ADVERTISEMENT

ಪುಲ್ವಾಮಾ: ಬಾಲಿವುಡ್‌ ಶೀರ್ಷಿಕೆ ರೇಸ್‌!

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 11:44 IST
Last Updated 1 ಮಾರ್ಚ್ 2019, 11:44 IST
‘ಉರಿ’ ಚಿತ್ರದ ಪೋಸ್ಟರ್
‘ಉರಿ’ ಚಿತ್ರದ ಪೋಸ್ಟರ್   

‘ದೇಶಭಕ್ತಿ’ ಆಧರಿಸಿದ ಸಿನಿಮಾಗಳನ್ನು ಮಾಡುವಲ್ಲಿ ಬಾಲಿವುಡ್‌ ಮಂದಿ ಹಿಂದೆ ಬಿದ್ದವರಲ್ಲ. ಸೈನಿಕರ ಶೌರ್ಯ, ಅವರಲ್ಲಿನ ದೇಶಪ್ರೇಮ ಆಧರಿಸಿದ ಸಿನಿಮಾಗಳು ಬಹುತೇಕ ಸಂದರ್ಭಗಳಲ್ಲಿ ಸಿನಿಮಾ ಪ್ರಿಯರನ್ನು ಮಾತ್ರವಲ್ಲದೆ, ಸಿನಿಮಾ ಮಂದಿರಗಳಿಂದ ಗಾವುದ ದೂರ ಇರುವವರನ್ನೂ ಆಕರ್ಷಿಸುವುದಿದೆ! ಇದಕ್ಕೆ ಉದಾಹರಣೆಯಾಗಿ ‘ತಿರಂಗಾ’, ‘ಬಾರ್ಡರ್’ ಸೇರಿದಂತೆ ಹತ್ತು ಹಲವು ಸಿನಿಮಾಗಳನ್ನು ಉಲ್ಲೇಖಿಸಬಹುದು.

ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರು ಇತ್ತೀಚೆಗೆ ನಡೆಸಿದ ದಾಳಿ, ಅದಾದ ನಂತರ ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಕೋಟ್ ಮೇಲೆ ನಡೆಸಿದ ದಾಳಿ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದ ಸೈನಿಕರ ಸೆರೆಯಲ್ಲಿ ಇದ್ದಾಗಲೂ ಅಸಾಮಾನ್ಯ ಧೈರ್ಯ ಪ್ರದರ್ಶಿಸಿದ್ದು... ಇವನ್ನೆಲ್ಲ ಆಧರಿಸಿ ಬಾಲಿವುಡ್‌ ಜನ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂಬ ಹೊಸ ಸುದ್ದಿಯೊಂದು ಬಂದಿದೆ.

‘ಪುಲ್ವಾಮಾ’, ‘ವಾರ್ ರೂಮ್’, ‘ಹಿಂದುಸ್ತಾನ್ ಹಮಾರಾ ಹೈ’, ‘ಪುಲ್ವಾಮಾ ಟೆರರ್ ಅಟ್ಯಾಕ್’... ಇಂತಹ ಸಿನಿಮಾ ಶೀರ್ಷಿಕೆಗಳನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಳ್ಳಲು ಬಾಲಿವುಡ್ ಸಿನಿಮಾ ನಿರ್ಮಾಪಕರು ಮುಗಿಬಿದ್ದಿದ್ದಾರೆ ಎಂದು ‘ಹಫಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ADVERTISEMENT

ಬಾಲಿವುಡ್‌ನ ಈ ಹುಮ್ಮಸ್ಸಿನ ಬಗ್ಗೆ ಟೀಕೆಗಳೂ ವ್ಯಕ್ತವಾಗಿವೆ. ‘ಪುಲ್ವಾಮಾದಲ್ಲಿ ದಾಳಿ ನಡೆದು 10 ದಿನಗಳೂ ಆಗಿಲ್ಲ. ನೀವು ಇಂತಹ ಕೆಲಸದಲ್ಲಿ ತೊಡಗಿದ್ದೀರಿ’ ಎಂದು ದೀಪಕ್ ಎನ್ನುವ ಟೆಕಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಉರಿ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯ ನಂತರ, ಭಾರತೀಯ ಸೇನೆ ಕೈಗೊಂಡ ನಿರ್ದಿಷ್ಟ ದಾಳಿ ಆಧರಿಸಿ ರೂಪಿಸಿದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್‌’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಜಯಭೇರಿ ಬಾರಿಸಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನಲ್ಲಿ ನಿವೃತ್ತ ಯೋಧರ ಜೊತೆ ಕುಳಿತು ಈ ಸಿನಿಮಾ ವೀಕ್ಷಿಸಿದ್ದಾರೆ.

ಅಲ್ಲದೆ, ಕರ್ನಾಟಕದ ಒಂದಿಷ್ಟು ಜನ ಯತಿಗಳು ಕೂಡ ಈ ಸಿನಿಮಾ ವೀಕ್ಷಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಹೀಗಿರುವಾಗ ‘ದೇಶಭಕ್ತಿ’ ಮತ್ತು ಸೇನಾ ದಾಳಿಗೆ ಸಂಬಂಧಿಸಿದ ಕಥಾವಸ್ತುಗಳನ್ನು ಬಾಲಿವುಡ್‌ನ ಜನ ಕೈಬಿಡುವುದುಂಟೇ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.