ADVERTISEMENT

ನಿರ್ದೇಶಕರಿಗೆ ಕರೀನಾಳ ಸಪಾಟಾದ ಹೊಟ್ಟೆ ತೋರಿಸುವುದು ಹೇಗೆಂಬ ಚಿಂತೆ!

ವಿಎಫ್‌ಎಕ್ಸ್‌ ತಂತ್ರಜ್ಞಾನದ ಮೊರೆ ಹೋಗಲು ‘ಲಾಲ್‌ ಸಿಂಗ್‌ ಛಡ್ಡಾ’ ಚಿತ್ರತಂಡ ನಿರ್ಧಾರ

ಕೆ.ಎಚ್.ಓಬಳೇಶ್
Published 26 ಆಗಸ್ಟ್ 2020, 7:56 IST
Last Updated 26 ಆಗಸ್ಟ್ 2020, 7:56 IST
ಕರೀನಾ ಕಪೂರ್
ಕರೀನಾ ಕಪೂರ್   

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಮತ್ತು ಕರೀನಾ ಕಪೂರ್‌ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಕುಟುಂಬಕ್ಕೆ ಮತ್ತೊಬ್ಬ ಸದಸ್ಯ ಸೇರ್ಪಡೆಯಾಗುತ್ತಿರುವುದು ಅವರಿಗೆ ಖುಷಿಯ ವಿಚಾರವೇ. ಕರೀನಾ ಈಗಲೂ ಬಿಟೌನ್‌ನ ಸ್ಟಾರ್‌ ಹೀರೊಯಿನ್ ಎಂಬುದರಲ್ಲಿ ಎರಡು ಮಾತಿಲ್ಲ‌. ಬಿಗ್‌ ಬಜೆಟ್‌ ಸಿನಿಮಾಗಳಲ್ಲಿ ಸ್ಟಾರ್‌ ನಟರ ಜೊತೆಗೆ ಆಕೆ ತೆರೆ ಹಂಚಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ.

ಆಕೆ ಈಗ ನಟನೆಯ ಜೊತೆ ಜೊತೆಗೆಯೇ ತಾಯ್ತನದ ಸುಖ ಅನುಭವಿಸಲೂ ಸಜ್ಜಾಗುತ್ತಿದ್ದಾರೆ. ಆದರೆ, ಆಕೆಯನ್ನು ನಂಬಿ ಸಿನಿಮಾಗಳಿಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಕರೀನಾ ಗರ್ಭಿಣಿಯಾಗಿರುವುದು ಅಕ್ಷರಶಃ ತಲೆಬಿಸಿ ತಂದಿದೆ.

ಆಕೆ ಬೆಳ್ಳಿತೆರೆ ಪ್ರವೇಶಿಸಿದ್ದು ‘ರೆಫ್ಯೂಜಿ’ ಚಿತ್ರದ ಮೂಲಕ. ಇದು ತೆರೆ ಕಂಡಿದ್ದು 2000ರಲ್ಲಿ. ಜೆ.ಪಿ. ದತ್ತ ನಿರ್ದೇಶನದ ಇದರಲ್ಲಿ ಅಭಿಷೇಕ್‌ ಬಚ್ಚನ್‌ಗೆ ಆಕೆ ನಾಯಕಿಯಾಗಿ ನಟಿಸಿದ್ದರು. ಆಕೆಯ ವೃತ್ತಿಬದುಕಿಗೆ ಈಗ ಎರಡು ದಶಕ ತುಂಬಿದೆ. ಹಲವು ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಆಕೆಯದ್ದು. ‘ಚಮೇಲಿ’ ಚಿತ್ರದಲ್ಲಿ ಆಕೆ ನಟಿಸಿದ ವೇಶ್ಯೆಯ ಪಾತ್ರಕ್ಕೆ ಸಿನಿಪ್ರಿಯರಿಂದ ಮೆಚ್ಚುಗೆ ಮಹಾಪೂರವೇ ಹರಿದುಬಂದಿತ್ತು.

ADVERTISEMENT

ಈ ಹಿಂದೆ ಆಕೆ ಅಮೀರ್‌ ಖಾನ್‌ ಜೊತೆಗೆ ‘ತ್ರಿ ಈಡಿಯೆಟ್ಸ್‌’ ಚಿತ್ರದಲ್ಲೂ ನಟಿಸಿದ್ದರು. ಈಗ ‘ಲಾಲ್‌ ಸಿಂಗ್‌ ಛಡ್ಡಾ’ದಲ್ಲಿ ಬಾಲಿವುಡ್‌ನ ‘ಮಿಸ್ಟರ್‌ ಫರ್ಪೆಕ್ಟ್‌’ ಜೊತೆಗೆ ನಟಿಸುತ್ತಿದ್ದಾರೆ. ಈ ಚಿತ್ರವು ಹಾಲಿವುಡ್‌ನ ‘ಫಾರೆಸ್ಟ್‌ ಗಂಫ್‌’ ಚಿತ್ರದ ಹಿಂದಿ ರಿಮೇಕ್‌. ಕೋವಿಡ್‌–19 ಪರಿಣಾಮ ಇದರ ಶೂಟಿಂಗ್‌ ವಿಳಂಬವಾಗಿತ್ತು. ಈಗ ಟರ್ಕಿಯಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿದೆ. ಅದ್ವೈತ್‌ ಚಂದ್ರನ್‌ ನಿರ್ದೇಶನದ ಈ ಸಿನಿಮಾ 2021ರ ಕ್ರಿಸ್‌ಮಸ್‌ ಹಬ್ಬದಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಚಿತ್ರದಲ್ಲಿ ಕರೀನಾಳದ್ದು ಪ್ರಧಾನ ಪಾತ್ರ. ಈಗಾಗಲೇ, ಆಕೆಯ ಪ್ರಮುಖ ದೃಶ್ಯಗಳ ಚಿತ್ರೀಕರಣ ಪೂರ್ಣಗೊಂಡಿದೆ. ಆದರೆ, ಆಕೆ ಗರ್ಭಿಣಿಯಾಗಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವು ತಂದಿದೆಯಂತೆ. ಮಗು ಬೆಳೆದಂತೆ ಆಕೆಯ ಹೊಟ್ಟೆಯ ಭಾಗ ಉಬ್ಬುವುದು ಸಹಜ. ಆದರೆ, ಪರದೆ ಮೇಲೆ ನಾಯಕಿಯ ಸಪಾಟಾದ ಹೊಟ್ಟೆ ಮತ್ತು ಸಪೂರವಾದ ಸೊಂಟ ತೋರಿಸಿದರಷ್ಟೇ ಸಿನಿಮಾಗಳು ಗೆಲ್ಲುತ್ತವೆ ಎಂಬುದು ಚಿತ್ರರಂಗದ ಅಲಿಖಿತ ಸೂತ್ರ. ಸದ್ಯದ ಪರಿಸ್ಥಿತಿಯಲ್ಲಿಅಮೀರ್‌ ಖಾನ್‌ ಜೊತೆಗೆ ಕರೀನಾಳ ಸಪೂರವಾದ ಸೊಂಟ ತೋರಿಸುವುದು ನಿರ್ದೇಶಕರಿಗೆ ನಿಜಕ್ಕೂ ಸವಾಲು.

ಈಗ ಕರೀನಾಳ ಸಪಾಟಾದ ಹೊಟ್ಟೆ ಮತ್ತು ಬಳುಕುವ ಸೊಂಟ ತೋರಿಸುವುದು ಹೇಗೆಂಬ ಚಿಂತೆ ನಿರ್ದೇಶಕರಿಗೆ ಕಾಡುತ್ತಿದೆ. ಹಾಗಾಗಿ, ಅವರು ವಿಎಫ್‌ಎಕ್ಸ್‌ ಮೊರೆ ಹೋಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಬಾಲಿವುಡ್‌ ಪಡಸಾಲೆಯಿಂದ ಹೊರಬಿದ್ದಿದೆ.

2014ರಲ್ಲಿ ತೆರೆಕಂಡ ‘ಕಿಕ್‌’ ಚಿತ್ರದಲ್ಲಿ ನಟ ಸಲ್ಮಾನ್‌ ಖಾನ್‌ ಅವರನ್ನು ಸಿಕ್ಸ್‌ ಪ್ಯಾಕ್‌ ರೂಪದಲ್ಲಿ ತೋರಿಸಲಾಗಿತ್ತು. ಬಾಲಿವುಡ್‌ನ ಹಲವು ಸಿನಿಮಾಗಳಿಗೆ ಇಂತಹ ವಿಎಫ್‌ಎಕ್ಸ್ ತಂತ್ರಜ್ಞಾನದ ಬಳಕೆಯಾಗಿದೆ. ಈ ತಂತ್ರಜ್ಞಾನ ಬಳಸಿಯೇ ಪರದೆ ಮೇಲೆ ಕರೀನಾಳನ್ನು ತೋರಿಸಲು ಚಿತ್ರತಂಡ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.