ADVERTISEMENT

ಆರ್‌ಆರ್‌ಆರ್‌ ಸಿನಿಮಾದ ಹೊಸ ಪೋಸ್ಟರ್‌: ಚಿತ್ರೀಕರಣ ಶೀಘ್ರವೇ ಮುಕ್ತಾಯ –ಚಿತ್ರತಂಡ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 11:01 IST
Last Updated 29 ಜೂನ್ 2021, 11:01 IST
ಆರ್‌ಆರ್‌ಆರ್‌ ಸಿನಿಮಾದ ಪೋಸ್ಟರ್‌
ಆರ್‌ಆರ್‌ಆರ್‌ ಸಿನಿಮಾದ ಪೋಸ್ಟರ್‌   

ಹೈದರಾಬಾದ್‌: ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಆರ್‌ಆರ್‌ಆರ್‌’ (ರೈಸ್‌–ರೋರ್‌–ರಿವೋಲ್ಟ್‌) ಚಿತ್ರೀಕರಣ ಪುನರಾರಂಭಗೊಂಡ ಬೆನ್ನಲ್ಲೇ ಚಿತ್ರತಂಡ ಸಿಹಿ ಸುದ್ದಿಯನ್ನು ಕೊಟ್ಟಿದೆ.

ಚಿತ್ರತಂಡ ಮಂಗಳವಾರ ಹೊಸ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಚಿತ್ರೀಕರಣದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವುದು ವಿಶೇಷ.

ಬಿಡುಗಡೆಯಾಗಿರುವ ನೂತನ ಪೋಸ್ಟರ್‌ನಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ರಾಮ್‌ ಚರಣ್‌ ಬೈಕಿನಲ್ಲಿ ಸಂತಸದಿಂದ ತೆರಳುವ ದೃಶ್ಯವಾಗಿದೆ. ಎನ್‌ಟಿಆರ್‌ ಬೈಕ್‌ ರೈಡ್‌ ಮಾಡುತ್ತಿದ್ದರೆ, ರಾಮ್‌ ಚರಣ್‌ ಹಿಂದೆ ಕುಳಿತ್ತಿದ್ದಾರೆ. ಈ ಪೋಸ್ಟರ್‌ಗೆ ರಾಮ್‌ ಚರಣ್‌ ಮತ್ತು ಎನ್‌ಟಿಆರ್‌ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿದೆ.

ADVERTISEMENT

ಪೋಸ್ಟರ್ ಜೊತೆಗೆ ಸಿನಿಮಾದ ಶೂಟಿಂಗ್‌ ಬಗ್ಗೆಯೂ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಎರಡು ಹಾಡುಗಳನ್ನು ಹೊರತುಪಡಿಸಿದ್ದಾರೆ ಸಿನಿಮಾದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ. ರಾಮ್‌ ಚರಣ್‌ ಹಾಗೂ ಎನ್‌ಟಿಎರ್‌ ಈಗಾಗಲೇ ಎರಡು ಭಾಷೆಗಳ ಡಬ್ಬಿಂಗ್‌ ಕೆಲಸ ಮುಗಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕುಮರಾಂ ಭೀಮ್‌ ಅವರ ಜೀವನವನ್ನು ಆಧರಿಸಿದ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಎನ್‌ಟಿಆರ್ ಜೂನಿಯರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.