ADVERTISEMENT

ಬೆಂಗಳೂರು‌ ನಾಗರತ್ನಮ್ಮ ಬಯೋಪಿಕ್ ನಿರ್ಮಾಣ: ಅನುಷ್ಕಾ ಶೆಟ್ಟಿ ಅಥವಾ ಸಮಂತಾ ನಟನೆ?

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 5:26 IST
Last Updated 30 ಮಾರ್ಚ್ 2020, 5:26 IST
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ   

ಶಿವರಾಜ್ ಕುಮಾರ್ ನಾಯಕ‌ ನಟರಾಗಿ ನಟಿಸಿದ ಮೊದಲ ಚಿತ್ರ ‘ಆನಂದ್’ಗೆ ಆ್ಯಕ್ಷನ್ ಕಟ್ ಹೇಳಿದ್ದು ಹಿರಿಯ ನಿರ್ದೇಶಕ ಸಂಗೀತಂ ಶ್ರೀನಿವಾಸ ರಾವ್‌. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ನಿರ್ದೇಶಿಸಿದ ಹಿರಿಮೆ ಅವರದ್ದು. ಕನ್ನಡದಲ್ಲಿ ಅವರು ಆ್ಯಕ್ಷನ್ ಕಟ್ ಹೇಳಿದ‌ ಕೊನೆಯ ಸಿನಿಮಾ ಜಗ್ಗೇಶ್ ನಟನೆಯ ‘ಮೇಕಪ್’.

ಈಗ ಅವರು ಕರ್ನಾಟಕ ಸಂಗೀತದ ಮೇರು ಗಾಯಕಿ ಬೆಂಗಳೂರು ನಾಗರತ್ನಮ್ಮ ಅವರ ಬಯೋಪಿಕ್‌ ನಿರ್ದೇಶನಕ್ಕೆ ನಿರ್ಧರಿಸಿದ್ದಾರೆ. 88ರ ಪ್ರಾಯದಲ್ಲಿ ಮತ್ತೆ ನಿರ್ದೇಶನಕ್ಕೆ ಇಳಿಯಲು ಹೊರಟಿರುವ ಅವರ ಸಾಹಸಕ್ಕೆ‌ ಸಿನಿ ಪ್ರಿಯರು ಬೆರಗಾಗಿದ್ದಾರೆ. ಅಂದಹಾಗೆ ಇದರಲ್ಲಿ ನಾಗರತ್ನಮ್ಮ ಅವರ ಪಾತ್ರಧಾರಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಸಂಗೀತ ಪ್ರೇಮಿಗಳದ್ದು.

ಅನುಷ್ಕಾ ಶೆಟ್ಟಿ ಅವರು ಈ‌ ಬಯೊಪಿಕ್‌ನಲ್ಲಿ‌‌ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಚಿತ್ರತಂಡ‌ ಕೂಡ ಅವರನ್ನು ಸಂಪರ್ಕಿಸಿತ್ತು. ಆದರೆ, ಅನುಷ್ಕಾ ಮಾತ್ರ ಇದಕ್ಕೆ ಇನ್ನೂ ಗ್ರೀನ್ ಸಿಗ್ನಲ್‌ ನೀಡಿಲ್ಲ. ಸದ್ಯ ಆಕೆ ‘ನಿಶ್ಯಬ್ದ’ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ‌. ಆದರೆ, ಕೊರೊನಾ ಸೋಂಕಿನ‌ ಭೀತಿಯಿಂದಾಗಿ ಇದರ ಬಿಡುಗಡೆಯ ದಿನಾಂಕವೂ ಮುಂದಕ್ಕೆ ಹೋಗಿದೆ. ಈ ಚಿತ್ರ ಹೊರತುಪಡಿಸಿದರೆ ಯಾವುದೇ ಹೊಸ ಸಿನಿಮಾಗಳನ್ನು ಆಕೆ ಒಪ್ಪಿಕೊಂಡಿಲ್ಲ.

ADVERTISEMENT

ಒಂದು ವೇಳೆ ಅನುಷ್ಕಾ ನಟಿಸಲು ಒಪ್ಪಿಕೊಳ್ಳದಿದ್ದರೆ ಸಮಂತಾ ಅಕ್ಕಿನೇನಿ ಅವರನ್ನು ಸಂಪರ್ಕಿಸಲು ಚಿತ್ರತಂಡ‌ ನಿರ್ಧರಿಸಿದೆಯಂತೆ. ಪ್ರಸ್ತುತ ಆಕೆ ಅಶ್ವಿನ್ ಸರವಣನ್ ನಿರ್ದೇಶನದ ಮಹಿಳಾ ಕೇಂದ್ರಿತ ಚಿತ್ರದಲ್ಲಿ ‌ನಟಿಸುತ್ತಿದ್ದಾರೆ. ಇನ್ನೂ ಇದರ ಶೀರ್ಷಿಕೆ ಅಂತಿಮಗೊಂಡಿಲ್ಲ. ನಾಗರತ್ನಮ್ಮ ಅವರ ಬಯೋಪಿಕ್ ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ ಅಡಿ‌‌ ನಿರ್ಮಾಣವಾಗಲಿದೆ ಎಂಬ ಸುದ್ದಿಯಿದೆ. ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಇದನ್ನು ನಿರ್ಮಾಣ ಮಾಡಲಿದೆ.

ನಾಗರತ್ನಮ್ಮ ಅವರದು ಮೂಲತಃ ನಂಜನಗೂಡು. ತಮ್ಮ ಅಮೋಘ ಕಂಠಸಿರಿಯಿಂದ ನಾಡಿನಾದ್ಯಂತ ಜನಪ್ರಿಯರಾಗಿದ್ದರು. ಹಾಡುಗಾರಿಕೆಯಿಂದಲೇ ಪ್ರಸಿದ್ಧಿ ಪಡೆದಿದ್ದ ಅವರನ್ನು ಆಗಿನ ಮೈಸೂರು ಮಹಾರಾಜರು ಗೌರವಿಸಿದ್ದರು. ತ್ಯಾಗರಾಜರ ಆರಾಧನೆ ವೈಭವದಿಂದ ನಡೆಯುವಂತೆ ಮಾಡಿದ ಹಿರಿಮೆ ಅವರಿಗೆ ಸಲ್ಲುತ್ತದೆ. ಕೆಲಕಾಲ ಬೆಂಗಳೂರಿನಲ್ಲಿ ವಾಸವಾಗಿದ್ದ ಅವರು ಬಾಳಿನ‌‌ ಮುಸ್ಸಂಜೆಯಲ್ಲಿ ಚೆನ್ನೈನಲ್ಲಿ ನೆಲೆನಿಂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.