ಗೌರಿ ಕಿಶನ್
ಬೆಂಗಳೂರು: ಸಿನಿಮಾ ಬಿಡುಗಡೆಯ ಸಂಬಂಧ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ತಮಿಳು ನಟಿ ಗೌರಿ ಕಿಶನ್ ಅವರಿಗೆ ಯೂಟ್ಯೂಬ್ ಪತ್ರಕರ್ತರೊಬ್ಬರು ಕೇಳಿದ ’ಬಾಡಿ ಶೇಮಿಂಗ್’ ಪ್ರಶ್ನೆಗೆ ನಟ–ನಟಿಯರ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಪು ಸುಂದರ್ ಅವರು, ಪತ್ರಿಕೋದ್ಯಮ ನೆಲೆ ಕಳೆದುಕೊಂಡಿದೆ. ಪತ್ರಕರ್ತರೆಂದು ಹೇಳಿಕೊಳ್ಳುವ ಕೆಲವರು ಪತ್ರಿಕೋದ್ಯಮವನ್ನು ಚರಂಡಿಗೆ ತಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯ ತೂಕದ ಬಗ್ಗೆ ಕೇಳುವುದು ನಿಮ್ಮ ಕೆಲಸವಲ್ಲ. ಅದು ನಾಚಿಕೆಗೇಡಿನ ಸಂಗತಿ ಎಂದು ಪ್ರಶ್ನೆ ಕೇಳಿದ್ದ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮಿಳು ಕಲಾವಿದರ ಸಂಘವೂ ಈ ಘಟನೆಯನ್ನು ಖಂಡಿಸಿದೆ. ನಟ ನಾಸರ್ ಅವರು, ಯೂಟ್ಯೂಬ್ ಪತ್ರಕರ್ತರನ್ನು ನಿಷೇಧಿಸಬೇಕು ಎಂಬ ಅರ್ಥದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ಪಾ. ರಂಜಿತ್ ಸೇರಿದಂತೆ ಅನೇಕ ನಟ– ನಟಿಯರು ಈ ಘಟನೆ ಖಂಡಿಸಿದ್ದಾರೆ
ಇತ್ತೀಚೆಗೆ ಚೆನ್ನೈನಲ್ಲಿ ಅದರ್ಸ್ (Others) ಸಿನಿಮಾದ ಪತ್ರಿಕಾಗೋಷ್ಟಿ ಆಯೋಜನೆಯಾಗಿತ್ತು. ಈ ಸಿನಿಮಾದ ನಟಿ ಗೌರಿ ಕಿಶನ್ ಅವರಿಗೆ ಯೂಟ್ಯೂಬ್ ಪತ್ರಕರ್ತರೊಬ್ಬರು ’ಟ್ರೇಲರ್‌ನಲ್ಲಿ ನಾಯಕ ಗೌರಿಯನ್ನು ಎತ್ತಿಕೊಂಡು ಚುಂಬಿಸುವ ಸನ್ನಿವೇಶವೊಂದಿದೆ. ಹಾಗೇ ಎತ್ತುವಾಗ ಅವರು ನಿಮಗೆ ಭಾರ ಎನಿಸಲಿಲ್ಲವೇ ಎಂದು ಮುಖ್ಯ ನಟನಿಗೆ ಕೇಳಿದ್ದರು.
ನಟಿ ಗೌರಿ ಕಿಶನ್ ಅವರು ತಮಿಳಿನ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಜಯ್ ಸೇತುಪತಿ ಅವರ ಸೂಪರ್‌ಹಿಟ್ ಸಿನಿಮಾ 96 ನಲ್ಲಿ ಗೌರಿ ಅವರು ಯಂಗ್ ಜಾನು ಆಗಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.