ADVERTISEMENT

ಪುನೀತ್‌ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಪ್ರದಾನ: ಭಾವುಕರಾದ ಅಶ್ವಿನಿ

​ಪ್ರಜಾವಾಣಿ ವಾರ್ತೆ
Published 4 ಮೇ 2022, 2:15 IST
Last Updated 4 ಮೇ 2022, 2:15 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಚಿತ್ರ ನಿರ್ಮಾಪಕ ಚಿನ್ನೇಗೌಡ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ,ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಡಾ.ಶಿವಮೂರ್ತಿ ಮುರುಘಾ ಶರಣರು ಇದ್ದಾರೆ.
ಚಿತ್ರದುರ್ಗದ ಮುರುಘಾ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಚಿತ್ರ ನಿರ್ಮಾಪಕ ಚಿನ್ನೇಗೌಡ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ,ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಡಾ.ಶಿವಮೂರ್ತಿ ಮುರುಘಾ ಶರಣರು ಇದ್ದಾರೆ.   

ಚಿತ್ರದುರ್ಗ: ಮುರುಘಾ ಮಠದ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿಯನ್ನು ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರದಾನ ಮಾಡಲಾಯಿತು. ಪುನೀತ್ ಅವರ ಪತ್ನಿ ಅಶ್ವಿನಿ ಪ್ರಶಸ್ತಿ ಸ್ವೀಕರಿಸಿ ಭಾವುಕರಾದರು.

ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಬಸವ ಜಯಂತಿ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು 2021ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ.

ಡಾ. ಶಿವಮೂರ್ತಿ ಮುರುಘಾ ಶರಣರು, ‘ನಟ ಪುನೀತ್ ರಾಜ್‍ಕುಮಾರ್ ಕನ್ನಡದ ಕುವರ. ನಟನೆ ಮತ್ತು ವ್ಯಕ್ತಿತ್ವದ ಮೂಲಕ ಆಕಾಶದ ಎತ್ತರಕ್ಕೆ ಬೆಳೆದವರು. ಅಭಿನಯ, ಹಾಡುಗಾರಿಕೆ, ಅಭಿವ್ಯಕ್ತಿಯಲ್ಲಿ ಪುನೀತ್ ಅವರನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ. ರಾಜ್ ಕುಟುಂಬ ಇಡೀ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಶರಣ ಮತ್ತು ಬಸವ ಸಂಸ್ಕೃತಿ ಲಿಂಗಾಯತರಿಗೆ ಸೀಮಿತವಲ್ಲ. ಇಡೀ ಮನುಕುಲಕ್ಕೆ ಸಂಬಂಧಿಸಿದ ಸಂಸ್ಕೃತಿ. ಬಸವಣ್ಣ ಕೇವಲ ಜಾತಿ ಉದ್ಧಾರಕರಾಗಿರಲಿಲ್ಲ, ಮನುಕುಲದ ಉದ್ಧಾರಕರಾಗಿದ್ದರು. ಬಸವಣ್ಣನವರು ಸಾವಿರಾರು ಜನರನ್ನು ಪರಿಚಯಿಸಿದ್ದಾರೆ. ಇಂದಿನ ವಿಧಾನಸಭೆ, ಲೋಕಸಭೆಯಲ್ಲಿಯೂ ಇಷ್ಟು ಜನರು ಇಲ್ಲ’ ಎಂದರು.

ಪುನೀತ್ ಕುರಿತು ಸಾಹಿತಿ ರಾಜಪ್ಪ ದಳವಾಯಿ ಮಾತನಾಡಿ, ‘ಕಲಾವಿದರಾಗಿ ಹುಟ್ಟಿ ಜನಮಾನಸ ಆವರಿಸಿಕೊಂಡವರು ಪುನೀತ್‌. ಅವರು ಅಗಲಿದಾಗ ಲಕ್ಷಾಂತರ ಜನರು ದುಃಖಿಸಿದರು. ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡಂತೆ ಬಿಕ್ಕಳಿಸಿದರು. ಇಂತಹ ಅಭಿಮಾನಿಗಳನ್ನು ಗಳಿಸಿಕೊಳ್ಳುವುದು ಅಪರೂಪ’ ಎಂದು ವ್ಯಾಖ್ಯಾನಿಸಿದರು.

‘ಮಠಗಳ ಪರಂಪರೆಯಲ್ಲಿ ಮುರುಘಾ ಮಠ ಹೇಗೊ, ಚಿತ್ರರಂಗದಲ್ಲಿ ರಾಜ್‌ ಕುಟುಂಬ ಅಷ್ಟು ಮುಖ್ಯ. ಕನ್ನಡ ಚಿತ್ರರಂಗಕ್ಕೆ ರಾಜ್‌ ಕುಟುಂಬದ ಕೊಡುಗೆ ಅಪಾರ. ರಾಜ್‌ಕುಮಾರ್‌ ಅವರು ಸಿನಿಮಾ ಬಿಟ್ಟು ಬೇರೇನೂ ಆಲೋಚನೆ ಮಾಡಲಿಲ್ಲ. ಅವರ ಮಾರ್ಗದರ್ಶನದಲ್ಲಿ ಪುನೀತ್‌ ಬೆಳೆದರು’ ಎಂದು ಕೊಂಡಾಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಪುನೀತ್‌ ಜೊತೆಗೆ ಹತ್ತಿರದ ಒಡನಾಟವಿತ್ತು. ಅವರಿಗೆ ಹೃದಯಾಘಾತವಾದ ಸುದ್ದಿಯನ್ನು ನಂಬಲು ಸಾಧ್ಯವಾಗಲಿಲ್ಲ. ಪುನೀತ್‌ ಹೆಸರಿನಲ್ಲಿಯೇ ಒಂದು ಶಕ್ತಿ ಇದೆ. ನಟನೆ, ಹಾಡುಗಾರಿಕೆ, ಸೇವಾ ಕಾರ್ಯದ ಮೂಲಕ ನಮ್ಮ ನಡುವೆ ಇನ್ನೂ ಉಳಿದಿದ್ದಾರೆ’ ಎಂದು ಸ್ಮರಿಸಿದರು.

‘ಹಲವೆಡೆ ಬಸವಣ್ಣನವರ ಜೊತೆಗೆ ಪುನೀತ್‌ ರಾಜ್‌ಕುಮಾರ್ ಭಾವಚಿತ್ರವಿಟ್ಟು ಪೂಜಿಸಲಾಗುತ್ತಿದೆ. ಜನರ ಹೃದಯದಲ್ಲಿ ಇಂತಹ ಸ್ಥಾನ ಪಡೆಯುವುದು ಸುಲಭವಲ್ಲ. ಅಷ್ಟು ಜನಾನುರಾಗಿ ಅಗಿ ಪುನೀತ್‌ ಬೆಳೆದ ಪರಿ ವಿಸ್ಮಯ. ಸರಳತೆ, ಆತ್ಮೀಯತೆ ಮರೆಯಲು ಸಾಧ್ಯವಿಲ್ಲ. ಅವರು ಮಾಡಿದ ಧಾನ–ಧರ್ಮ
ಇಂದಿಗೂ ಕಾಪಾಡುತ್ತಿದೆ’ ಎಂದು ಹೇಳಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಂಗಳಾ ರಾಘವೇಂದ್ರ ರಾಜ್‌ಕುಮಾರ್‌, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಚಿತ್ರ ನಿರ್ಮಾಪಕ ಚಿನ್ನೇಗೌಡ, ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಪಟೇಲ್‌ ಶಿವಕುಮಾರ್‌, ನಟರಾದ ವಿಕ್ರಂ ಸೂರಿ, ನಮಿತಾ ರಾವ್‌, ಗ್ರೀನ್‌ಹೌಸ್‌ ವಾಸು ಇದ್ದರು. ಪುನೀತ್ ರಾಜ್‍ಕುಮಾರ್ ಅವರ ಸಿನಿಮಾ ಹಾಡುಗಳಿಗೆ ಮಕ್ಕಳು ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.