ADVERTISEMENT

3 ತಿಂಗಳಾಗಿದ್ದಾಗಲೇ ಮಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿದ್ದೆ: ಬಿಪಾಶಾ

ಪಿಟಿಐ
Published 6 ಆಗಸ್ಟ್ 2023, 14:16 IST
Last Updated 6 ಆಗಸ್ಟ್ 2023, 14:16 IST
   

ಬೆಂಗಳೂರು: ನನ್ನ ಮಗಳು ಹುಟ್ಟಿದಾಗಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಳು. ಹಾಗಾಗಿ, ಮೂರು ತಿಂಗಳ ಬಳಿಕ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿದ್ದಾಗಿ ನಟಿ ಬಿಪಾಶಾ ಬಸು ಹೇಳಿದ್ದಾರೆ.

ಬಿಪಾಶಾ ಮತ್ತು ಅವರ ಪತಿ ಕರಣ್ ಸಿಂಗ್ ಗ್ರೋವರ್ ದಂಪತಿ ನವೆಂಬರ್ 2022ರಲ್ಲಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದರು.

ಶನಿವಾರ, ನಟಿ ನೇಹಾ ಧೂಪಿಯಾ ಜೊತೆಗಿನ ಇನ್‌ಸ್ಟಾಗ್ರಾಂ ಲೈವ್ ಸಂವಾದದಲ್ಲಿ ಮಾತನಾಡಿರುವ ಬಿಪಾಶಾ, ನನ್ನ ಮಗಳು ದೇವಿ ಹುಟ್ಟಿದ ಮೂರು ದಿನಗಳ ನಂತರ ಅವಳಿಗೆ ಇದ್ದ ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್(ವಿಎಸ್‌ಡಿ) ಬಗ್ಗೆ ವೈದ್ಯರು ನನಗೆ ತಿಳಿಸಿದ್ದರು. ವಿಎಸ್‌ಡಿ ಎಂದರೆ ಏನು? ಎಂಬ ಬಗ್ಗೆ ಮೊದ ಮೊದಲು ನಮಗೆ ಏನೂ ತಿಳಿದಿರಲಿಲ್ಲ. ಒಂದು ರೀತಿಯ ಅಸ್ಪಷ್ಟತೆಯಲ್ಲೇ ಕಾಲ ಕಳೆದೆವು. ಮನೆಯವರಿಗೂ ತಿಳಿಸಿರಲಿಲ್ಲ. ಅದು ನಿಜಕ್ಕೂ ಕ್ಲಿಷ್ಟಕರ ಸಂದರ್ಭವಾಗಿತ್ತು. ಬೇರೆ ಸಾಮಾನ್ಯ ತಂದೆ ತಾಯಿಗಿಂತ ನಮ್ಮ ಸ್ಥಿತಿ ಭಿನ್ನವಾಗಿತ್ತು ಎಂದಿದ್ದಾರೆ. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಹಲವು ತಾಯಂದಿರು ನನ್ನ ನೆರವಿಗೆ ನಿಂತಿದ್ದರು. ಹಾಗಾಗಿ ಈ ವಿಷಯವನ್ನು ಬಹಿರಂಗಪಡಿಸುತ್ತಿದ್ದೇನೆ ಎಂದಿದ್ದಾರೆ.

ADVERTISEMENT

ಬಳಿಕ, ಮಗುವಿನ ಹೃದಯದಲ್ಲಿ ಎರಡು ರಂಧ್ರಗಳಿವೆ ಎಂಬುದನ್ನು ಅರಿತು ನಾನು ಮತ್ತು ಪತಿ ಗ್ರೋವರ್ ಸ್ತಬ್ಧರಾಗಿದ್ದೆವು. ಮಗು ಹುಟ್ಟಿದ ಖುಷಿಯನ್ನು ಸಂಭ್ರಮಿಸಲು ಆಗದೆ ಒದ್ದಾಡಿದೆವು ಎಂದು ಬಿಪಾಶಾ ಹೇಳಿದ್ದಾರೆ.

ನಾವು ಸಹಜ ಸ್ಥಿತಿಗೆ ಮರಳಲು 40 ದಿನ ಆಯಿತು ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.