ADVERTISEMENT

ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು: ನಟ ಚೇತನ್‌ಗೆ ಉಪೇಂದ್ರ ಟಾಂಗ್ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2022, 10:01 IST
Last Updated 20 ಅಕ್ಟೋಬರ್ 2022, 10:01 IST
ಉಪೇಂದ್ರ ಮತ್ತು ಚೇತನ್
ಉಪೇಂದ್ರ ಮತ್ತು ಚೇತನ್   

ಬೆಂಗಳೂರು: ‘ಕಾಂತಾರ’ ಸಿನಿಮಾದಲ್ಲಿ ಹೇಳಲಾದ ಕೆಲ ವಿಚಾರಗಳ ಬಗ್ಗೆ ‘ಆ ದಿನಗಳು’ ಖ್ಯಾತಿಯ ಚೇತನ್ ಅವರು ಅಪಸ್ವರ ತೆಗೆದಿದ್ದಾರೆ.

ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ರಿಷಬ್ ಶೆಟ್ಟಿ ಸಂದರ್ಶನದಲ್ಲಿ ಹೇಳಿದ್ದರು. ಆದರೆ, ಇದನ್ನು ಚೇತನ್ ಅವರು ವಿರೋಧಿಸಿದ್ದಾರೆ. ಇದೀಗ ಚೇತನ್ ಹೇಳಿಕೆ ಬಗ್ಗೆ ನಟ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿನ್ನೆ ಘಟನೆಯ ಬಗ್ಗೆ ನಾನು ಏನೂ ಹೇಳುವುದಿಲ್ಲ. ಈ ತರದ ಬೆಳವಣಿಗೆ ಅಸಹ್ಯ ಅನಿಸುತ್ತಿದೆ. ಬೆಂಕಿಗೆ ತುಪ್ಪ ಸುರಿಯುವ ಕೆಲಸ ಯಾರು ಮಾಡಬಾರದು. ಭೂತಾರಾಧನೆ ಅದು ಅವರವರ ವೈಯಕ್ತಿಕ ನಂಬಿಕೆ. ನಾನು ಅದೇ ಊರಿನಿಂದ ಬಂದವನು, ನನಗೆ ವಿಶೇಷವಾದ ನಂಬಿಕೆ ಇದೆ. ಜೊತೆಗೆ ನನ್ನ ತಂದೆ ಇವತ್ತಿಗೂ ನಾಗಾರಾದನೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ’ ಎಂದು ಉಪೇಂದ್ರ ಹೇಳಿದ್ದಾರೆ.

ADVERTISEMENT

‘ನಮ್ಮ ಕನ್ನಡ ಚಿತ್ರ ‘ಕಾಂತಾರ’ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ತಂದಿದೆ. ಆದರೆ, ಭೂತಕೋಲ ಹಿಂದೂ ಸಂಸ್ಕೃತಿ ಎಂದು ಹೇಳಿರುವ ನಿರ್ದೇಶಕ ರಿಷಬ್ ಶೆಟ್ಟಿ ಅವರ ಮಾತು ಸುಳ್ಳು. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆ’ ಎಂದು ಚೇತನ್‌ ಟ್ವೀಟ್ ಮಾಡಿದ್ದರು.

ಕರಾವಳಿ ಭಾಗದ ದೈವಗಳ ಆರಾಧನೆ, ತುಳು ಸಂಸ್ಕೃತಿಯನ್ನು ಕಾಂತಾರ ಸಿನಿಮಾದಲ್ಲಿ ಪ್ರಧಾನವಾಗಿ ಬಿಂಬಿಸಲಾಗಿದೆ. ಪ್ರಕೃತಿಗೂ, ಮನುಷ್ಯನಿಗೂ ಇರುವ ಸಂಬಂಧ, ಭೂತಾರಾಧನೆ, ಈ ಆಚರಣೆ ನ್ಯಾಯದ ವೇದಿಕೆಯಾಗಿ ಹೇಗೆ ಮಹತ್ವ ಪಡೆದಿದೆ ಎನ್ನುವುದನ್ನು ಸಿನಿಮಾದಲ್ಲಿ ವಿವರಿಸಲಾಗಿದೆ.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.