ADVERTISEMENT

ಕನ್ನಡದಲ್ಲಿ ನಟಿಸುವಾಸೆ,ಪ್ಲೀಸ್ ಅವಕಾಶ ಕೊಡಿ

ಮನದಾಸೆ ಹೇಳಿಕೊಂಡ ಬಾಲಿವುಡ್‌ ನಟಿ ದಿಯಾ ಮಿರ್ಜಾ

ಮಾನಸ ಬಿ.ಆರ್‌
Published 28 ಫೆಬ್ರುವರಿ 2019, 20:00 IST
Last Updated 28 ಫೆಬ್ರುವರಿ 2019, 20:00 IST
ದಿಯಾ ಮಿರ್ಜಾ
ದಿಯಾ ಮಿರ್ಜಾ   

ನೀಲಿ, ಬಿಳಿ ಬಣ್ಣದ ಪ್ಯಾಂಟ್, ಶರ್ಟ್‌, ತೆಳುವಾದ ಮೇಕಪ್‌, ಅದಕ್ಕೊಪ್ಪುವ ಉದ್ದದ ಕಿವಿಯೋಲೆ, ಧರಿಸಿದ್ದ ಬಾಲಿವುಡ್ ನಟಿ ದಿಯಾ ಮಿರ್ಜಾ ತುಸು ಹೆಚ್ಚೇ ಉತ್ಸಾಹದಲ್ಲಿದ್ದರು.

ಜರ್ಮನಿ ಎಂಜಿನಿಯರ್‌ ಕಂಡುಹಿಡಿದ ನೀರು ಶುದ್ಧೀಕರಿಸಿದ ಯಂತ್ರ ‘ಬ್ರಿಟಾ’ ಬಿಡುಗಡೆ ಮಾಡಲು ಅವರು ನಗರಕ್ಕೆ ಬಂದಿದ್ದರು.

‘ಮೆಟ್ರೊ’ಯೊಂದಿಗೆ ತಮ್ಮ ಸಿನಿ ಪಯಣವನ್ನು ಹಂಚಿಕೊಂಡ ಅವರು, ಕನ್ನಡ ಸಿನಿಮಾ, ಬೆಂಗಳೂರಿನ ಕುರಿತು ಮನಬಿಚ್ಚಿ ಹರಟಿದರು.

ADVERTISEMENT

‘ಬೆಂಗಳೂರು ನನಗೆ ಕನಸು ಕಾಣಲು ಹೇಳಿಕೊಟ್ಟ ಊರು. ನಾನು ಮಾಡೆಲಿಂಗ್ ಶುರುಮಾಡಿದ್ದೇ ಇಲ್ಲಿ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ಕನಸುಗಳನ್ನು ಇಲ್ಲಿ ಕಂಡೆ. ಆದರೆ ಅದು ಸಾಕಾರ ಆಗಿದ್ದು ಮುಂಬೈನಲ್ಲಿ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬಸ್‌ನಲ್ಲಿ ಓಡಾಡುತ್ತಿದ್ದೆ. ಆರಂಭದಲ್ಲಿ ಸಾಕಷ್ಟು ಕಷ್ಟಪಟ್ಟಮೇಲೆ ಮುಂಬೈನಲ್ಲಿ ನೆಲೆವೂರಲು ಸಾಧ್ಯವಾಯಿತು.ಮಾಡೆಲಿಂಗ್‌ ಕ್ಷೇತ್ರದವರನ್ನುಬೆಂಗಳೂರು ಕೈಬೀಸಿ ಕರೆಯುತ್ತದೆ. ನನ್ನನ್ನೂ ಅಷ್ಟೇ ಪ್ರೀತಿಯಿಂದ ಈ ನಗರ ಸ್ವಾಗತಿಸಿದೆ. ಇಲ್ಲಿಯ ಹಸಿರು, ನೀರು, ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ಎಲ್ಲವೂ ನನ್ನ ನೆನಪಿನ ಬುತ್ತಿಯಲ್ಲಿವೆ. ಇಲ್ಲಿಯ ತಂಪಾದ ವಾತಾವರಣ ನನಗೆ ಬಹಳ ಇಷ್ಟ’ ಎಂದು ನಗರದ ಪ್ರೀತಿಯನ್ನು ಹಂಚಿಕೊಂಡರು.

‘ಕನ್ನಡದ ಸಿನಿಮಾಗಳು ಆಗಾಗ ಸದ್ದು ಮಾಡುತ್ತಿವೆ. ಇತ್ತೀಚೆಗೆ ಕೆಜಿಎಫ್‌ ನೋಡಿದೆ. ಬಹಳ ಇಷ್ಟ ಆಯಿತು. ಯಶ್‌ ಅವರೊಂದಿಗೆ ನನಗೂ ನಟಿಸುವಾಸೆ. ಕನ್ನಡದಲ್ಲಿಯೂ ನನಗೆ ಅವಕಾಶ ಕೊಡಿ ಪ್ಲೀಸ್‌‘ ಎಂದು ಮುಗುಳ್ನಕ್ಕರು.

‘ಬಾಲಿವುಡ್‌ನಲ್ಲಿ ಸದ್ಯಕ್ಕೆ ‘ಸಂಜು’ ನನ್ನ ಕೊನೆಯ ಸಿನಿಮಾ ಆಗಿದೆ. ಮುಂದೆ ಅವಕಾಶಗಳು ಹೇಗೆ ಬರುತ್ತವೆ ಅನ್ನೋದು ಗೊತ್ತಿಲ್ಲ. ನಾನು ಸಿನಿಮಾಕ್ಕೆ ಹಣ ಹಾಕುವ ಬಗ್ಗೆ ಯೋಚಿಸುತ್ತಿದ್ದೇನೆ. ವೆಬ್‌ ಸೀರಿಸ್‌ಗಳಿಂದ ಹೆಚ್ಚು ಜನರನ್ನು ತಲುಪಬಹುದು. ಅದು ಈ ಕಾಲದ ಬೇಡಿಕೆ ಕೂಡ ಹೌದು. ಅದಕ್ಕೆ ತಕ್ಕಂತೆ ನಾನು ಹೆಜ್ಜೆ ಹಾಕಲಿದ್ದೇನೆ’ ಎಂದು ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.

‘ನಾನು ಫಿಟ್‌ನೆಸ್‌ ಬಗ್ಗೆ ಪಕ್ಕಾ ಪ್ಲ್ಯಾನ್‌ ಮಾಡುತ್ತೇನೆ. ಸಿಕ್ಕಿದ್ದೆಲ್ಲಾ ತಿನ್ನೋದಿಲ್ಲ. ನೀರು ಚೆನ್ನಾಗಿ ಕುಡಿಯುತ್ತೇನೆ. ಎಣ್ಣೆ ಪದಾರ್ಥ ತಿನ್ನಲ್ಲ. ಸಕ್ಕರೆ ಬಳಸೋದೇ ಇಲ್ಲ. ಸಿಹಿ ತಿನಿಸುಗಳಿಂದ ಆದಷ್ಟು ದೂರ. ಸೌಂದರ್ಯ ಕಾಪಾಡಿಕೊಳ್ಳಲು ನೈಸರ್ಗಿಕ ವಿಧಾನಗಳನ್ನು ಅನುಸರಿಸುತ್ತೇನೆ. ಯೋಗ, ಪ್ರಾಣಾಯಾಮ, ಜಿಮ್‌ ಮಾಡುತ್ತೇನೆ. ಇಷ್ಟು ಸಾಕಲ್ಲ‘ ಎಂದು ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.