ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿಯನ್ನು ಶ್ರೀನಿಧಿ ಬೆಂಗಳೂರು ಅವರಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ನಿರ್ದೇಶಕ ಜಯತೀರ್ಥ ಪ್ರದಾನ ಮಾಡಿದರು.
ಸಿನಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಶಹಬ್ಬಾಸ್ ಎನಿಸಿಕೊಂಡಿದ್ದ ‘ಬ್ಲಿಂಕ್’ ಸಿನಿಮಾ ಒಟಿಟಿಯಲ್ಲಿಯೂ ಬಹಳ ಸದ್ದು ಮಾಡಿದ್ದ ಚಿತ್ರ. ವೈಜ್ಞಾನಿಕ ಟೈಂ ಟ್ರಾವೆಲರ್ ಕಥಾಹಂದರದ ಈ ಸಿನಿಮಾ ಗೆಲುವು, ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದ ಶ್ರೀನಿಧಿ ಬೆಂಗಳೂರು ಅವರಿಗೆ ಆತ್ಮವಿಶ್ವಾಸವನ್ನು ತಂದುಕೊಟ್ಟಿತು.
ಇದೀಗ ‘ಅತ್ಯುತ್ತಮ ಚೊಚ್ಚಲ ನಿರ್ದೇಶನ’ ಪ್ರಶಸ್ತಿಯು ಅವರ ಆತ್ಮವಿಶ್ವಾಸಕ್ಕೆ ಇನ್ನಷ್ಟು ಇಂಬು ನೀಡಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ನಿರ್ದೇಶಕ ಜಯತೀರ್ಥ ಅವರು ಶ್ರೀನಿಧಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡ ಸಚಿವ ರಾಮಲಿಂಗಾ ರೆಡ್ಡಿ, ‘ಕಾಲೇಜು ದಿನಗಳಲ್ಲಿ ಬಹಳ ಸಿನಿಮಾಗಳನ್ನು ನೋಡುತ್ತಿದ್ದೆ. ರಾಜ್‌ಕುಮಾರ್ ಅವರ ಸಿನಿಮಾ ಎಂದರೆ ಬಹಳ ಇಷ್ಟ. ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಿದ್ದೆವು’ ಎಂದು ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀನಿಧಿ ಬೆಂಗಳೂರು, ‘ನಮ್ಮಂಥ ಸ್ವತಂತ್ರ ತಂಡವನ್ನು ಗುರುತಿಸಿ ವೇದಿಕೆ ಕೊಟ್ಟಿದ್ದಾರೆ. ನಾವು ಮಧ್ಯಮ ವರ್ಗದವರು. ನಮ್ಮ ಕಪ್ಪು ಬಿಳುಪಿನ ಬದುಕಿಗೆ ಬಣ್ಣ ತುಂಬಿದ್ದೇ ಸಿನಿಮಾಗಳು. ಸಣ್ಣ ವಯಸ್ಸಿನಿಂದ ನನ್ನನ್ನು ತುಂಬಾ ಪ್ರಭಾವಗೊಳಿಸಿದ್ದು ಪುಟ್ಟಣ್ಣ ಕಣಗಾಲ್ ಅವರು. ‘ಚಲನಚಿತ್ರ ಓದು ಬಾರದವರ, ಓದು ಬಲ್ಲವರ, ಎಲ್ಲರನ್ನೂ ಮುಟ್ಟುವ ಮಹಾಶಕ್ತಿ ಪಡೆದಿದೆ’ ಎಂದು ಅವರು ಹೇಳುತ್ತಿದ್ದರು. ಹೀಗಾಗಿ ಈ ಕ್ಷೇತ್ರಕ್ಕೆ ಸಣ್ಣ ವಯಸ್ಸಿಗೇ ಬಲಿಪಶುವಾದೆ. ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಾಗ ಜೊತೆಯಾಗಿ ನಿಂತದ್ದು ಗೆಳೆಯರು. ನಾವು ಗೆಳೆಯರು ಸೇರಿಯೇ ಬ್ಲಿಂಕ್ ಸಿನಿಮಾ ಮಾಡಿದ್ದು’ ಎಂದು ನೆನಪಿಸಿಕೊಂಡರು.
‘ನಾನು ರಂಗಭೂಮಿಯಿಂದ ಬಂದದ್ದು. ಜಯತೀರ್ಥ ಅವರು ರಂಗಭೂಮಿಯವರೇ. ಅವರಿಂದ ಪ್ರಶಸ್ತಿ ಪಡೆಯುತ್ತಿರುವುದು ಬಹಳ ಖುಷಿ. ಈ ಸಿನಿಮಾ ಟೈಂ ಟ್ರಾವೆಲರ್ ಆದ್ದರಿಂದ ಎಲ್ಲ ಕಡೆ ಅಪ್ರೋಚ್ ಮಾಡುವುದು ಕಷ್ಟ ಎನ್ನುತ್ತಿದ್ದರು. ಪ್ರೇಕ್ಷಕರು ಇದನ್ನು ಒಪ್ಪಿಕೊಂಡು ಇಲ್ಲಿಯವರೆಗೂ ಕರೆದುತಂದರು’ ಎಂದು ಭಾವುಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.