ADVERTISEMENT

ಬೀದಿ ಸಂಭ್ರಮಕ್ಕೆ ಬಾಲಿವುಡ್ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 17:30 IST
Last Updated 24 ಮಾರ್ಚ್ 2020, 17:30 IST
ಕರಣ್ ಜೋಹರ್, ರಿಚಾ ಛಡ್ಡಾ
ಕರಣ್ ಜೋಹರ್, ರಿಚಾ ಛಡ್ಡಾ   

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದ ‘ಜನತಾ ಕರ್ಫ್ಯೂ’ ಆಚರಣೆಯ ವೇಳೆ, ‘ನಡುವೆ ಅಂತರ ಇರಲಿ’ ಎನ್ನುವ ಹಿತವಚನಕ್ಕೆ ಬೆಲೆಕೊಡದವರನ್ನು ಬಾಲಿವುಡ್ ತಾರೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿರುವ ವ್ಯಕ್ತಿಗಳಿಗೆ ಜನತಾ ಕರ್ಫ್ಯೂ ಆಚರಿಸುವ ಸಂದರ್ಭದಲ್ಲಿ, ಜನ ತಮ್ಮ ಮನೆಯ ಬಾಲ್ಕನಿಯಿಂದ ಅಥವಾ ಕಿಟಕಿಯಿಂದ ಚಪ್ಪಾಳೆ ತಟ್ಟಿ ಬೆಂಬಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋರಿದ್ದರು. ಆದರೆ, ಪ್ರಧಾನಿ ಮನವಿಗೆ ಅನುಸಾರವಾಗಿ ವರ್ತಿಸುವುದನ್ನು ಬಿಟ್ಟು, ಜನ ದೊಡ್ಡ ಸಂಖ್ಯೆಯಲ್ಲಿ ರಸ್ತೆಗೆ ಬಂದು ರ್‍ಯಾಲಿ ನಡೆಸಿದ ಪ್ರಕರಣ ಕೂಡ ಭಾನುವಾರ ವರದಿಯಾಗಿದೆ.

‘ದೇಶದ ಹಲವೆಡೆ ಜನ ನಡೆಸಿದ ಸರ್ಕಸ್‌ ನೋಡಿ, ಭಾರತದ ಬಗ್ಗೆ ಚಿಂತೆ ಹೆಚ್ಚಾಗುತ್ತದೆ. ಜನ ಹೀಗೆ ಮಾಡಿದ್ದಕ್ಕೆ ನಾವು ತೆರಬೇಕಾಗಿರುವ ಬೆಲೆ ದೊಡ್ಡದಾಗದಿರಲಿ ಎಂದು ಪ್ರಾರ್ಥಿಸುವೆ’ ಎಂದು ನಟಿ ನಿಮ್ರತ್ ಕೌರ್ ಹೇಳಿದ್ದಾರೆ.

ADVERTISEMENT

ಒಂದಿಷ್ಟು ಮಕ್ಕಳು ರಸ್ತೆಯ ಮೇಲೆ ನೃತ್ಯ ಮಾಡುತ್ತಿರುವ ವಿಡಿಯೊ ಉಲ್ಲೇಖಿಸಿ ನಟಿ ರಿಚಾ ಛಡ್ಡಾ ಅವರು, ‘ಮೂರ್ಖತನದ ಅತಿರೇಕ ಇದು. ಹೀಗೆ ಮಾಡುವುದು ಜನತಾ ಕರ್ಫ್ಯೂ ಆಶಯಕ್ಕೆ ವಿರುದ್ಧ’ ಎಂದು ಹೇಳಿದ್ದಾರೆ.

‘ಒಬ್ಬರಿಂದ ಒಬ್ಬರು ದೂರ ಇರಿ. ಹೀಗೆ ಮಾಡದೆ ಇದ್ದರೆ, ನೀವೇ ಕುಸಿದುಬೀಳುವಿರಿ. ಆಯ್ಕೆ ನಿಮ್ಮದು’ ಎಂದು ಟ್ವೀಟ್ ಮಾಡುವ ಮೂಲಕ ನಟ, ನಿರ್ದೇಶಕ ಕರಣ್ ಜೋಹರ್ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಮಹತ್ವದ ಬಗ್ಗೆ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.