ADVERTISEMENT

ರೌಡಿ ವಿಕಾಸ್‌ ದುಬೆ ಬಯೋಪಿಕ್‌ಗೆ ಸಿದ್ಧತೆ: ದುಬೆ ಪಾತ್ರದಲ್ಲಿ ಮನೋಜ್ ಬಾಜ್‌ಪೇಯಿ?

ದುಬೆ ಪಾತ್ರದಲ್ಲಿ ನಟ ಮನೋಜ್ ಬಾಜ್‌ಪೇ‌ಯಿ ನಟನೆ?

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 7:56 IST
Last Updated 11 ಜುಲೈ 2020, 7:56 IST
ವಿಕಾಸ್‌ ದುಬೆ
ವಿಕಾಸ್‌ ದುಬೆ   

ಒಂದು ದಶಕದ ಹಿಂದೆ ಬಾಲಿವುಡ್‌ನಲ್ಲಿ ಹಾಡು, ಕುಣಿತ, ಹೊಡೆದಾಟ, ಹಾಸ್ಯ ಪ್ರಧಾನ ಸಿನಿಮಾಗಳದ್ದೇ ಟ್ರೆಂಡ್‌ ಸೃಷ್ಟಿಯಾಗಿತ್ತು. 2011ರ ನಂತರ ದಿಗ್ಗಜರ ಬಯೋಪಿಕ್‌ಗಳ ಸರಣಿ ಶುರುವಾಯಿತು. ಕ್ರೀಡಾ ರಂಗದ ಸಾಧಕರೇ ಇದರಲ್ಲಿ ಮೇಲುಗೈ ಸಾಧಿಸಿದ್ದು ಉಂಟು. ‘ಭಾಗ್ ಮಿಲ್ಕಾ ಭಾಗ್‌’, ‘ಮೇರಿ ಕೋಮ್’, ‘ದಂಗಲ್’, ‘ಎಂ.ಎಸ್. ದೋನಿ’, ‘ಸಚಿನ್ ತೆಂಡೂಲ್ಕರ್’, ‘ಅಜರ್’ ಹೀಗೆ ಕ್ರೀಡಾಪಟುಗಳ ಯಶೋಗಾಥೆ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಿದ್ದು ಗುಟ್ಟೇನಲ್ಲ.

ತಮ್ಮ ವೃತ್ತಿರಂಗದಲ್ಲಿ ಮಿಂಚುತ್ತಿರುವವರನ್ನೇ ಚಿತ್ರಕಥೆಯನ್ನಾಗಿಸಿದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂಬುದು ಬಹುತೇಕ ನಿರ್ದೇಶಕರು ಮತ್ತು ನಿರ್ಮಾಪಕರ ಲೆಕ್ಕಾಚಾರ. ಕ್ರಿಕೆಟಿಗ ಮಹೇಂದ್ರಸಿಂಗ್ ದೋನಿ ಕುರಿತ ಸಿನಿಮಾ ಇದಕ್ಕೊಂದು ಉತ್ತಮ ನಿದರ್ಶನ.

ಪ್ರಸ್ತುತ ಬಯೋಪಿಕ್‌ ಸಿನಿಮಾಗಳ ನಿರ್ಮಾಣ ಕೇವಲ ಸಾಧಕರಿಗಷ್ಟೇ ಸೀಮಿತಗೊಂಡಿಲ್ಲ. ನಟಿ ಸಿಲ್ಕ್‌ ಸ್ಮಿತಾ ಕುರಿತ ‘ಡರ್ಟಿ ಪಿಕ್ಚರ್’, ದಿಟ್ಟ ಗಗನಸಖಿ ನೀರಜಾ ಬಾನೋಟ್‌ ಕುರಿತ ಬಯೋಪಿಕ್‌ಗಳು ನಿರ್ಮಾಣವಾಗಿರುವುದೇ ಇದಕ್ಕೆ ಉದಾಹರಣೆ.

ADVERTISEMENT

ಮತ್ತೊಂದೆಡೆ ಭೂಗತ ಲೋಕದ ಡಾನ್‌ಗಳ ಬಯೋಪಿಕ್‌ಗಳನ್ನು ತೆರೆಯ ಮೇಲೆ ತರಲು ನಿರ್ಮಾಪಕರು ಮತ್ತು ನಿರ್ದೇಶಕರು ಪೈಪೋಟಿಗೆ ಇಳಿಯುವುದು ಉಂಟು. ಚಂಬಲ್ ಕಣಿವೆಯ ಡಕಾಯಿತ ರಾಣಿಯಾಗಿ ಮೆರೆದ ಫೂಲನ್‌ ದೇವಿ ಕುರಿತ ‘ಬ್ಯಾಂಡಿಟ್‌ ಕ್ವೀನ್’ ಚಿತ್ರವೂ ಸಾಕಷ್ಟು ಸುದ್ದಿ ಮಾಡಿತ್ತು. ಈಗ ಉತ್ತರ ಪ್ರದೇಶದ ಕಾನ್ಪುರದ ರೌಡಿ ವಿಕಾಸ್‌ ದುಬೆಯ ಬಯೋಪಿಕ್‌ಗೆ ಸಿದ್ಧತೆ ನಡೆದಿದೆ.

ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳುವಾಗ ಶುಕ್ರವಾರ ಎನ್‌ಕೌಂಟರ್‌ಗೆ ಬಲಿಯಾದ ದುಬೆಯ ಜೀವನಚರಿತ್ರೆಯನ್ನು ಬೆಳ್ಳಿತೆರೆಯ ಮೇಲೆ ತರಲು ನಟ ಮನೋಜ್ ಬಾಜ್‌ಪೇಯಿ ನಟನೆಯ ‘ಬೋಂಸ್ಲೆ’ ಚಿತ್ರದ ನಿರ್ಮಾಪಕರು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಅಂದಹಾಗೆ ಮನೋಜ್‌ ಬಾಜ್‌ಪೇಯಿ ಅವರೇ ದುಬೆ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

‘ವಿಕಾಸ್‌ ದುಬೆಯ ಬದುಕನ್ನು ತೆರೆಯ ಮೇಲೆ ತರಲು ನಿರ್ಧರಿಸಿರುವುದು ದಿಟ. ಈ ಬಗ್ಗೆ ನಟ ಮನೋಜ್ ಬಾಜ್‌ಪೇ‌ಯಿ ಜೊತೆಗೂ ಮಾತುಕತೆ ನಡೆಸಿದ್ದೇನೆ. ಆದರೆ, ಅವರೊಟ್ಟಿಗೆ ಅಧಿಕೃತವಾಗಿ ಒಪ್ಪಂದ ಮಾಡಿಕೊಂಡಿಲ್ಲ. ಸ್ಕ್ರಿಪ್ಟ್‌ ಕೆಲಸ ಶುರು ಮಾಡಲು ಮನೋಜ್‌ ಸೂಚಿಸಿದ್ದಾರೆ. ಸ್ಕ್ರಿಪ್ಟ್‌ ಇಷ್ಟವಾದರಷ್ಟೇ ಅವರು ನಟಿಸಲು ಒಪ್ಪಿಕೊಳ್ಳುತ್ತಾರೆ. ಮನೋಜ್‌ ಅವರನ್ನೇ ಈ ಸಿನಿಮಾದಲ್ಲಿ ನಟಿಸಲು ಕೋರುತ್ತೇವೆ’ ಎಂದು ನಿರ್ಮಾಪಕ ಸಂದೀಪ್‌ ಕಪೂರ್ ‘ಇಂಡಿಯನ್‌ ಎಕ್ಸ್‌ಪ‍್ರೆಸ್‌’ಗೆ ನೀಡಿರುವ ಸಂದರ್ಶನದಲ್ಲಿ ಖಚಿತಪಡಿಸಿದ್ದಾರೆ.

‘ಪ್ರೇಕ್ಷಕರಿಗೆ ಗಟ್ಟಿಯಾದ ಕಥೆ ನೀಡುವುದು ನಿರ್ಮಾಪಕರ ಕರ್ತವ್ಯ. ದುಬೆಯ ಎನ್‌ಕೌಂಟರ್‌ ನಡೆದು ಒಂದು ದಿನವಾಗಿದೆಯಷ್ಟೇ. ಒಳ್ಳೆಯ ಕಥೆಗಾರ ಮತ್ತು ನಿರ್ದೇಶಕರ ಹುಡುಕಾಟದಲ್ಲಿದ್ದೇನೆ. ಎಲ್ಲವೂ ಅಂತಿಮಗೊಂಡ ಬಳಿಕ ಸಿನಿಮಾದ ಬಗ್ಗೆ ಅಧಿಕೃತವಾಗಿ ಪ್ರಕಟಿಸುತ್ತೇನೆ’ ಎಂದಿದ್ದಾರೆ.

‘ಗ್ಯಾಂಗ್‌ಸ್ಟರ್‌’ ವಿಕಾಸ್‌ ದುಬೆ ಮೇಲೆ ಉತ್ತರ ಪ್ರದೇಶದಲ್ಲಿ 62 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಐದು ಕೊಲೆ ಮತ್ತು ಎಂಟು ಕೊಲೆ ಯತ್ನ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.