ADVERTISEMENT

ಹಿನ್ನೋಟ-2020: ಬಾಲಿವುಡ್‌ ಚೌಕಟ್ಟಿನಲ್ಲಿ ವಿವಾದದ ಚಿತ್ರಗಳು

ಪ್ರಜಾವಾಣಿ ವಿಶೇಷ
Published 30 ಡಿಸೆಂಬರ್ 2020, 19:30 IST
Last Updated 30 ಡಿಸೆಂಬರ್ 2020, 19:30 IST
ನಟ ಇರ್ಫಾನ್‌ ಖಾನ್‌
ನಟ ಇರ್ಫಾನ್‌ ಖಾನ್‌   

ಜಗತ್ತಿನಲ್ಲಿ ಹೆಚ್ಚು ಹಣ ಓಡಾಡುವ ಸಿನಿಮಾ ಉದ್ಯಮ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್‌ ಬೇರೆ ಎಲ್ಲಾ ಕ್ಷೇತ್ರಗಳಂತೆಯೇ 2020ರಲ್ಲಿ ಹಲವು ಆಘಾತಗಳನ್ನು ಕಂಡಿದೆ.

ಕೋವಿಡ್‌ನಿಂದಾಗಿ ಡಿಸೈನರ್‌ ಮಾಸ್ಕ್‌, ಟಿ ಶರ್ಟ್‌– ಪೈಜಾಮ ಧರಿಸಿ ತೆಗೆದುಕೊಂಡ ಸೆಲ್ಫಿ, ಮೇಕಪ್‌ ಇಲ್ಲದೇ ಬ್ರೆಡ್‌, ಕೇಕ್‌ ಮಾಡುತ್ತಿರುವ ಚಿತ್ರಗಳು, ಸೆನ್ಸುವಲ್‌ ಉಡುಪು ಧರಿಸಿ ವ್ಯಾಯಾಮ, ಯೋಗ ಮಾಡುತ್ತಿದ್ದಾಗ ನೀಡಿದ ವಿಶೇಷ ಭಂಗಿಯ ಫೋಟೊ.. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದ ಬಾಲಿವುಡ್‌ ತಾರೆಯರಿಗೆ ಕೊಂಚ ಆಘಾತ ಕೊಟ್ಟಿದ್ದು ಯುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಯ ಸುದ್ದಿ. ಕಳೆದ ಜೂನ್‌ನಲ್ಲಿ ನಡೆದ ಈ ಅಹಿತಕರ ಘಟನೆ ಅಭಿಮಾನಿಗಳ ಆಕ್ರೋಶ, ಬಾಲಿವುಡ್‌ನಲ್ಲಿರುವ ಸ್ವಜನ ಪಕ್ಷಪಾತ, ಕೊನೆಗೆ ಡ್ರಗ್‌ ಮಾಫಿಯಾದ ನಂಟು, ಹಲವು ಪ್ರಮುಖ ತಾರೆಯರ ವಿಚಾರಣೆ, ಸುಶಾಂತ್‌ನ ಸ್ನೇಹಿತೆಯ ಬಂಧನದವರೆಗೆ ತಂದು ನಿಲ್ಲಿಸಿತು.

ಜಗತ್ತಿನಲ್ಲಿ ಹೆಚ್ಚು ಹಣ ಓಡಾಡುವ ಸಿನಿಮಾ ಉದ್ಯಮ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್‌ ಬೇರೆ ಎಲ್ಲಾ ಕ್ಷೇತ್ರಗಳಂತೆಯೇ 2020ರಲ್ಲಿ ಹಲವು ಆಘಾತಗಳನ್ನು ಕಂಡಿದೆ. ಕೋವಿಡ್‌ನಿಂದಾಗಿ ಮೊದಲ ಕೆಲವು ತಿಂಗಳುಗಳ ಕಾಲ ಹೆಚ್ಚುಕಡಿಮೆ ಸ್ಥಗಿತಗೊಂಡ ಚಟುವಟಿಕೆಗಳು, ಹಲವು ದಿಗ್ಗಜರ ಸಾವು, ಅಂಟಿಕೊಂಡ ಮಾದಕ ದ್ರವ್ಯ ಜಾಲದ ನಂಟು, ಚಟುವಟಿಕೆ ಇಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಎಣೆಯಿಲ್ಲದ ವಾದ– ವಿವಾದಗಳು, ನಡುವೆ ಒಟಿಟಿಯಲ್ಲಿ ಬಿಡುಗಡೆಯಾದ ದಿಗ್ಗಜರ ಸಿನಿಮಾಗಳು... ಹೀಗೆ ಟ್ರಾಜಿಡಿ, ಕಾಮಿಡಿ, ಕ್ಲೈಮ್ಯಾಕ್ಸ್‌.. ಎಲ್ಲವನ್ನೂ ಒಳಗೊಂಡಿತ್ತು ಬಾಲಿವುಡ್‌ನ 2020ನೇ ವರ್ಷ.

ADVERTISEMENT

ಕಂಗನಾ ನಟಿಸಿದ ‘ಪಂಗಾ’ ಜನವರಿಯಲ್ಲೇ ಬಿಡುಗಡೆ ಕಂಡಿತು. ಅಜಯ್‌ ದೇವಗನ್‌ನ ‘ತಾನ್ಹಾಜಿ: ದಿ ಅನ್‌ಸಂಗ್‌ ವಾರಿಯರ್‌’, ಆಯುಷ್ಮಾನ್‌ ಖುರಾನ ಮತ್ತು ನೀನಾ ಗುಪ್ತಾರ ಕಾಮಿಡಿ ‘ಶುಭ್‌ ಮಂಗಲ್‌ ಜ್ಯಾದಾ ಸಾವಧಾನ್‌’ ಸಿನಿಪ್ರಿಯರನ್ನು ರಂಜಿಸಿತು. ನಂತರ ಕೋವಿಡ್‌ನಿಂದಾಗಿ ಎಲ್ಲಾ ದೊಡ್ಡ ನಟ– ನಟಿಯರ ಸಿನಿಮಾ ಚಿತ್ರೀಕರಣ ಬಂದ್‌ ಆಗಿ ಮುಂದಿನ ವರ್ಷಕ್ಕೆ ಎಂದು ಘೋಷಿಸಿಕೊಂಡರು. ಅಕ್ಷಯ್‌ಕುಮಾರ್‌ನ ‘ಸೂರ್ಯವಂಶಿ’, ಅಮೀರ್‌ಖಾನ್‌ನ ‘ಲಾಲ್‌ ಸಿಂಗ್‌ ಛಡ್ಡಾ’, ರಣವೀರ್‌– ದೀಪಿಕಾ ಜೋಡಿಯ ‘83’... ಮೊದಲಾದ ಸಿನಿಮಾಗಳು ಈ ಪಟ್ಟಿಯಲ್ಲಿ ಪ್ರಮುಖವಾದವು. ಒಟ್ಟಿನಲ್ಲಿ ಬಾಲಿವುಡ್‌ಗೆ ಆದ ನಷ್ಟ 3,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಸ್ವಜನ ಪಕ್ಷಪಾತದ ಹುಯಿಲು

ಅಂತರರಾಷ್ಟ್ರೀಯವಾಗಿ ಸುದ್ದಿ ಮಾಡಿದ್ದು ನಟ ಸುಶಾಂತ್‌ಸಿಂಗ್‌ ಆತ್ಮಹತ್ಯೆ. ಬಾಲಿವುಡ್‌ನಲ್ಲಿರುವ ಸ್ವಜನ ಪಕ್ಷಪಾತ ಆತನ ಸಾವಿಗೆ ಕಾರಣ ಎಂದು ಮೊದಲು ಸಾಮಾಜಿಕ ಜಾಲತಾಣದಲ್ಲಿ ಹುಯಿಲು ಎದ್ದಿತು. ನಂತರ ಆತನ ಸ್ನೇಹಿತೆ ರಿಯಾ ಚಕ್ರವರ್ತಿಗೆ ಡ್ರಗ್‌ ಮಾಫಿಯಾ ನಂಟಿದೆ ಎಂಬ ಆರೋಪ ಕೇಳಿಬಂದು, ಹಿಂದೆಯೇ ಬಂಧನವೂ ನಡೆಯಿತು.(ಈಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ). ಈ ಸಂಬಂಧ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್‌, ಸಾರಾ ಅಲಿ ಖಾನ್‌ ಸೇರಿದಂತೆ ಹಲವು ನಟ– ನಟಿಯರ ವಿಚಾರಣೆಯೂ ನಡೆಯಿತು. ಈ ಮಧ್ಯೆಯೇ ಆತನ ‘ದಿಲ್‌ ಬೇಚಾರಾ’ ಸಿನಿಮಾ ಬಿಡುಗಡೆಗೊಂಡು ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿತು ಎನ್ನಬಹುದು.

‘ಕ್ವೀನ್‌’ ನಟಿ ಕಂಗನಾ ರನೌತ್‌ ಈ ಸಂದರ್ಭದಲ್ಲಿ ಕರಣ್‌ ಜೋಹರ್‌ನಿಂದ ಹಿಡಿದು ಯುವ ನಟಿ ಸಾರಾ ಅಲಿ ಖಾನ್‌ವರೆಗೂ ಸ್ವಜನ ಪಕ್ಷಪಾತ ಕುರಿತಂತೆ ಟ್ವೀಟ್‌ ಮಾಡುತ್ತ ವಿವಾದದ ಸುಂಟರಗಾಳಿ ಎಬ್ಬಿಸಿದರು. ಬಾಲಿವುಡ್‌ಗೆ ಅಂಟಿಕೊಂಡ ಡ್ರಗ್‌ ಜಾಲದ ಬಗ್ಗೆಯೂ ಹೇಳಿಕೆ ನೀಡುತ್ತಾ ಸುದ್ದಿಯಲ್ಲಿದ್ದರು.

ನಟ ಇರ್ಫಾನ್‌ ಖಾನ್‌ (53) ಹಾಗೂ ರಿಶಿ ಕಪೂರ್‌ (67) ಕೆಲವೇ ಗಂಟೆಗಳ ಅಂತರದಲ್ಲಿ ಕ್ಯಾನ್ಸರ್‌ನಿಂದಾಗಿ ತೀರಿಕೊಂಡಿದ್ದು, ಮ್ಯೂಸಿಕ್‌ ಕಂಪೋಸರ್‌ ವಾಜಿದ್‌ ಖಾನ್‌ ಕೊರೊನಾದಿಂದ ಮೃತಪಟ್ಟಿದ್ದು, ನಿರ್ದೇಶಕ ಬಸು ಚಟರ್ಜಿ ಮತ್ತು ಮಹಿಳಾ ಕೊರಿಯೊಗ್ರಾಫರ್‌ ಸರೋಜ್‌ ಖಾನ್‌ ನಿಧನ ಅಭಿಮಾನಿಗಳನ್ನು ದುಃಖದ ಕಡಲಲ್ಲಿ ಮುಳುಗಿಸಿತು.

ಈ ಎಲ್ಲ ಹತಾಶೆಗಳ ಮಧ್ಯೆ ನಟ ಸೋನು ಸೂದ್‌ ಸಿನಿಮಾ ಚೌಕಟ್ಟಿನ ಹೊರಗೂ ಮಿಂಚಿದರು. ತಮ್ಮ ಮಾನವೀಯ ಕೆಲಸಗಳ ಮೂಲಕ ನಿಜವಾದ ಹೀರೊ ಎನಿಸಿಕೊಂಡರು. ಲಾಕ್‌ಡೌನ್‌ ಸಮಯದಲ್ಲಿ ವಲಸೆ ಹೋದ ಕಾರ್ಮಿಕರಿಗೆ ಎಲ್ಲಾ ರೀತಿಯ ನೆರವು ನೀಡಿದರು.

ಕೊರೊನಾದಿಂದಾಗಿ ಮನೆಯಲ್ಲೇ ಟಿವಿ ಮುಂದೆ ಕುಳಿತ ಜನ ಒಟಿಟಿ, ವೆಬ್‌ ಸರಣಿಗೆ ಅಂಟಿಕೊಂಡರು. ಶೂಜಿತ್‌ ಅವರ ಅಮಿತಾಬ್‌ ಬಚ್ಚನ್‌ ನಟನೆಯ ‘ಗುಲಾಬೊ ಸಿತಾಬೊ’ ವನ್ನು ಅಮೆಜಾನ್‌ ಪ್ರೈಮ್‌ನಲ್ಲಿ ಬಿಟ್ಟಾಗ ಎಲ್ಲರ ಗಮನ ಸೆಳೆಯಿತು. ಅದರ ಹಿಂದೆಯೇ ಜಾಹ್ನವಿ ಕಪೂರ್‌ಳ ‘ಗುಂಜನ್‌ ಸಕ್ಸೇನಾ: ದಿ ಕಾರ್ಗಿಲ್‌ ಗರ್ಲ್‌’, ಅಕ್ಷಯ್‌ ಕುಮಾರ್‌ನ ‘ಲಕ್ಷ್ಮಿ’, ಅನುರಾಗ್‌ ಬಸುವಿನ ‘ಲುಡೊ’ ಸುಧೀರ್‌ ಮಿಶ್ರಾನ ‘ಸೀರಿಯಸ್‌ ಮ್ಯಾನ್‌’ ಒಟಿಟಿಯಲ್ಲಿ ಮಿಂಚಿದವು.

ಅಮಿತಾಬ್‌ ಬಚ್ಚನ್‌, ಮಗ ಅಭಿಷೇಕ್‌, ಸೊಸೆ ಐಶ್ವರ್ಯ ಹಾಗೂ ಮೊಮ್ಮಗಳು ಆರಾಧ್ಯಗೆ ಕೊರೊನಾ ಸೋಂಕು ತಗಲಿ ಗುಣಮುಖರಾದದ್ದು ಕೂಡ ಸಾಕಷ್ಟು ಸುದ್ದಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.