ADVERTISEMENT

‘ಬಂದಿಷ್‌ ಬ್ಯಾಂಡಿಟ್ಸ್‌’ ನಟ ಅಮಿತ್‌ ಮಿಸ್ತ್ರಿ ನಿಧನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 9:25 IST
Last Updated 23 ಏಪ್ರಿಲ್ 2021, 9:25 IST
ಅಮಿತ್‌ ಮಿಸ್ತ್ರಿ -ಚಿತ್ರಕೃಪೆ: ಐಎಂಡಿಬಿ ಡಾಟ್‌ ಕಾಂ
ಅಮಿತ್‌ ಮಿಸ್ತ್ರಿ -ಚಿತ್ರಕೃಪೆ: ಐಎಂಡಿಬಿ ಡಾಟ್‌ ಕಾಂ   

ಹಿಂದಿ ಚಿತ್ರನಟ ಅಮಿತ್‌ ಮಿಸ್ತ್ರಿ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು.

ಗುಜರಾತ್‌ನ ಸಿನಿಮಾ ಹಾಗೂ ನಾಟಕ ರಂಗದಲ್ಲಿ ಅವರು ಸಕ್ರಿಯರಾಗಿದ್ದರು. ಕಳೆದ ವರ್ಷ ಒಟಿಟಿ (ಅಮೆಝಾನ್‌ ಪ್ರೈಮ್‌)ಯಲ್ಲಿ ಬಿಡುಗಡೆಯಾದ ‘ಬಂದಿಷ್‌ ಬ್ಯಾಂಡಿಟ್ಸ್‌’ ವೆಬ್‌ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅವರು ಆ ಸರಣಿಯ ನಟನೆಯಿಂದ ಜನಪ್ರಿಯತೆ ಗಳಿಸಿದ್ದರು.

‘ಕ್ಯಾ ಕೆಹೆನಾ ಹೈ’, ‘ಏಕ್ ಚಾಲೀಸ್ ಕಿ’ ‘ಲಾಸ್ಟ್ ಲೋಕಲ್’, ‘99’, ‘ಶೋರ್ ಇನ್ ದ ಸಿಟಿ’, ‘ಎಮ್ಲಾ ಪಗ್ಲಾ ದೀವಾನ’, ‘ಎ ಜಂಟಲ್ಮನ್’ ಅವರು ನಟಿಸಿದ ಹಿಂದಿ ಚಿತ್ರಗಳು. ‘ತೆನಾಲಿ ರಾಮ’, ‘ಮ್ಯಾಡಂ ಸರ್‌’, ‘ಶ್’, ‘ಕೊಯಿ ಹೈ’ ಅವರು ನಟಿಸಿದ ಪ್ರಮುಖ ಧಾರಾವಾಹಿಗಳು. ‘ದಫಾ–420’, ‘ಸಾವಧಾನ್‌ ಇಂಡಿಯಾ’ ಅವರು ಕಾಣಿಸಿಕೊಂಡ ಪ್ರಮುಖ ಟಿವಿ ಕಾರ್ಯಕ್ರಮಗಳು.

ADVERTISEMENT

‘ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಬೆಳಗ್ಗೆ ಉಪಾಹಾರದ ಬಳಿಕ ಸಣ್ಣಗೆ ಎದೆನೋವು ಎಂದು ಹೇಳಿದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲೂ ವಿಧಿ ಅವಕಾಶ ಕೊಡಲಿಲ್ಲ. ಅಷ್ಟರೊಳಗೇ ಅವರು ನಿಧನರಾದರು. ಮನೋರಂಜನಾ ಕ್ಷೇತ್ರಕ್ಕೆ ಅವರ ಸಾವು ತುಂಬಾ ನಷ್ಟ ಉಂಟುಮಾಡಿದೆ’ ಎಂದು ಮಿಸ್ತ್ರಿ ಅವರ ಮ್ಯಾನೇಜರ್‌ ಮಹರ್ಷಿ ದೇಸಾಯಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.