ADVERTISEMENT

ಕಂಗನಾ ರನೋಟ್‌ಗೆ ವೈ– ಪ್ಲಸ್‌ ಶ್ರೇಣಿ ಭದ್ರತೆ

ಪಿಟಿಐ
Published 7 ಸೆಪ್ಟೆಂಬರ್ 2020, 18:11 IST
Last Updated 7 ಸೆಪ್ಟೆಂಬರ್ 2020, 18:11 IST
   

ನವದೆಹಲಿ/ಶಿಮ್ಲಾ: ಬಾಲಿವುಡ್‌ ನಟಿ ಕಂಗನಾ ರನೋತ್‌ಗೆ ವೈ–ಪ್ಲಸ್‌ ಶ್ರೇಣಿಯ ಭದ್ರತೆಯನ್ನು ನೀಡಲಾಗಿದ್ದು, ಅವರ ರಕ್ಷಣೆಗೆ 10 ಶಸ್ತ್ರಸಜ್ಜಿತ ಕಮಾಂಡೋಗಳು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಗೃಹ ಇಲಾಖೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಹೋಲಿಸಿದ್ದ ಕಂಗನಾ, ‘ಸಿನಿಮಾ ಮಾಫಿಯಾಗಿಂತ ನಾನು ಮುಂಬೈ ಪೊಲೀಸರನ್ನು ಕಂಡರೆ ಹೆದರುತ್ತೇನೆ’ ಎಂದು ಇತ್ತೀಚೆಗೆ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು.

ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಶಿವಸೇನಾ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಈ ಹೇಳಿಕೆಯನ್ನು ಖಂಡಿಸಿದ್ದವು.

ADVERTISEMENT

ಸೆ.9ರಂದು ಮುಂಬೈಗೆ ಬರುವುದಾಗಿ ಕಂಗನಾ ಟ್ವೀಟ್‌ನಲ್ಲಿ ತಿಳಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಅವರ ಭದ್ರತೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಕಂಗನಾ ಅವರನ್ನು ಹಿಮಾಚಲ ಪ್ರದೇಶದ ಮಗಳು ಎಂದು ಉಲ್ಲೇಖಿಸಿ ವಿಡಿಯೊ ಮೂಲಕ ಮಾತನಾಡಿರುವ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್‌ ಠಾಕೂರ್‌, ‘ಕಂಗನಾ ಅವರಿಗೆ ಸಿಆರ್‌ಪಿಎಫ್‌ ಭದ್ರತೆ ನೀಡುವ ನಿರ್ಧಾರ ಸ್ವಾಗತಾರ್ಹ.
ಆಕೆಯ ಭದ್ರತೆ ನಮಗೆ ಮುಖ್ಯ. ಕಂಗನಾ ಅವರ ತಂದೆ ಹಾಗೂ ಸಹೋದರಿಯ ಮನವಿಯ
ಮೇರೆಗೆ, ಮನಾಲಿಯಲ್ಲಿ ಇರುವ ಕಂಗನಾ ಅವರ ನಿವಾಸಕ್ಕೆ ಹಿಮಾಚಲ ಪ್ರದೇಶ ಪೊಲೀಸರು ರಕ್ಷಣೆ ನೀಡಲಿದ್ದಾರೆ’
ಎಂದರು.

‘ಮೈತ್ರಿ ಸರ್ಕಾರವನ್ನು ದೂಷಿಸಲು ರಕ್ಷಣೆ’: ಕಂಗನಾ ಅವರಿಗೆ ನೀಡಿರುವ ಹೆಚ್ಚಿನ ಭದ್ರತೆಯನ್ನು ಕಾಂಗ್ರೆಸ್‌ ಪಕ್ಷ ಟೀಕಿಸಿದೆ. ‘ಮಹಾರಾಷ್ಟ್ರ ವನ್ನು ಹಾಗೂ ಅಲ್ಲಿನ ಆಡಳಿತದಲ್ಲಿ ಇರುವ ಮೈತ್ರಿ ಸರ್ಕಾರವನ್ನು ಬಹಿರಂಗವಾಗಿ ದೂಷಿಸಲು ಕೇಂದ್ರ ಸರ್ಕಾರ ಅವರಿಗೆ ರಕ್ಷಣೆ ನೀಡಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ದೇಶಪ್ರೇಮಿಯನ್ನು ಯಾರೂ ತುಳಿದುಹಾಕಲು ಸಾಧ್ಯವಿಲ್ಲ’

ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿ ಟ್ವೀಟ್‌ ಮಾಡಿರುವ ಕಂಗನಾ, ‘ಈ ನಿರ್ಧಾರವು ದೇಶಪ್ರೇಮಿಯನ್ನು ಯಾರೂ ತುಳಿದಹಾಕಲು ಸಾಧ್ಯವಿಲ್ಲ ಎನ್ನುವುದನ್ನು ತೋರಿಸುತ್ತದೆ. ಗೃಹ ಸಚಿವ ಅಮಿತ್‌ ಶಾ ಅವರಿಗೆ ನಾನು ಆಭಾರಿ’ ಎಂದು ಉಲ್ಲೇಖಿಸಿದ್ದಾರೆ.

‘ಅಮಿತ್‌ ಶಾ ಅವರು ಬಯಸಿದ್ದರೆ, ಮುಂಬೈಗೆ ಸ್ವಲ್ಪ ಸಮಯ ಬಿಟ್ಟು ತೆರಳುವಂತೆ ಸೂಚಿಸಬಹುದಿತ್ತು. ಆದರೆ ಅವರು ಭಾರತದ ಮಗಳನ್ನು ಗೌರವಿಸಿದ್ದಾರೆ. ಜೈ ಹಿಂದ್‌’ ಎಂದು ಕಂಗನಾ ತಿಳಿಸಿದ್ದಾರೆ.

ಕಚೇರಿ ತೆರವಿಗೆ ಯತ್ನ: ‘ಶಿವಸೇನಾ ಆಡಳಿತದ ಹಿಡಿತದಲ್ಲಿ ಇರುವ ನಗರ ಪಾಲಿಕೆಯ ಅಧಿಕಾರಿಗಳು ಬಲವಂತವಾಗಿ ನನ್ನ ಕಚೇರಿ ‘ಮಣಿಕರ್ಣಿಕಾ’ದೊಳಗೆ ಪ್ರವೇಶಿಸಿದ್ದು ಕಟ್ಟಡದ ಅಳತೆ ಪರಿಶೀಲನೆ ನಡೆಸುತ್ತಿದ್ದಾರೆ, ಕಚೇರಿಯನ್ನು ಮಂಗಳವಾರ ತೆರವುಗೊಳಿಸುವ ಸಾಧ್ಯತೆ ಇದೆ’ ಎಂದು ಕಂಗನಾ ಟ್ವೀಟ್‌ ಮೂಲಕ ಆರೋಪಿಸಿದ್ದಾರೆ. ಈ ಕುರಿತ ವಿಡಿಯೊವನ್ನೂ ಅವರು ಅಪ್‌ಲೋಡ್‌ ಮಾಡಿದ್ದಾರೆ. ‘ಮೇಡಂ ಮಾಡಿದ ಕೆಲಸಕ್ಕೆ ಎಲ್ಲರೂ ಸಮಸ್ಯೆ ಅನುಭವಿಸಬೇಕು’ ಎಂದು ಅಧಿಕಾರಿಯೊಬ್ಬರು ಹೇಳಿರುವುದು ಇದರಲ್ಲಿ ದಾಖಲಾಗಿದೆ.

‘ನನ್ನ ಆಸ್ತಿಯಲ್ಲಿ ಯಾವುದೇ ಅಕ್ರಮವಿಲ್ಲ. ಯಾವುದಾದರೂ ಅನಧಿಕೃತ ನಿರ್ಮಾಣವಿದ್ದರೆ ಅದನ್ನು ಬೃಹತ್‌ ಮುಂಬೈ ಮಹಾನಗರ ಪಾಲಿಕೆಯು ನೋಟಿಸ್‌ ಮೂಲಕ ತೋರಿಸಬೇಕು. ನನ್ನ ನೆರೆಹೊರೆಯವರಿಗೂ ಕಿರುಕುಳ ನೀಡಲಾಗುತ್ತಿದೆ’ ಎಂದು ಕಂಗನಾ ಆರೋಪಿಸಿದ್ದಾರೆ.

‘ಭಯವಿದ್ದರೆ ಮುಂಬೈಗೆ ಬರುವುದೇ ಬೇಡ’

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಳಿಕ ಮುಂಬೈ ಸುರಕ್ಷಿತವಲ್ಲ ಎಂದೆನಿಸುತ್ತಿದೆ ಎಂದು ಇತ್ತೀಚಿನ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದ ಕಂಗನಾ, ಬಾಲಿವುಡ್‌ನಲ್ಲಿ ಡ್ರಗ್ಸ್‌ ಬಳಕೆಯ ಬಗ್ಗೆಯೂ ಮಾತನಾಡಿದ್ದರು. ‘ನಗರ ಪೊಲೀಸರ ಬಗ್ಗೆ ಅವರಿಗೆ ಭಯವಿದ್ದರೆ ಅವರು ಮುಂಬೈಗೆ ಬರುವುದೇ ಬೇಡ’ ಎಂದು ಶಿವಸೇನಾ ನಾಯಕ ಸಂಜಯ್‌ ರಾವುತ್‌ ಹೇಳಿಕೆ ನೀಡಿದ್ದರು.

ಕೆಲವರಿಗೆ ಕೃತಜ್ಞತೆ ಇರುವುದಿಲ್ಲ: ಉದ್ಧವ್‌ ಠಾಕ್ರೆ

ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ,‘ಕೆಲ ಜನರು ತಾವು ವಾಸಿಸುವ ಹಾಗೂ ತಮ್ಮ ಜೀವನಾಧಾರವಾದ ನಗರದ ಬಗ್ಗೆ ಕೃತಜ್ಞತೆ ಹೊಂದಿರುತ್ತಾರೆ. ಆದರೆ ಕೆಲವರಿಗೆ ಈ ಕೃತಜ್ಞತಾಭಾವ ಇರುವುದಿಲ್ಲ’ ಎಂದು ಕಂಗನಾ ಅವರ ಹೇಳಿಕೆಗೆಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಸೇನಾ ಶಾಸಕರಾಗಿದ್ದ ಅನಿಲ್‌ ರಾಥೋಡ್‌ ಅವರ ನಿಧನಕ್ಕೆ ಸಂತಾಪ ಸೂಚನೆ ವೇಳೆ ಉದ್ಧವ್‌ ಮಾತನಾಡಿದರು. ‘ಅನಿಲ್‌ ಅಣ್ಣಾ ಅವರು ರಾಜಸ್ಥಾನದಿಂದ ಬಂದಿದ್ದರೂ, ಮಹಾರಾಷ್ಟ್ರವನ್ನು ಅವರು ತಮ್ಮ ಮನೆಯಾಗಿಸಿದ್ದರು’ ಎಂದರು.

***

‘ನಟಿ ಕಂಗನಾ ರನೋತ್‌ ನೀಡಿರುವ ಹೇಳಿಕೆ ತಪ್ಪು. ಇದನ್ನು ಬಿಜೆಪಿ ಬೆಂಬಲಿಸುವುದಿಲ್ಲ. ಕಾನೂನಿನಡಿ ಈ ದೇಶದಲ್ಲಿ ಭಯೋತ್ಪಾದಕರಿಗೂ ಭದ್ರತೆ ನೀಡಲಾಗಿದೆ. ಹೀಗಿರುವಾಗ ರನೋತ್‌ ಓರ್ವ ಕಲಾವಿದೆ. ಯಾರೂ ಅವರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ, ಹೀಗಿದ್ದರೂ, ಅವರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ.

– ದೇವೇಂದ್ರ ಫಡಣವೀಸ್‌, ಬಿಜೆಪಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.