ADVERTISEMENT

ಬಿ ಟೌನ್‌ಗೆ ಹೊರಟ ಕೋಶಿ, ಅಯ್ಯಪ್ಪನ್‌ ಯಾತ್ರೆ! ಕೋಶಿಯಾಗಿ ಜಾನ್‌ ಅಬ್ರಹಾಂ?

​ಪ್ರಜಾವಾಣಿ ವಾರ್ತೆ
Published 28 ಮೇ 2020, 10:44 IST
Last Updated 28 ಮೇ 2020, 10:44 IST
ಜಾನ್‌ ಅಬ್ರಹಾಂ
ಜಾನ್‌ ಅಬ್ರಹಾಂ   

ಪರದೆ ಮೇಲೆ ಮನುಷ್ಯನ ಸ್ವಭಾವಕ್ಕೆ ಕನ್ನಡಿ ಹಿಡಿಯುವ ಸಿನಿಮಾಗಳು ಬಹುಬೇಗ ಪ್ರೇಕ್ಷಕರ ಮನ ಸೆಳೆಯುತ್ತವೆ. ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆಯ ಗಳಿಕೆ ಕಾಣುತ್ತವೆ. ಕಳೆದ ಫೆಬ್ರುವರಿಯಲ್ಲಿ ತೆರೆಕಂಡ ಮಲಯಾಳದ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರ ಇದಕ್ಕೆ ಉತ್ತಮ ಉದಾಹರಣೆ. ಇದನ್ನು ನಿರ್ದೇಶಿಸಿದ್ದು ಸಚ್ಚಿ.

ಇಬ್ಬರು ವ್ಯಕ್ತಿಗಳ ನಡುವಿನ ಪ್ರತಿಷ್ಠೆಯ ಸಂಘರ್ಷವೇ ಇದರ ಹೂರಣ. ಒಮ್ಮೆ ಕೋಶಿ ಮದ್ಯಪಾನ ಮಾಡಿ ಅಟ್ಟಪಾಡಿ ಅರಣ್ಯದ ವ್ಯಾಪ್ತಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿರುತ್ತಾನೆ. ಆಗ ಆತ ಕರ್ತವ್ಯನಿರತ ಪೊಲೀಸ್‌ ಅಧಿಕಾರಿ ಅಯ್ಯಪ್ಪನ್‌ನಿಂದ ಬಂಧನಕ್ಕೆ ಒಳಗಾಗುತ್ತಾನೆ. ಈ ಇಬ್ಬರ ನಡುವೆ ಸಂಘರ್ಷ ಶುರುವಾಗುತ್ತದೆ. ಈ ಥ್ರಿಲ್ಲರ್‌ ಕಥನವನ್ನು ತೆರೆಯ ಮೇಲೆ ನಿರ್ದೇಶಕರು ಸೊಗಸಾಗಿ ನಿರೂಪಿಸಿದ್ದರು. ಬಾಕ್ಸ್‌ಆಫೀಸ್‌ನಲ್ಲೂ ಈ ಸಿನಿಮಾ ಭರ್ಜರಿ ಕಲೆಕ್ಷನ್‌ ಕಂಡಿತ್ತು. ಅಯ್ಯಪ್ಪನ್ ಪಾತ್ರಕ್ಕೆ ಬಿಜು ಮೆನನ್ ಬಣ್ಣ ಹಚ್ಚಿದ್ದರು. ಪೃಥ್ವಿರಾಜ್‌ ಸುಕುಮಾರನ್‌ ‘ಕೋಶಿ ಕುರಿಯನ್‌’ ಎಂಬ ಶ್ರೀಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈಗಾಗಲೇ, ಈ ಚಿತ್ರ ತೆಲುಗು, ತಮಿಳಿನಲ್ಲಿ ರಿಮೇಕ್‌ ಆಗುತ್ತಿದೆ.ಸಿತಾರಾ ಎಂಟರ್‌ಟೈನ್‌ಮೆಂಟ್ಸ್‌ ತೆಲುಗಿನ ರಿಮೇಕ್‌ ಹಕ್ಕನ್ನು ಖರೀದಿಸಿದೆ. ಬಿಜು ಮೆನನ್‌ ಪಾತ್ರದಲ್ಲಿ ನಟ ಬಾಲಕೃಷ್ಣ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಈ ನಡುವೆಯೇ ಇದರ ಹಿಂದಿಯ ರಿಮೇಕ್ ಹಕ್ಕು ನಟ ಜಾನ್‌ ಅಬ್ರಹಾಂ ಅವರ ಪಾಲಾಗಿದೆ. ಅವರು ಜೆಎ ಎಂಟರ್‌ಟೈನ್‌ಮೆಂಟ್ ಒಡೆಯ. ಈ ಬ್ಯಾನರ್‌ನಡಿಯೇ ‘ಅಯ್ಯಪ್ಪನುಂ ಕೋಶಿಯುಂ’ ಸಿನಿಮಾವನ್ನು ಹಿಂದಿಗೆ ರಿಮೇಕ್‌ ಮಾಡಲು ನಿರ್ಧರಿಸಿದ್ದಾರಂತೆ. ಜೊತೆಗೆ, ‌ಚಿತ್ರದ ‌‌ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿಯೂ ಬಾಲಿವುಡ್‌ ಅಂಗಳದಲ್ಲಿ ಕೇಳಿಬರುತ್ತಿದೆ.

ADVERTISEMENT

‘ಅಯ್ಯಪ್ಪನುಂ ಕೋಶಿಯುಂ ಒಳ್ಳೆಯ ಮನರಂಜನಾತ್ಮಕ ಚಿತ್ರ. ತೆರೆಯ ಮೇಲೆಆ್ಯಕ್ಷನ್‌ ಮತ್ತು ಥ್ರಿಲ್ಲರ್‌ ಅನ್ನು ಸಮಾನಾಂತರವಾಗಿ ಕಟ್ಟಿಕೊಡಲಾಗಿದೆ. ಬಾಲಿವುಡ್‌ನಲ್ಲಿ ಇದರ ರಿಮೇಕ್‌ಗೆ ಉತ್ಸುಕನಾಗಿದ್ದೇನೆ. ಪ್ರೇಕ್ಷಕರಿಗೆ ಮನರಂಜನೆ ನೀಡುವುದೇಜೆಎ ಎಂಟರ್‌ಟೈನ್‌ಮೆಂಟ್‌ನ ಮೂಲ ಗುರಿ. ಕೊರೊನಾ ಭೀತಿ ಕಡಿಮೆಯಾದ ಬಳಿಕ ಇದರ ಶೂಟಿಂಗ್‌ ಆರಂಭಿಸಲಾಗುವುದು’ ಎಂದು ಜಾನ್‌ ಅಬ್ರಹಾಂ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.