ADVERTISEMENT

BBK 12 | ಬಿಗ್‌ಬಾಸ್‌ 12ಕ್ಕೂ ಕಿಚ್ಚ ಸುದೀಪ್‌ ಸಾರಥ್ಯ: 4 ಆವೃತ್ತಿಗಳಿಗೆ ಸಹಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:20 IST
Last Updated 30 ಜೂನ್ 2025, 13:20 IST
ಸುದೀಪ್‌ 
ಸುದೀಪ್‌    

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್‌ಬಾಸ್‌’ ಕಾರ್ಯಕ್ರಮದ 12ನೇ ಆವೃತ್ತಿಯನ್ನು ನಟ ಕಿಚ್ಚ ಸುದೀಪ್‌ ಅವರೇ ನಡೆಸಿಕೊಡಲಿದ್ದಾರೆ.

ಕಳೆದ ಜನವರಿ 20ರಂದು ಎಕ್ಸ್‌ನಲ್ಲಿ ‘11ನೇ ಆವೃತ್ತಿಯೇ ನನ್ನ ಕೊನೆ ಆವೃತ್ತಿ’ ಎಂದು ಸುದೀಪ್‌ ಘೋಷಿಸಿದ್ದರು. 12ನೇ ಆವೃತ್ತಿ ಆರಂಭದ ಯಾವಾಗ ಎಂದು ವಾಹಿನಿ ಇನ್ನೂ ಘೋಷಿಸಿಲ್ಲ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್‌, ‘ನಾನು ತಡರಾತ್ರಿ ಮೂರು ಗಂಟೆ ಸುಮಾರಿಗೆ ಟ್ವೀಟ್‌ ಮಾಡಿದ್ದೆ. ಅಂದು ನಾನು ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದ್ದೆ. ಇದೀಗ ಅಷ್ಟೇ ಪ್ರಾಮಾಣಿಕವಾಗಿ ಮರಳಿ ಬಂದಿದ್ದೇನೆ. ನನ್ನನ್ನು ಕರೆದ ರೀತಿ, ನೀವೇ ಬೇಕು ಎಂದು ಕೇಳಿದ ರೀತಿ ನಾನು ಮರಳಲು ಪ್ರಮುಖ ಕಾರಣಗಳಲ್ಲೊಂದು. ಬಿಗ್‌ಬಾಸ್‌ ಅನ್ನು ಜನ ಐಪಿಎಲ್‌ ಮಾದರಿಯಲ್ಲಿ ನೋಡುತ್ತಾರೆ. ವೀಕ್ಷಕರು ಬಹಳ ಕುತೂಹಲದಿಂದ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಮನೆ ಒಳಗೆ ಕಳುಹಿಸುವ ಸ್ಪರ್ಧಿಗಳ ವಿಚಾರದಲ್ಲಿ ವಾಹಿನಿಗೆ ಸ್ಪಷ್ಟತೆ ಇದ್ದರೆ ನನಗೆ ಯಾವ ಸಮಸ್ಯೆಯೂ ಇಲ್ಲ. ನಾನು ಯಾವತ್ತೂ ಷರತ್ತುಗಳನ್ನು ಹಾಕಿಲ್ಲ. ಹೊಸ ಆವೃತ್ತಿಯನ್ನು ಇನ್ನಷ್ಟು ಉತ್ತಮಗೊಳಿಸಲು ಕೆಲವು ಸಲಹೆಗಳನ್ನು ನೀಡಿದ್ದೇನೆ. ನಮ್ಮ ಮೂಲ ಕನ್ನಡ. ಕನ್ನಡಕ್ಕೆ ಸ್ವಲ್ಪ ಪ್ರೀತಿ ತೋರಿಸಿ ಎಂದಿದ್ದೆ. ವಾಹಿನಿಯಿಂದ ಕೊರತೆ ಬಂದಿಲ್ಲ, ಬರುವುದಿಲ್ಲ. ಆದರೆ ಮೇಲಿನಿಂದ ಆ ಪ್ರೀತಿ ಕಾಣಿಸುತ್ತಿರಲಿಲ್ಲ. ಕಾರ್ಯಕ್ರಮ ಎಂದರೆ ಕೇವಲ ಟಿವಿಆರ್‌ ಅಲ್ಲ. ನಮ್ಮ ಸ್ಪರ್ಧಿಗಳಿಗೆ ಒಳ್ಳೆಯ ಮನೆ ನೀಡಿ. ಆ ಮನೆ ಸುಂದರವಾಗಿರಬೇಕು. ನಾಲ್ಕು ಗೋಡೆಯಾಗಬಾರದು. ನನ್ನ ವೇದಿಕೆ ನನ್ನ ಗತ್ತು. ರೇಟಿಂಗ್‌ ಬರುತ್ತಿರುವುದು ನಮ್ಮ ಭಾಷೆ, ನಮ್ಮ ಜನರಿಂದ. ಇದು ಬಹಳ ಮುಖ್ಯ. ಇದಕ್ಕೆ ಪ್ರತಿಯೊಬ್ಬರೂ ಸ್ಪಂದಿಸಿದರು’ ಎಂದರು ಸುದೀಪ್‌.  

ADVERTISEMENT

‘ಅಮ್ಮನನ್ನು ಕಳೆದುಕೊಂಡಿದ್ದೂ ನಾನು ಈ ಕಾರ್ಯಕ್ರಮ ನಡೆಸಿಕೊಡುವುದಿಲ್ಲ ಎನ್ನುವುದಕ್ಕೆ ಮತ್ತೊಂದು ಕಾರಣವಾಗಿತ್ತು. ವೇದಿಕೆ ಹತ್ತಿದಾಗ ಈ ವಿಷಯ ಕಾಡುತ್ತಿತ್ತು. ಅಮ್ಮನನ್ನು ಕಳೆದುಕೊಂಡ ಎರಡೇ ವಾರದಲ್ಲಿ ಮತ್ತೆ ವೇದಿಕೆ ಹತ್ತಿದ್ದೆ. ಆಗ ಮಾನಸಿಕವಾಗಿ ತುಂಬಾ ಕಾಡುತ್ತಿತ್ತು. ಬಿಗ್‌ಬಾಸ್‌ ವಾರಾಂತ್ಯದ ಕಾರ್ಯಕ್ರಮದ ಬಳಿಕ ಅಮ್ಮ ಬಹಳಷ್ಟು ಮಾತನಾಡುತ್ತಿದ್ದರು. ಅಮ್ಮ ಪ್ರೀತಿಸುತ್ತಿದ್ದ ಒಂದು ಕಾರ್ಯಕ್ರಮವಿದು, ಇದನ್ನು ನಡೆಸಿಕೊಡು ಎಂದು ಮನೆಯವರೂ ಹೇಳಿದರು’ ಎಂದು ಸುದೀಪ್‌ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.