ADVERTISEMENT

ನಟಿ ಕಂಗನಾ ಕಚೇರಿ ಕಟ್ಟಡ ನೆಲಸಮದ ಹಿಂದಿರುವ ಉದ್ದೇಶವೇನು?

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 8:25 IST
Last Updated 9 ಸೆಪ್ಟೆಂಬರ್ 2020, 8:25 IST
ಮುಂಬೈನಲ್ಲಿರುವ ಕಂಗನಾ ರನೋಟ್‌ ಅವರ ಕಚೇರಿಯನ್ನು ಬಿಎಂಸಿ ನೆಲಸಮಗೊಳಿಸುತ್ತಿರುವುದು
ಮುಂಬೈನಲ್ಲಿರುವ ಕಂಗನಾ ರನೋಟ್‌ ಅವರ ಕಚೇರಿಯನ್ನು ಬಿಎಂಸಿ ನೆಲಸಮಗೊಳಿಸುತ್ತಿರುವುದು   

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಆತ್ಮಹತ್ಯೆಯ ಬಳಿಕ ನಟಿ ಕಂಗನಾ ರನೋಟ್‌ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಮರ ಸಾರಿರುವುದು ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಆಕೆ ಮುಂಬೈ ನಗರದ ಅವ್ಯವಸ್ಥೆ ವಿರುದ್ಧವೂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಉಂಟು. ಹಾಗಾಗಿ, ಆಡಳಿತಾರೂಢ ಶಿವಸೇನೆ ಸೇರಿದಂತೆ ಇತರೇ ಪಕ್ಷಗಳು ಆಕೆಯು ವಿರುದ್ಧ ಕೆಂಗಣ್ಣು ಬೀರಿವೆ. ಪ್ರಸ್ತುತ ಈ ಸಮರ ಕಂಗನಾ ಅವರ ಕಚೇರಿಯನ್ನು ನೆಲಸಮಗೊಳಿಸುವ ಮಟ್ಟಕ್ಕೂ ಹೋಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಆಕೆ, ‘ನನ್ನ ಮನೆಯಲ್ಲಿ ನಿಯಮ ಉಲ್ಲಂಘಿಸಿ ಯಾವುದನ್ನೂ ನಿರ್ಮಿಸಿಲ್ಲ. ಕೋವಿಡ್‌–19 ಪರಿಣಾಮ ಸೆಪ್ಟೆಂಬರ್‌ 30ರವರೆಗೆ ಯಾವುದೇ ಕಟ್ಟಡಗಳನ್ನು ನೆಲಸಮಗೊಳಿಸಬಾರದು ಎಂದು ಮಾರ್ಗಸೂಚಿಯಲ್ಲಿಯೇ ಹೇಳಲಾಗಿದೆ. ಆದರೂ, ಮುಂಬೈ ಮಹಾನಗರ ಪಾಲಿಕೆಯು ಕಟ್ಟಡವನ್ನು ನೆಲಸಮಗೊಳಿಸಿದೆ. ಇದು ಡೆತ್‌ ಆಫ್‌ ಡೆಮಾಕ್ರಸಿಯಲ್ಲದೆ ಬೇರೇನೂ ಅಲ್ಲ; ನಿಜವಾದ ಫ್ಯಾಸಿಸಂ ಅಂದರೆ ಇದೇ ನೋಡಿ’ ಎಂದಿದ್ದಾರೆ.

ಪಾಲಿಕೆ ಹೇಳುವುದು ಏನು?
ಕಂಗನಾ ನಿಯಮ ಉಲ್ಲಂಘಿಸಿ ತನ್ನ ಕಚೇರಿಯಲ್ಲಿ ಕೆಲವು ಭಾಗಗಳನ್ನು ನಿರ್ಮಿಸಿದ್ದಾರೆ ಎನ್ನುವುದು ಮುಂಬೈ ಮಹಾನಗರ ಪಾಲಿಕೆಯ ವಾದ. ಈ ಸಂಬಂಧ ಆಕೆಗೆ ಪಾಲಿಕೆಯು ನೋಟಿಸ್‌ ಕೂಡ ನೀಡಿತ್ತು. ಎರಡನೇ ನೋಟಿಸ್‌ನಲ್ಲಿ ಕಟ್ಟಡವನ್ನು ತೆರವುಗೊಳಿಸದಿದ್ದರೆ ನೆಲಸಮ ಮಾಡುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತಂತೆ. ಇಂದು ಕಂಗನಾ ಕಚೇರಿ ಬಳಿಗೆ ಆಗಮಿಸಿದ ಪಾಲಿಕೆಯ ಸಿಬ್ಬಂದಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನು ತೆರವುಗೊಳಿಸಿದ್ದಾರೆ.

ADVERTISEMENT

ಕಚೇರಿಯ ಕೆಳಮಹಡಿಯಲ್ಲಿ ಅನಧಿಕೃವಾಗಿ ನಿರ್ಮಿಸಿದ ಶೌಚಾಲಯವನ್ನೇ ಕ್ಯಾಬಿನ್‌ ಆಗಿ ಪರಿವರ್ತಿಸಲಾಗಿದೆ. ಜೊತೆಗೆ, ಅಡುಗೆ ಮನೆಯನ್ನೂ ಅನಧಿಕೃತವಾಗಿ ನಿರ್ಮಿಸಲಾಗಿದೆ. ಸ್ಟೋರ್‌ ರೂಮ್‌ನ ಮೆಟ್ಟಿಲುಗಳ ಕೆಳಭಾಗದಲ್ಲಿ ಶೌಚಾಲಯ ಕಟ್ಟಲಾಗಿದೆ. ಕೆಳಮಹಡಿ ಕಟ್ಟಡದ ಮಾರ್ಪಾಡು ಸಂಬಂಧ ಪಾಲಿಕೆಯಿಂದ ಕಂಗನಾ ಯಾವುದೇ ಅನುಮತಿ ಪಡೆದಿಲ್ಲ. ಹಾಗಾಗಿ, ನೆಲಸಮಗೊಳಿಸಲಾಗಿದೆ ಎಂದು ಪಾಲಿಕೆ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.