ಗಿರಿಜಾ ಲೋಕೇಶ್
ನಟಿ ದಿವಂಗತ ಬಿ.ಸರೋಜಾದೇವಿ ಅವರೊಂದಿಗೆ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಅವರೊಂದಿಗೆ ಒಡನಾಟ ಹೊಂದಿದ್ದವರು ಹಿರಿಯ ನಟಿ ಗಿರಿಜಾ ಲೋಕೇಶ್. ಇವರು ತಮ್ಮ ಗತಕಾಲದ ಬುತ್ತಿಯನ್ನು ಬಿಚ್ಚಿದಾಗ ಹತ್ತಾರು ನೆನಪುಗಳು ನುಗ್ಗಿಬಂದವು. ಅವುಗಳಲ್ಲಿ ಆಯ್ದ ಕೆಲವು ನಿಮ್ಮ ಓದಿಗಾಗಿ...
ಬಿ.ಸರೋಜಾದೇವಿಯವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರೆ...
ನಾನು ಅವರನ್ನು ಮೊದಲ ಬಾರಿ ನೋಡಿದಾಗ ನನಗಿನ್ನೂ ಹತ್ತೋ ಹನ್ನೆರಡು ವರ್ಷ. ಅವರು ಸಿನಿಮಾವೊಂದರ ಚಿತ್ರೀಕರಣದಲ್ಲಿದ್ದರು. ಆ ಜಾಗಕ್ಕೆ ನಾನು ಹೋಗಿದ್ದೆ. ಅವರನ್ನು ನೋಡಿದಾಕ್ಷಣ ನನಗೆ ದೇವತೆಯನ್ನು ನೋಡಿದಂತೆ ಅನಿಸಿತು. ಇವರು ಎಲ್ಲಿಂದ ಬರುತ್ತಾರೆ, ಇವರ ದಿನಚರಿ ಏನಿರುತ್ತದೆ? ಎನ್ನುವುದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗೆ. ನನಗವರು ಕನಸಿನಲ್ಲಿ ಬರುವ ದೇವತೆಯಂತೆ ಕಂಡರು. ಯೌವನದಲ್ಲಿ ಅವರ ಸಿನಿಮಾಗಳನ್ನು ನೋಡುವಾಗ ಬಹಳ ಭಾವುಕನಾಗುತ್ತಿದ್ದೆ. ನಾನೂ ಅವರ ರೀತಿ ಕಲಾವಿದೆಯಾಗಬೇಕು, ಖ್ಯಾತಿ ಪಡೆಯಬೇಕು ಎನ್ನುವ ಆಸೆ ಆಗಲೇ ಹುಟ್ಟಿಕೊಂಡಿತ್ತು. ನಾನು ಅವರ ಜೊತೆ ಸಿನಿಮಾಗಳನ್ನು ಮಾಡಿಲ್ಲ. ನಾನು ಚಿತ್ರರಂಗದಲ್ಲಿ ಸಕ್ರಿಯವಾಗುವ ಸಂದರ್ಭದಲ್ಲಿ ಅವರು ನಟನೆಯಿಂದ ನೇಪಥ್ಯಕ್ಕೆ ಸರಿದಿದ್ದರು.
ಒಮ್ಮೆ ಜಯಂತಿಯವರ ಜೊತೆ ಮಲ್ಲೇಶ್ವರದಲ್ಲಿರುವ ಇವರ ಮನೆಗೆ ಹೋಗಿದ್ದ ಘಟನೆಯನ್ನು ಹೇಳುತ್ತೇನೆ. ಮನೆಯ ತುಂಬಾ ಪ್ರಶಸ್ತಿಗಳ ಸಾಲು, ಅವರ ಛಾಯಾಚಿತ್ರಗಳ ತೋರಣ. ಸಿನಿಮಾಗಳ ನೆನಪಿನ ಕಾಣಿಕೆಗಳು, ಪ್ರಶಸ್ತಿಗಳನ್ನು ಕಲಾತ್ಮಕವಾಗಿ ಜೋಡಿಸಿಟ್ಟ ರೀತಿಯೇ ಕಣ್ಣಿಗೆ ಹಬ್ಬದಂತಿತ್ತು. ಅವರಿಗೆ ದೊರೆತ ಚಿನ್ನ, ಬೆಳ್ಳಿಯ ಉಡುಗೊರೆಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದರು. ಕಲಾವಿದೆಯಾದವಳು ಈ ರೀತಿ ಸಾಧನೆ ಮಾಡಬೇಕು ಎಂದು ಸ್ಫೂರ್ತಿ ನೀಡುವ ಜಾಗವದು. ಚಿಕ್ಕಮಗುವಿನ ರೀತಿಯ ಕುತೂಹಲ ಅವರಿಗಿತ್ತು.
ಲೋಕೇಶ್ ಅವರ ಜೊತೆಗಿನ ಒಡನಾಟ...
ರಾಜ್‌ಕುಮಾರ್ ಅವರ ಜೊತೆಗೆ ನಟಿಸಿದ ‘ಅಣ್ಣತಂಗಿ’ ಸಿನಿಮಾ ಮೊದಲ ಬಾರಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು.
ಅದನ್ನು ನೋಡಿ ಲೋಕೇಶ್ ಸರೋಜಾದೇವಿಯವರಿಗೆ ಫೋನ್ ಮಾಡಿದ್ದರು. ಸಿನಿಮಾದಲ್ಲಿನ ಅವರ ಪಾತ್ರದ ಕುರಿತು ಸುಮಾರು ಅರ್ಧಗಂಟೆ ಮಾತುಕತೆ ನಡೆಸಿದ್ದು ನನಗಿನ್ನೂ ನೆನಪಿದೆ.
ಆ ಸಿನಿಮಾದಲ್ಲಿ ಅವರದು ಎಂಥಾ ಮುಗ್ಧತೆ, ಎಂಥಾ ಸೌಂದರ್ಯ! ಆ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಇಂದಿನ ಸಿನಿಮಾಗಳಲ್ಲಿನ ಪಾತ್ರಗಳು ಮತ್ತು ಆ ಪಾತ್ರಗಳ ವೇಷಭೂಷಣಗಳು ಮನಸ್ಸಿಗೆ ತಟ್ಟುವುದೇ ಇಲ್ಲ. ಆದರೆ ಸರೋಜಾದೇವಿ ಅವರು ನಿಭಾಯಿಸಿದ ಪಾತ್ರಗಳು ಮತ್ತು ಅವರ ನಟನೆ ಮನಸ್ಸನ್ನು ಆವರಿಸಿಕೊಂಡು ಬಿಡುತ್ತಿತ್ತು. ಆ ಕಾಲದ ಸಿನಿಮಾಗಳಲ್ಲಿನ ಪಾತ್ರಗಳೇ ಹಾಗಿದ್ದವು. ಅವರ ಸಿನಿಮಾಗಳನ್ನು ನೋಡಿ ಅದೆಷ್ಟೋ ವರ್ಷಗಳಾಗಿವೆ. ಆದರೆ ಸರೋಜಾದೇವಿಯವರು ಬಣ್ಣಹಚ್ಚಿದ್ದ ಪಾತ್ರಗಳು ನನ್ನ ಮನಸ್ಸಿನಲ್ಲಿ ಇಂದಿಗೂ ಹಾಗೆಯೇ ಉಳಿದಿವೆ.
ಸರೋಜಾದೇವಿಯವರಿಗೆ ಅವರದ್ದೇ ಆದ ಸ್ಟೈಲ್ ಇತ್ತಲ್ಲವೇ?
ಹೌದು. ಅವರ ಕಾಲಿನಲ್ಲಿ ಸಣ್ಣ ತೊಂದರೆ ಇತ್ತು. ಆದರೆ ಅದನ್ನೇ ಅವರ ಒಂದು ಸ್ಟೈಲ್ ಮಾಡಿಕೊಂಡರು! ತಮಿಳುನಾಡಿನಲ್ಲಿ ಅವರ ನಡಿಗೆಯನ್ನು ಹಂಸನಡಿಗೆಗೆ ಹೋಲಿಸುತ್ತಿದ್ದರು. ಈ ನಡಿಗೆಯನ್ನೇ ಪ್ರತೀ ಸಿನಿಮಾದಲ್ಲೂ ಒಂದು ದೃಶ್ಯವನ್ನಾಗಿ ಇಡುತ್ತಿದ್ದರು. ಇದಕ್ಕೂ ಚಪ್ಪಾಳೆಗಳು ಬೀಳುತ್ತಿದ್ದವು. ಅವರ ಮಾತು ಗಿಣಿದನಿಯಂತೆ ಇಂಪು. ಅದಕ್ಕಾಗಿಯೆ ತಮಿಳುನಾಡಿನಲ್ಲಿ ಅವರನ್ನ ‘ಕನ್ನಡದ ಪೈಂಗಿಳಿ’ ಎಂದು ಕರೆಯುತ್ತಿದ್ದರು. ಅವರ ಕಣ್ಣು, ಮೂಗು, ಗಲ್ಲ, ನಗು, ದಂತಪಂಕ್ತಿಯನ್ನು ನೋಡುತ್ತಿದ್ದರೆ ದೇವರು ಸಾವಕಾಶದಲ್ಲಿ ನಾಜೂಕಾಗಿ ಅವರನ್ನು ಸೃಷ್ಟಿಸಿದ್ದಾನೆ ಎನಿಸುತ್ತದೆ. ಅವರನ್ನೇ ನೋಡುತ್ತಾ ಕೂರಬೇಕು ಎಂದನಿಸುತ್ತದೆ. ಇವರಂತೆಯೇ ವೈಜಯಂತಿ ಮಾಲಾ ಅವರೂ ಸುರಸುಂದರಿ. ಉತ್ತರಕ್ಕೆ ಅವರು ಸೂಪರ್‌ಸ್ಟಾರ್ ಆಗಿದ್ದರೆ ನಮ್ಮ ದಕ್ಷಿಣಕ್ಕೆ ಸರೋಜಾದೇವಿಯವರೇ ಸೂಪರ್ ಸ್ಟಾರ್.
ಮೇಕಪ್‌ಗೆ ಹೆಚ್ಚಿನ ಒತ್ತು ಕೊಡುತ್ತಿದ್ದರಿಂದ ಅವರು ಒಂದೇ ರೀತಿ ಕಾಣಿಸುತ್ತಿದ್ದಾರೆ ಎಂದೆನಿಸುತ್ತದೆ. ಅಂದಿಗೂ ಇಂದಿಗೂ ಅದೇ ರೀತಿ ಅವರು ಇದ್ದರು. ಜನರು ನಮ್ಮನ್ನು ನೋಡಲೆಂದೇ ಬರುವುದು, ಹಾಗಾಗಿ ಚೆನ್ನಾಗಿ ಕಾಣಿಸಿಕೊಳ್ಳಬೇಕು. ಸಹಜವಾಗಿ ಇರಬಾರದು ಎಂದು ಅವರು ಹೇಳುತ್ತಿದ್ದರು. ಮೇಕಪ್ ಇಲ್ಲದೆ ಅವರನ್ನು ನಾವು ನೋಡಿಯೇ ಇಲ್ಲ.
ಸರೋಜಾದೇವಿಯವರಲ್ಲಿ ನೀವು ಮೆಚ್ಚಿದ ಗುಣ...
ಅವರು ಹೊರಗಡೆ ಬಂದಾಗ ಬಹಳ ಗಂಭೀರವಾಗಿರುತ್ತಿದ್ದರು. ನಡವಳಿಕೆಯನ್ನು ಅವರಿಂದ ಕಲಿಯಬೇಕು. ಓರ್ವ ಪ್ರಬುದ್ಧ ಕಲಾವಿದೆ ಹೇಗಿರಬೇಕು ಎನ್ನುವುದನ್ನು ಅವರು ಪಾಠ ಮಾಡಿದಂತಿತ್ತು.
90ರ ದಶಕದಲ್ಲಿ ನಾವು ಪ್ರತಿ ನವೆಂಬರ್ 1ರಂದು ಕಲಾವಿದರ ಸಂಘದಿಂದ ಹಿರಿಯ ಕಲಾವಿದರಿಗೆ ಸನ್ಮಾನ ಮಾಡುತ್ತಿದ್ದೆವು. ಸರೋಜಾದೇವಿಯವರು ಸನ್ಮಾನಿತರಿಗೆ ವೈಯಕ್ತಿಕವಾಗಿ ಚಿನ್ನದ ಉಂಗುರ, ಸೀರೆ–ರೇಷ್ಮೆ ಪಂಚೆ ನೀಡುತ್ತಿದ್ದರು. ಅವರ ಟ್ರಸ್ಟ್ ಮುಖಾಂತರ ಎಲ್ಲಾ ಭಾಷೆಗಳಲ್ಲಿ ಕಲಾವಿದರನ್ನು ಗುರುತಿಸಿ ₹1 ಲಕ್ಷ ಬಹುಮಾನ ನೀಡುತ್ತಿದ್ದರು. ಇದರ ಬಗ್ಗೆ ಯಾರಿಗೂ ಹೇಳುತ್ತಿರಲಿಲ್ಲ.
ಅವರನ್ನು ಚಿತ್ರರಂಗ ಹೇಗೆ ಜೀವಂತವಾಗಿರಿಸಬಹುದು?
ಇದ್ದಾಗ ಮರೆತು ಇಲ್ಲದೇ ಇದ್ದಾಗ ಸ್ಮಾರಕ ಕಟ್ಟುವುದು ಈಗಿನ ಸ್ಥಿತಿ. ನಮ್ಮ ಕಲ್ಪನೆಯಲ್ಲಿ ಹೇಗೆ ಅವರನ್ನು ಜೀವಂತವಾಗಿರಸಲು ಸಾಧ್ಯವೋ ಎಂದು ಯೋಚಿಸಬೇಕು. ಅವರ ಹೆಸರಿನಲ್ಲಿ ಪ್ರಶಸ್ತಿ, ಅವರ ಚಲನಚಿತ್ರಗಳ ಸಪ್ತಾಹ, ಪಡೆದ ಪ್ರಶಸ್ತಿಗಳ ಪ್ರದರ್ಶನಗಳನ್ನು ಆಯೋಜಿಸಿ ಅವರನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬಹುದು. ಮುಂದಿನ ಪೀಳಿಗೆಯು ಅವರ ಚಿತ್ರಗಳನ್ನು ನೋಡಿ ಕಲಿಯುವಂಥದ್ದು ಬಹಳಷ್ಟಿದೆ. ಅವರ ಪಾತ್ರಗಳ ಮೂಲಕವೇ ಅವರು ನಮ್ಮೊಂದಿಗೆ ಸದಾ ಜೀವಂತವಾಗಿ ಇರುತ್ತಾರೆ. ಇಂದಿಗೂ ಶಾಲೆಗಳಲ್ಲಿ ಏಕಪಾತ್ರಾಭಿನಯಕ್ಕೆ ಹೆಚ್ಚಿನವರ ಆಯ್ಕೆ ಕಿತ್ತೂರು ಚೆನ್ನಮ್ಮನ ಪಾತ್ರವೇ ಆಗಿರುತ್ತದೆ. ಐದು ವರ್ಷದ ಮಗುವೂ ಆ ಪಾತ್ರದ ವೇಷ ಹಾಕುತ್ತದೆ. ಈ ಒಂದು ಪಾತ್ರದಿಂದಾಗಿಯೇ ಅವರು ಎಲ್ಲಾ ಕಾಲಕ್ಕೂ ಜೀವಂತವಾಗಿರುತ್ತಾರೆ. ಇಂಥ ಕಲಾವಿದೆಗೆ ಪ್ರಜಾವಾಣಿಯು 2024ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಒಂದೊಳ್ಳೆಯ ಕೆಲಸ ಮಾಡಿತು.
ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿಯಲ್ಲಿ ಅವರು ಮಾಡಿದ ಸಿನಿಮಾಗಳು ಸೋತವು ಎನ್ನುವುದನ್ನು ಎಲ್ಲಿಯೂ ಕೇಳಿಲ್ಲ. ಈ ರೀತಿ ಒಬ್ಬ ಅದೃಷ್ಟವಂತ ಕಲಾವಿದೆ ಅವರು. ಆ ಅವಧಿಯಲ್ಲಿ ಅವರದ್ದೇ ಅಧಿಪತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.