ADVERTISEMENT

ಒಂದು ಹೊಸ ಅಧ್ಯಾಯ, ಹೊಸ ಲಯ... IVF ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 23:50 IST
Last Updated 5 ಜುಲೈ 2025, 23:50 IST
ಭಾವನಾ ರಾಮಣ್ಣ
ಭಾವನಾ ರಾಮಣ್ಣ   

ನಟಿ ಭಾವನಾ ರಾಮಣ್ಣ ಮದುವೆಯಾಗದೆ ತಾವು ತಾಯಿಯಾಗುತ್ತಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಇದಕ್ಕೆ ಅನೇಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಐವಿಎಫ್‌ ತಂತ್ರಜ್ಞಾನದ ಮೂಲಕ ಅವರು ಗರ್ಭ ಧರಿಸಿದ್ದು, ಈಗ ಅವರಿಗೆ ಆರು ತಿಂಗಳು ತುಂಬಿದೆ.

‘ಒಂದು ಹೊಸ ಅಧ್ಯಾಯ, ಒಂದು ಹೊಸ ಲಯ. ಇದನ್ನು ನಾನು ಹೇಳುತ್ತೇನೆ ಎಂದು ಊಹಿಸಿಯೇ ಇರಲಿಲ್ಲ. ನಾನು ಈಗ ಆರು ತಿಂಗಳ ಗರ್ಭಿಣಿ. ಅವಳಿ ಮಕ್ಕಳ ತಾಯಿಯಾಗುತ್ತಿದ್ದೇನೆ. ನನ್ನಲ್ಲಿ ಧನ್ಯತಾಭಾವ ಆವರಿಸಿದೆ’ ಎಂದು ಅವರು ತಮ್ಮ ಫೇಸ್‌ಬುಕ್‌ ಬರೆದುಕೊಂಡಿದ್ದಾರೆ.

‘20, 30ನೇ ವಯಸ್ಸಿನಲ್ಲಿ ತಾಯಿಯಾಗುವ ಬಗ್ಗೆ ನಾನು ಆಲೋಚಿಸಿರಲಿಲ್ಲ. ಆದರೆ ವಯಸ್ಸು 40 ದಾಟಿದಾಗ ತಾಯಿಯಾಗುವ ಬಯಕೆ ತೀವ್ರವಾಗಿತ್ತು. ಒಂಟಿ ಮಹಿಳೆಯಾಗಿ ಈ ದಾರಿ ಸುಲಭದ್ದಾಗಿರಲಿಲ್ಲ. ಮೊದಲ ಪ್ರಯತ್ನದಲ್ಲೇ ಗರ್ಭಿಣಿ ಆದೆ’ ಎಂದು ಅವರು ಹೇಳಿದ್ದಾರೆ. ಜತೆಗೆ ಬೇಬಿ ಬಂಪ್‌ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

ADVERTISEMENT

‘ನನ್ನ ಮಕ್ಕಳಿಗೆ ತಂದೆ ಇಲ್ಲದೇ ಇರಬಹುದು. ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಅಪರಿಮಿತ ಪ್ರೀತಿ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ಬಂಡಾಯದ ಕಾರಣಕ್ಕೆ ನಾನು ಈ ದಾರಿ ಆಯ್ಕೆ ಮಾಡಿಕೊಂಡಿಲ್ಲ. ನನ್ನ ಸತ್ಯವನ್ನು ಗೌರವಿಸುವ ಸಲುವಾಗಿ ಆಯ್ಕೆ ಮಾಡಿಕೊಂಡೆ’ ಎಂದಿದ್ದಾರೆ ಭಾವನಾ.

ಅವರ ಈ ಪೋಸ್ಟ್‌ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಬದುಕಿನಲ್ಲಿ ಸರಿಯಾದ ಸಂಗಾತಿ ಸಿಗದೇ ಇದ್ದಾಗ ಇಂಥ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಸಾಕಷ್ಟು ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.