲಿಖಾನ್‌ ಮತ್ತು ಧನುಶ್‌ ನಟನೆಯ ‘ಅಟ್ರಂಗಿ ರೆ’ ಹಿಂದಿ ಸಿನಿಮಾದ ಮೊದಲ ಹಂತದ ಶೂಟಿಂಗ್‌ ಆರಂಭವಾಗಿತ್ತು. ಆದರೆ, ಕೋವಿಡ್‌–19 ಪರಿಣಾಮ ಚಿತ್ರೀಕರಣ ಸ್ಥಗಿತಗೊಂಡಿತು. ಆನಂದ್‌ ಎಲ್‌. ರೈ ನಿರ್ದೇಶನದ ಇದರ ಶೂಟಿಂಗ್‌ ಅಕ್ಟೋಬರ್‌ನಿಂದ ಮತ್ತೆ ಶುರುವಾಗಲಿದೆಯಂತೆ. ಮಧುರೈನಲ್ಲಿ ಶೂಟಿಂಗ್‌ಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ವಿಭಿನ್ನ ನೆಲೆಗಟ್ಟಿನ ಸಾಂಸ್ಕೃತಿಕ ಪ್ರೇಮಕಥನ ಇದು. 2018ರಲ್ಲಿ ತೆರೆಕಂಡ ‘ಜೀರೊ’ ಚಿತ್ರದ ಬಳಿಕ ಆನಂದ್‌ ರೈ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. 2021ರ ಪ್ರೇಮಿಗಳ ದಿನದಂದು ಸಿನಿಮಾ ಬಿಡುಗಡೆ ಮಾಡುವ ಯೋಜನೆ ನಿರ್ಮಾಪಕರದ್ದು. ಚಿತ್ರೀಕರಣದಲ್ಲಿ ಮತ್ತಷ್ಟು ವಿಳಂಬವಾದರೆ ಮತ್ತೆ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಇದಕ್ಕೆ ಎ.ಆರ್‌. ರೆಹಮಾನ್‌ ಸಂಗೀತ ಸಂಯೋಜಿಸಿದ್ದಾರೆ. ಸಾರಾ ಅಲಿಖಾನ್ ಅವರ ಕೆನ್ನೆಗೆ ಅಕ್ಷಯ್ ಕುಮಾರ್‌ ಮತ್ತು ಧನುಶ್ ‘ಮುತ್ತು’ ನೀಡುತ್ತಿರುವ ಫಸ್ಟ್‌ ಲುಕ್ ಪೋಸ್ಟರ್‌ ಈಗಾಗಲೇ ಬಿಡುಗಡೆಯಾಗಿದೆ.

ಅಂದಹಾಗೆ ಇದು ಧನುಶ್ ನಟನೆಯ 40ನೇ ಸಿನಿಮಾ. 2013ರಲ್ಲಿ ಬಿಡುಗಡೆಯಾಗಿದ್ದ ‘ರಾಂಜನ’ ಸಿನಿಮಾ ಮೂಲಕ ಧನುಶ್ ಬಿಟೌನ್‌ ಪ್ರವೇಶಿಸಿದ್ದರು. ಇದರಲ್ಲಿ ಅವರಿಗೆ ಸೋನಂ ಕಪೂರ್‌ ನಾಯಕಿಯಾಗಿದ್ದರು. 2015ರಲ್ಲಿ ‘ಶಮಿತಾಭ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಅವರು ಯಾವುದೇ ಹಿಂದಿ ಚಿತ್ರದಲ್ಲಿ ನಟಿಸಿರಲಿಲ್ಲ. ಐದು ವರ್ಷಗಳ ಬಳಿಕ ‘ಅಟ್ರಂಗಿ ರೆ’ ಮೂಲಕ ಮತ್ತೆ ಬಾಲಿವುಡ್‌ಗೆ ಮರು ಪ್ರವೇಶ ಮಾಡಿದ್ದಾರೆ.

ADVERTISEMENT

ಪ್ರಸ್ತುತ ಅಕ್ಷಯ್‌ಕುಮಾರ್‌ ‘ಬೆಲ್‌ ಬಾಟಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ವಾಣಿ ಕಪೂರ್ ಜೋಡಿ. ಶೀಘ್ರವೇ, ಇಂಗ್ಲೆಂಡ್‌ನಲ್ಲಿ ಇದರ ಶೂಟಿಂಗ್‌ ಶುರುವಾಗುವ ನಿರೀಕ್ಷೆಯಿದೆ. ಇದಕ್ಕಾಗಿಯೇ ಚಿತ್ರದ ನಿರ್ಮಾಪಕರು ವಿಶೇಷ ವಿಮಾನವೊಂದನ್ನು ಸಿನಿಮಾ ತಂಡದ ಸದಸ್ಯರ ಆರೋಗ್ಯದ ದೃಷ್ಟಿಯಿಂದ ಬುಕ್‌ ಮಾಡಿದ್ದಾರಂತೆ. ರಂಜಿತ್‌ ಎಂ. ತಿವಾರಿ ನಿರ್ದೇಶನದ ಇದು ಮುಂದಿನ ವರ್ಷದ ಏಪ್ರಿಲ್‌ ಮೊದಲ ವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ನಡುವೆಯೇ ಅಕ್ಷಯ್‌ ಕುಮಾರ್ ಮತ್ತು ಕಿಯಾರಾ ಅಡ್ವಾಣಿ ನಟನೆಯ ‘ಲಕ್ಷ್ಮಿ ಬಾಂಬ್‌’ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆಯಂತೆ. ಡಿಸ್ನಿ+ಹಾಟ್‌ಸ್ಟಾರ್‌ ₹ 125 ಕೋಟಿ ನೀಡಿ ಈ ಸಿನಿಮಾ ಖರೀದಿಸಿದೆ ಎಂಬ ಸುದ್ದಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.