ADVERTISEMENT

ಕಿಚ್ಚನ ಅಭಿಮಾನಿಗಳಿಗೆ ಬುರ್ಜ್‌ ಖಲೀಫಾದಲ್ಲಿ ಕಾದಿದೆ ಅಚ್ಚರಿ

ಕೆ.ಎಂ.ಸಂತೋಷಕುಮಾರ್
Published 24 ಡಿಸೆಂಬರ್ 2020, 19:30 IST
Last Updated 24 ಡಿಸೆಂಬರ್ 2020, 19:30 IST
ಸುದೀಪ್‌
ಸುದೀಪ್‌   

ಸುದೀಪ್‌ ನಟನೆಯ ಮತ್ತೊಂದು ಬಹು ನಿರೀಕ್ಷೆಯ ಪ್ಯಾನ್‌ ಇಂಡಿಯಾ ಚಿತ್ರವೆಂದರೆ ‘ಫ್ಯಾಂಟಮ್‌’. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲೇ ಚಿತ್ರೀಕರಣದ ಅಖಾಡಕ್ಕೆ ಇಳಿದ ಬಿಗ್‌ ಬಜೆಟ್‌ ಸಿನಿಮಾವಿದು. ನಟರು, ನಟಿಯರು ಸೇರಿ ಸುಮಾರು 200 ಮಂದಿ ಇರುವ ಚಿತ್ರತಂಡದಲ್ಲಿ ಒಬ್ಬರೇ ಒಬ್ಬರು ಕೂಡ ಕೊರೊನಾ ಅಂಟಿಸಿಕೊಳ್ಳದೆ ಯಶಸ್ವಿಯಾಗಿ ಚಿತ್ರೀಕರಣ ನಡೆಸಿರುವ ಅಗ್ಗಳಿಕೆ ‘ಫ್ಯಾಂಟಮ್‌’ನದು. ಸುದೀಪ್‌ ಮತ್ತು ನಿರ್ದೇಶಕ ಅನೂಪ್‌ ಭಂಡಾರಿ ಸದ್ಯ ಚಿತ್ರತಂಡದೊಂದಿಗೆ ಕೇರಳದಲ್ಲಿ ಚಿತ್ರೀಕರಣಕ್ಕಾಗಿ ಬೀಡು ಬಿಟ್ಟಿದ್ದಾರೆ.

ಸುದೀಪ್‌ ಈ ಚಿತ್ರದಲ್ಲಿ ‘ವಿಕ್ರಾಂತ್‌ ರೋಣ’ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಫಸ್ಟ್‌ಲುಕ್‌, ಮೋಷನ್‌ ಪೋಸ್ಟರ್‌ಗಳಿಂದಲೂ ಈ ಚಿತ್ರ ಸಾಕಷ್ಟು ಕುತೂಹಲ ಕೆರಳಿಸಿದೆ. ‘ಫ್ಯಾಂಟಮ್‌’ ಜಗತ್ತಿನ ಫ್ಯಾಂಟಸಿಯನ್ನು ವಿಶ್ವದ ಎತ್ತರದ ಕಟ್ಟಡ ದುಬೈನ ಬುರ್ಜ್‌ ಖಲೀಫಾದಲ್ಲಿ ಅನಾವರಣಗೊಳಿಸಲು ಚಿತ್ರತಂಡ ಸಿದ್ಧತೆಯಲ್ಲಿದೆ ಎಂದು ಚಿತ್ರದ ನಿರ್ಮಾಪಕ ಜಾಕ್‌ ಮಂಜು ‘ಪ್ರಜಾಪ್ಲಸ್‌’ ಜತೆಗೆ ಮಾತಿಗಾರಂಭಿಸಿದರು.

ಜನವರಿಯ ಕೊನೆಯಲ್ಲಿ ನಡೆಯಲಿರುವ ಈ ಮೆಗಾ ಇವೆಂಟ್‌ನಲ್ಲಿ ಸಿನಿಪ್ರಿಯರಿಗೆ ಅದ್ಧೂರಿ ರಸದೌತಣ, ಅಚ್ಚರಿ ಕಾದಿದೆ. ಸುದೀಪ್‌ ಚಿತ್ರರಂಗಕ್ಕೆ ಕಾಲಿಟ್ಟು 25 ವಸಂತಗಳು ಪೂರ್ಣಗೊಂಡಿವೆ. ‘ಫ್ಯಾಂಟಮ್‌’ ಕೂಡ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಚಿತ್ರದ ವಿಶೇಷ ಫೋಟೊಗಳೋ, ಟೀಸರೋ ಅಥವಾ ಸಾಂಗ್‌.. ಹೀಗೆ ಯಾವುದೋ ಒಂದು ಅಚ್ಚರಿ ಸಿನಿಪ್ರಿಯರಿಗೆ ಸಿಗಲಿದೆ. ಆದರೆ ಅದೇನಿರಬಹುದೆಂದು ಈಗಲೇ ಹೇಳುವುದಿಲ್ಲ, ಅದನ್ನು ಸುದೀಪ್‌ ಅಭಿಮಾನಿಗಳ ಊಹೆಗೆ ಬಿಟ್ಟಿದ್ದೇವೆ ಎಂದು ಮಾತು ವಿಸ್ತರಿಸಿದರು.

ADVERTISEMENT

ವಿಕ್ರಾಂತ್‌ ರೋಣ ಪಾತ್ರಕ್ಕೆ ಸುದೀಪ್‌ ನಡೆಸಿದ ಸಿದ್ಧತೆ ಬಗ್ಗೆ ಮಾತು ಹೊರಳಿಸಿದ ಅವರು, ಪೈಲ್ವಾನ್‌ ಚಿತ್ರಕ್ಕಾಗಿ ಸುದೀಪ್‌ ಮೊದಲ ಬಾರಿಗೆ ಜಿಮ್‌ನಲ್ಲಿ ದೇಹ ಹುರಿಗೊಳಿಸುವ ಕಸರತ್ತು ಆರಂಭಿಸಿದ್ದರು. ಆ ಚಿತ್ರ ಮುಗಿದರೂ ಕಸರತ್ತು ಬಿಡದೆ, ‘ಫ್ಯಾಂಟಮ್‌’ಗಾಗಿ ಅದನ್ನು ಇನ್ನಷ್ಟು ಹೆಚ್ಚಿಸಿಕೊಂಡರು. ಸಹಜವಾಗಿಯೇ ‘ವಿಕ್ರಾಂತ್‌ ರೋಣ’ಗೆ ಕಟ್ಟುಮಸ್ತಾದ ಶರೀರ ಸಿಕ್ಕಿತು. ಸುದೀಪ್‌ ಜತೆಗೆ ನಿರೂಪ್‌ ಭಂಡಾರಿ, ನೀತಾ ಅಶೋಕ್‌, ಮಧುಸೂದನ್‌ ರಾವ್‌, ರವಿಶಂಕರ್‌ಗೌಡ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ, ಇನ್ನು ಕೆಲವು ಹೊಸ ಕಲಾವಿದರನ್ನು ಪರಿಚಯಿಸುತ್ತಿದ್ದೇವೆ ಎನ್ನುವ ಮಾತು ಸೇರಿಸಿದರು ಅವರು. ಆದರೆ, ನಾಯಕಿ ಯಾರು ಎನ್ನುವ ಪ್ರಶ್ನೆ ಮುಂದಿಟ್ಟಾಗ, ‘ಆ ಗುಟ್ಟನ್ನು ಸದ್ಯಕ್ಕೆ ಬಿಡುವುದಿಲ್ಲ’ ಎನ್ನುವುದು ಅವರ ಜಾಣ್ಮೆಯ ಉತ್ತರ.

ಫ್ಯಾಂಟಮ್‌ ಪ್ಯಾನ್‌ ಇಂಡಿಯಾ ಚಿತ್ರ; ಬಜೆಟ್ ದಾಟಲಿದೆ ₹60 ಕೋಟಿ

‘ಫ್ಯಾಂಟಮ್‌’ ಜಗತ್ತು ಸಾಮಾನ್ಯದ್ದಲ್ಲ. ಕಥೆಯೂ ಅದ್ಭುತವಾಗಿದೆ. ಆ ಕಥೆ ಅನೂಪ್‌ ಭಂಡಾರಿ ಅವರದ್ದು. ಕಥೆಗೆ ಮತ್ತು ಸುದೀಪ್‌ ಅವರ ಛಾರ್ಮ್‌ಗೆ ನ್ಯಾಯ ಸಲ್ಲಬೇಕೆಂದರೆ ಫ್ಯಾಂಟಮ್‌ ಪ್ಯಾನ್‌ ಇಂಡಿಯಾ ಚಿತ್ರವೇ ಆಗಬೇಕಿತ್ತು. ಆರಂಭದಲ್ಲಿ ಪ್ಯಾನ್‌ ಇಂಡಿಯಾ ಚಿತ್ರದ ಯೋಜನೆ ಇಲ್ಲದಿದ್ದರೂ ಆನಂತರದಲ್ಲಿ ಚಿತ್ರವೇ ತನ್ನ ಹಾದಿ ನಿರ್ಮಿಸಿಕೊಂಡು ಸಾಗಿತು. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದೆ ಎನ್ನುವುದು ಅವರ ಮಾತು.

ಈಗಾಗಲೇ ಹೈದರಾಬಾದ್‌, ಬೆಂಗಳೂರು ಹಾಗೂ ಕೇರಳದಲ್ಲಿ ಒಟ್ಟು 113 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಕೇರಳದಲ್ಲಿ 34 ದಿನಗಳು ಚಿತ್ರೀಕರಣ ನಡೆಯಲಿದೆ. ಒಂದಿಷ್ಟು ಆ್ಯಕ್ಷನ್‌, ಮನೆಯ ಒಳಾಂಗಣ, ಹೊರಾಂಗಣ ದೃಶ್ಯಗಳು ಹಾಗೂ ಹಾಡಿನ ಚಿತ್ರೀಕರಣ ಕೇರಳದಲ್ಲಿ ನಡೆಯುತ್ತಿದೆ. ಇದು ಮುಗಿದರೆ ಚಿತ್ರದ ಶೇ 90 ಭಾಗ ಪೂರ್ಣವಾದಂತೆ. ಇನ್ನು ಎರಡು ಹಾಡುಗಳು ಮಾತ್ರ ಚಿತ್ರೀಕರಣಕ್ಕೆ ಬಾಕಿ ಇರಲಿವೆ. ಬೆಂಗಳೂರಿನಲ್ಲೇ ಅದ್ಧೂರಿ ಸೆಟ್‌ ಹಾಕಿ ಹಾಡುಗಳನ್ನು ಚಿತ್ರೀಕರಿಸುವ ಯೋಜನೆ ಇದೆ.

ಕಲಾ ನಿರ್ದೇಶಕ ಶಿವಕುಮಾರ್‌ ಅವರು ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ ಈ ಚಿತ್ರಕ್ಕಾಗಿ ನಿರ್ಮಿಸಿದ ಎರಡು ಸೆಟ್‌ಗಳ ವೆಚ್ಚವೇ ಸುಮಾರು ₹17.50 ಕೋಟಿ ದಾಟಿತು. ಇನ್ನು ಚಿತ್ರ ಪೂರ್ಣವಾಗುವುದರೊಳಗೆ ಬಜೆಟ್‌ ₹60 ಕೋಟಿ ಮೀರಲಿದೆ.2021ರ ಮಧ್ಯ ಭಾಗದಲ್ಲಿ ‘ಫ್ಯಾಂಟಮ್‌’ ಅನ್ನು ಚಿತ್ರಮಂದಿರಕ್ಕೆ ತರುವ ಯೋಜನೆ ಇದೆ. ಆದರೆ, ಎಲ್ಲವೂ ಕೊರೊನಾ ನಿಯಂತ್ರಣದ ಮೇಲೆ ನಿಂತಿದೆ ಎನ್ನಲು ಜಾಕ್‌ ಮಂಜು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.