ADVERTISEMENT

Sandalwood: ನಟಿ ಅಯಾನ ಹೊಸ ಯಾನ!

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 0:36 IST
Last Updated 20 ಫೆಬ್ರುವರಿ 2026, 0:36 IST
ಅಯಾನ 
ಅಯಾನ    

ನಟಿ ಅಯಾನ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸಿನಿಮಾ ಮೂಲಕ ಚಂದನವನದ ಪಯಣ ಆರಂಭಿಸಿದವರು. ಬಳಿಕ ನಟ ಪೃಥ್ವಿ ಅಂಬಾರ್‌ ನಟನೆಯ ‘ದೂರದರ್ಶನ’ದಲ್ಲಿ ಹಳ್ಳಿ ಹುಡುಗಿಯಾಗಿ ಮಿಂಚಿ, ಸತ್ಯಪ್ರಕಾಶ್ ನಿರ್ದೇಶನದ ‘ಎಕ್ಸ್ ಆ್ಯಂಡ್‌ ವೈ’ನಲ್ಲಿ ಬಣ್ಣಹಚ್ಚಿದ್ದರು. ಇದೀಗ ‘ಗೀತಾ’, ‘ಗುರುದೇವ ಹೊಯ್ಸಳ’ ಚಿತ್ರಗಳನ್ನು ನಿರ್ದೇಶಿಸಿರುವ ವಿಜಯ್‌ ನಾಗೇಂದ್ರ ನಿರ್ದೇಶನದ ಸಿನಿಮಾ ‘ಆಲ್ಫಾ’ದಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದಾರೆ. ಈ ಸಿನಿಮಾ ಇಂದು(ಫೆ.20) ತೆರೆಕಾಣುತ್ತಿದೆ. 

ಸಿನಿಮಾ ಪಯಣದ ಕುರಿತು ಮಾತಿಗಿಳಿದ ಅಯಾನ, ‘ಭರತನಾಟ್ಯ, ರಂಗಭೂಮಿ ಹಿನ್ನೆಲೆಯಿಂದ ಬಂದ ನಾನು ಸಾವಕಾಶವಾಗಿ ಈ ಸಿನಿಮಾ ಲೋಕದಲ್ಲಿ ಹೆಜ್ಜೆ ಇಡುತ್ತಿದ್ದೇನೆ. ನನ್ನ ಮೊದಲ ಕಮರ್ಷಿಯಲ್‌ ಸಿನಿಮಾ ‘ದೂರದರ್ಶನ’. ನಾನು ಇಲ್ಲಿಯವರೆಗೂ ನಟಿಸಿದ ಸಿನಿಮಾಗಳಲ್ಲಿ ಸರಳ, ಮುಗ್ಧ ಪಾತ್ರಗಳಿದ್ದವು. ನನಗೆ ಬರುತ್ತಿದ್ದ ಕಥೆಗಳಲ್ಲೂ ಇದೇ ಮಾದರಿಯ ಪಾತ್ರಗಳಿದ್ದವು. ಆದರೆ ‘ಆಲ್ಫಾ’ದಲ್ಲಿ ಹೊಸ ಪ್ರಯೋಗ ಮಾಡಿದ್ದೇನೆ. ಇಲ್ಲಿ ನಾನು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ‘ದೂರದರ್ಶನ’ವನ್ನು ನೋಡಿ ವಿಜಯ್‌ ಅವರು ನನಗೆ ಈ ಪಾತ್ರಕ್ಕೆ ಆಫರ್‌ ನೀಡಿದ್ದರು. ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಎರಡೂ ಪಾತ್ರಗಳಲ್ಲಿ ಆಯ್ಕೆ ನೀಡಿದ್ದರು. ಈಗಾಗಲೇ ನಾನು ರೊಮ್ಯಾಂಟಿಕ್‌ ಕಥೆಗಳಲ್ಲಿ ನಟಿಸಿರುವ ಕಾರಣ ‘ಪೊಲೀಸ್‌ ಅಧಿಕಾರಿ’ ಪಾತ್ರವನ್ನು ಸವಾಲಾಗಿ ಸ್ವೀಕರಿಸಿದೆ. ಇಡೀ ಸಿನಿಮಾದಲ್ಲಿ ನನ್ನ ಪಾತ್ರದ ಬರವಣಿಗೆ, ಅದನ್ನು ಪ್ರಸ್ತುತಪಡಿಸಿರುವ ರೀತಿ ಚೆನ್ನಾಗಿದೆ. ‘ಅನುರಾಧ’ ಎನ್ನುವುದು ನನ್ನ ಪಾತ್ರದ ಹೆಸರು. ಸಿನಿಮಾದಲ್ಲಿ ನಾಯಕ ಹಾಗೂ ಆತನ ತಂದೆಯ ನಡುವಿನ ಬಾಂಧವ್ಯದ ಕಥೆ ಮುಖ್ಯವಾಗಿದ್ದು, ಇದರಲ್ಲಿ ನಾಯಕನಿಗೆ ಬೆಂಬಲವಾಗಿ ನಿಲ್ಲುವ ಪಾತ್ರ ನನ್ನದು’ ಎಂದರು. 

‘ಸಿನಿಮಾದಲ್ಲಿ ನನ್ನ ಪಾತ್ರ ಕೊನೆಯವರೆಗೂ ಸಾಗುತ್ತದೆ. ಆ್ಯಕ್ಷನ್‌ ಡ್ರಾಮಾ ಸಿನಿಮಾ ಇದಾಗಿದ್ದು, ಒಂದು ಆ್ಯಕ್ಷನ್‌ ಸ್ವೀಕೆನ್ಸ್‌ ಕೂಡಾ ಮಾಡಿದ್ದೇನೆ. ಇದು ಹೊಸ ಅನುಭವ. ಜೊತೆಗೆ ಮಹಂತೇಶ್‌ ಅವರ ಜೊತೆಗಿನ ನನ್ನ ನಟನೆಯ ದೃಶ್ಯಗಳಲ್ಲಿ ಹಾಸ್ಯ ಸನ್ನಿವೇಶಗಳೂ ಇವೆ. ಇದು ಚೆನ್ನಾಗಿ ಮೂಡಿಬಂದಿದೆ’ ಎನ್ನುತ್ತಾರೆ ಅಯಾನ.   

ADVERTISEMENT

ತೆಲುಗಿನಲ್ಲಿ ಅಯಾನ

‘ಸದ್ಯ ಕನ್ನಡದಲ್ಲಿ ಎರಡು ಕಥೆಗಳ ಮಾತುಕತೆ ನಡೆಯುತ್ತಿದೆ. ಒಂದು ತೆಲುಗು ಪ್ರಾಜೆಕ್ಟ್‌ ಪೂರ್ಣಗೊಂಡಿದೆ. ಈ ಮೂಲಕ ನಾನು ಟಾಲಿವುಡ್‌ನಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದೇನೆ. ಇದರ ಪೋಸ್ಟ್‌ ಪ್ರೊಡಕ್ಷನ್‌ ಕೂಡಾ ಮುಗಿದಿದ್ದು, ಇದು ಇನ್ನೊಂದೆರಡು ತಿಂಗಳಲ್ಲಿ ಬಿಡುಗಡೆಯಾಗಬಹುದು. ಸಿನಿಮಾವನ್ನು ಖ್ಯಾತ ನಿರ್ಮಾಣ ಸಂಸ್ಥೆ ಪೀಪಲ್‌ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡಿದೆ. ಉಳಿದ ಮಾಹಿತಿಗಳನ್ನು ನಿರ್ಮಾಣ ಸಂಸ್ಥೆಯೇ ಶೀಘ್ರದಲ್ಲಿ ಘೋಷಿಸಲಿದೆ’ ಎಂದರು ಅಯಾನ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.