ADVERTISEMENT

ಭೋಸ್ಲೆ ಜೀವನವೇ ‘ವಿಸರ್ಜನೆ’

ಸಂತೋಷ ಜಿಗಳಿಕೊಪ್ಪ
Published 26 ಫೆಬ್ರುವರಿ 2019, 14:43 IST
Last Updated 26 ಫೆಬ್ರುವರಿ 2019, 14:43 IST
ಭೋಂಸ್ಲೆ ಚಿತ್ರದಲ್ಲಿ ಮನೋಜ್ ಬಾಜಪೇಯಿ
ಭೋಂಸ್ಲೆ ಚಿತ್ರದಲ್ಲಿ ಮನೋಜ್ ಬಾಜಪೇಯಿ   

ನಿರ್ದೇಶಕರೊಬ್ಬರ ಕಲ್ಪನಾ ಶಕ್ತಿ ಹಾಗೂ ಜೀವನದ ಹೋಲಿಕೆ ದೃಶ್ಯಗಳು ಪ್ರೇಕ್ಷಕರ ಮನದಲ್ಲಿ ಉಳಿಯುತ್ತವೆ ಎಂಬುದಕ್ಕೆ ‘ಭೋಸ್ಲೆ’ ಚಿತ್ರವೇ ಸಾಕ್ಷಿ. ಪೊಲೀಸ್ ಇಲಾಖೆಯ ನಿಯಮಗಳು, ಮಹಾರಾಷ್ಟ್ರದಲ್ಲಿ ವಲಸಿಗರ ಸಮಸ್ಯೆಗಳ ಸುತ್ತ ಹೆಣೆದಿರುವ ಚಿತ್ರದ ಕಾಳಜಿ ಧ್ವನಿಪೂರ್ಣ.

ಭಗ್ನಗೊಂಡಂತೆ ಗೋಚರಿಸುವ ಅರ್ಧಂಬರ್ಧ ತಯಾರಿಸಿದ ಗಣಪತಿ ಮೂರ್ತಿಯ ಮೂಲಕವೇ ಸಿನಿಮಾ ಶುರುವಾಗುತ್ತದೆ. ಗಣಪತಿ ಪ್ರತಿಷ್ಠಾಪನೆ ದಿನವೇ ಚಿತ್ರದ ನಾಯಕ ಹೆಡ್‌ ಕಾನ್‌ಸ್ಟೆಬಲ್‌ ಗಣಪತಿ ಭೋಸ್ಲೆ ಕೆಲಸದಿಂದ ನಿವೃತ್ತಿಯ ಕೊನೆಯ ದಿನ.ಮೂರ್ತಿಗೆ ಮೂಗು, ಬಾಯಿ ಮತ್ತು ಕೈ ಜೋಡಿಸಿ ವರ್ಣಮಯ ಬಟ್ಟೆಗಳಿಂದ ಅಲಂಕರಿಸಲಾಗುತ್ತದೆ. ಇತ್ತ ಭೋಸ್ಲೆ, ತನಗೆ ಇಲಾಖೆ ನೀಡಿದ್ದ ಬೂಟು, ಬೆಲ್ಟ್, ಟೋಪಿ ಹಾಗೂ ಸಮವಸ್ತ್ರ ಕಳಚಿ ಠಾಣೆಯ ಹಿರಿಯ ಅಧಿಕಾರಿಗೆ ಒಪ್ಪಿಸಿ ಕೊನೆಯ ದಿನದ ಹಾಜರಾತಿ ಹಾಕುತ್ತಾನೆ. ಬಿಳಿ ಅಂಗಿ, ಪೈಜಾಮಾ ತೊಟ್ಟು ಠಾಣೆಯಿಂದ ಹೊರಬರುತ್ತಾನೆ. ಗಣಪತಿ ಮೂರ್ತಿಯು ಪ್ರತಿಷ್ಠಾಪನೆಗಾಗಿ ಮೆರವಣಿಗೆಯಲ್ಲಿ ಸಾಗಿದರೆ, ಈ ಭೋಸ್ಲೆ ‘ನಿವೃತ್ತಿಯಾದೆ ಇನ್ನು ಮುಂದೇನು?’ ಎಂಬ ಚಿಂತೆಯಲ್ಲೇ ಮನೆ ತಲುಪುತ್ತಾನೆ.

ಭೋಸ್ಲೆಗೆ ಮಕ್ಕಳಿಲ್ಲ. ಪತ್ನಿ ಜೊತೆ ನಿವೃತ್ತಿ ಜೀವನವನ್ನು ಹೇಗೆ ಕಳೆಯುತ್ತಾನೆ ಎನ್ನುವುದು ಚಿತ್ರದ ಕುತೂಹಲ. ಕೆಲಸದಲ್ಲೇ ಹೆಚ್ಚು ಸಮಯ ಕಳೆದ ಭೋಸ್ಲೆಗೆ ಸ್ನೇಹಿತರೆಂದರೆ ಅಲರ್ಜಿ. ಅಕ್ಕ–ಪಕ್ಕದ ನಿವಾಸಿಗಳೊಂದಿಗೂ ಸಂಪರ್ಕವಿಲ್ಲ. ನಿತ್ಯ ಒಂದೇ ದಿನಚರಿ ಅಳವಡಿಸಿಕೊಂಡ ಭೋಸ್ಲೆ ವೃದ್ಧನಾಗುತ್ತಾನೆ. ಈ ಜೀವನದ ಚಕ್ರವನ್ನು ಕಟ್ಟಿಕೊಡಲು ನಿರ್ದೇಶಕರು, ದೃಶ್ಯಗಳ ಪುನರಾವರ್ತನೆ ಮಾಡಿದ್ದಾರೆ. ಮಹಾರಾಷ್ಟ್ರಕ್ಕೆ ವಲಸೆ ಬಂದ ಬಿಹಾರದ ಜನರನ್ನು ಒಕ್ಕಲೆಬ್ಬಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವ ಹೋರಾಟಗಾರವಿಲಾಸ್‌, ಚಿತ್ರದ ಪ್ರಮುಖ ಪಾತ್ರಧಾರಿ. ಭೋಸ್ಲೆ ವಾಸವಿದ್ದ ಕಾಲೊನಿಯಲ್ಲೇ ಬಿಹಾರದ ಯುವಕನಿಗೆ ವಿಲಾಸ್‌ ಥಳಿಸುತ್ತಾನೆ. ಆ ಸಿಟ್ಟಿನಲ್ಲೇ ಯುವಕ, ಮರಾಠಿ ಫಲಕಗಳಿಗೆ ಕಪ್ಪು ಮಸಿ ಬಳಿಯುತ್ತಾನೆ. ದೊಡ್ಡ ಮಟ್ಟದ ಹೋರಾಟಕ್ಕೆ ಅಣಿಯಾಗುವ ವಿಲಾಸ್‌, ಭೋಸ್ಲೆಯ ಸಹಾಯ ಕೋರುತ್ತಾನೆ. ಆತನಿಗೆ ‘ಮೊದಲು ನಮ್ಮ ಕಾಲೊನಿಯ ಕೊಚ್ಚೆಯನ್ನು ಸ್ವಚ್ಛ ಮಾಡು. ಸೊಳ್ಳೆ ಕಾಟದಿಂದ ಆರೋಗ್ಯ ಹದಗೆಡುತ್ತದೆ’ ಎಂದು ಭೋಸ್ಲೆ ಹೇಳುವ ಮಾತು, ವ್ಯವಸ್ಥೆಯನ್ನು ಅಣಕಿಸುವಂತಿದೆ.

ADVERTISEMENT

‘ಸೇವಾವಧಿ ವಿಸ್ತರಣೆ ಮಾಡಿ’ ಎಂದು ಭೋಸ್ಲೆ, ಹಿರಿಯ ಪೊಲೀಸ್ ಅಧಿಕಾರಿ ಕಚೇರಿಗೆ ಅಲೆದು ಸುಸ್ತಾಗುತ್ತಾನೆ. ಅಷ್ಟರಲ್ಲೇ ಭೋಸ್ಲೆಗೆ ಬ್ರೈನ್ ಟ್ಯೂಮರ್‌ ಕಾಯಿಲೆ. ಪಕ್ಕದ ಮನೆಗೆ ಬಾಡಿಗೆಗೆ ಬರುವ ಬಿಹಾರದ ನರ್ಸ್‌ ಹಾಗೂ ಆಕೆಯ ಸಹೋದರ, ಭೋಸ್ಲೆ ಚಿಕಿತ್ಸೆಗೆ ನೆರವಾಗುತ್ತಾರೆ. ಅಲ್ಲಿಯವರೆಗೂ ಯಾರೊಂದಿಗೂ ಮಾತನಾಡದ ಭೋಸ್ಲೆ, ಅವರಿಬ್ಬರನ್ನು ಆತ್ಮೀಯವಾಗಿ ಕಾಣುತ್ತಾನೆ. ಅತ್ತ ಪೊಲೀಸ್ ಇಲಾಖೆಯ ನಿಯಮಗಳು ಸೇವಾವಧಿ ವಿಸ್ತರಣೆಗೆ ಅಡ್ಡಿಯಾಗುತ್ತವೆ. ಇತ್ತ ಮರಾಠರು–ಬಿಹಾರಿಗಳ ನಡುವಿನ ಮುನಿಸು ಜಾಸ್ತಿ ಆಗುತ್ತದೆ. ಗಣಪತಿ ಭೋಸ್ಲೆ ಸುತ್ತ ನಡೆಯುವ ಇಂಥ ಪ್ರಸಂಗಗಳು, ಆತನನ್ನು ‘ಗಣಪತಿ ವಿಸರ್ಜನೆ’ ರೀತಿಯಲ್ಲೇ ಕೊನೆಗೊಳಿಸುತ್ತವೆ. ಮನೋಜ್‌ ವಾಜಪೇಯಿ ಭೋಸ್ಲೆ ಪಾತ್ರಕ್ಕೆ ಜೀವ ತುಂಬಿದ್ದಾರೆ.

2011ರಲ್ಲಿ ಬರೆದಿದ್ದ ಸ್ಕ್ರಿಪ್ಟ್‌

ನಿರ್ದೇಶಕ ದೇವಶೀಷ್ ಮಖೀಜಾ, 2011ರಲ್ಲೇ ಚಿತ್ರದ ಸ್ಕ್ರಿಫ್ಟ್‌ ಸಿದ್ಧಪಡಿಸಿದ್ದರು., ನಿರ್ಮಾಪಕರು ಸಿಗದೇ ಚಿತ್ರೀಕರಣ ಮಾಡಲು ಆಗಿರಲಿಲ್ಲ. 2016ರಲ್ಲಿ ತಾವೇ ಹಣ ಹೂಡಿಕೆ ಮಾಡಿ ‘ತಾಂಡವ’ ಹೆಸರಿನಲ್ಲಿ 11 ನಿಮಿಷದ ಕಿರುಚಿತ್ರ ನಿರ್ಮಿಸಿದ್ದರು. ಅದೇ ಕಿರುಚಿತ್ರದ ಸ್ಕ್ರಿಪ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ‘ಫಿಲ್ಮ್‌ ಬಜಾರ್’ ಸಂಸ್ಥೆ, ‘ಭೋಂಸ್ಲೆ’ ಚಿತ್ರ ನಿರ್ಮಾಣಕ್ಕೆ ಹಣ ಹೂಡಿಕೆ ಮಾಡಿತು.

ಭಾಷೆ: ಹಿಂದಿ

ನಿರ್ದೇಶಕ: ದೇವಶೀಷ್ ಮಖೀಜಾ

ಸಂಗೀತ: ಮಂಗೇಶ್ ಧಾಕ್ಡೆ

ಸಮಯ: 128 ನಿಮಿಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.