ADVERTISEMENT

ನಟಿ ಶ್ರೀದೇವಿ ನಿಗೂಢ ಸಾವಿಗೆ ಕಾರಣ ಬಹಿರಂಗಪಡಿಸಿದ ಪತಿ ಬೋನಿ ಕಪೂರ್

ಶ್ರೀದೇವಿ ಸಾವಿನ ಬಗ್ಗೆ ಕೆಲ ಭಾರತೀಯ ಮಾಧ್ಯಮಗಳು ಕಲ್ಪಿತ ವರದಿ ಪ್ರಸಾರ ಮಾಡಿದ್ದವು ಎಂದು ಅಸಮಾಧಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2023, 3:13 IST
Last Updated 3 ಅಕ್ಟೋಬರ್ 2023, 3:13 IST
<div class="paragraphs"><p>ಪತಿ ಬೋನಿ ಕಪೂರ್ (ಎಡಗಡೆ), ಮಗಳಂದಿರಾದ ಜಾನ್ವಿ (ಎಡದಿಂದ ಎರಡನೆಯವರು) ಮತ್ತು ಖುಷಿ ಜತೆ ನಟಿ ಶ್ರೀದೇವಿ ಕಪೂರ್ (ಬಲ ಚಿತ್ರ). </p></div>

ಪತಿ ಬೋನಿ ಕಪೂರ್ (ಎಡಗಡೆ), ಮಗಳಂದಿರಾದ ಜಾನ್ವಿ (ಎಡದಿಂದ ಎರಡನೆಯವರು) ಮತ್ತು ಖುಷಿ ಜತೆ ನಟಿ ಶ್ರೀದೇವಿ ಕಪೂರ್ (ಬಲ ಚಿತ್ರ).

   

- ರಾಯಿಟರ್ಸ್ ಚಿತ್ರ

ಬೆಂಗಳೂರು: ಭಾರತೀಯ ಚಿತ್ರರಂಗವನ್ನು ದಶಕಗಳ ಕಾಲ ಆಳಿದ ಖ್ಯಾತ ನಟಿ ಶ್ರೀದೇವಿ ಸಾವಿನ ಬಗೆಗೆ ಇನ್ನೂ ಅನೇಕ ಪ್ರಶ್ನೆಗಳು ಉಳಿದುಕೊಂಡಿವೆ.

ADVERTISEMENT

2018 ಫೆಬ್ರುವರಿ 24 ರಂದು ದುಬೈನ ಐಷಾರಾಮಿ ಹೋಟೆಲ್ ಒಂದರ ಸ್ನಾನಗೃಹದ ಬಾತ್‌ಟಬ್‌ನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿತ್ತು. ಈ ಬಗ್ಗೆ ಅವರ ಪತಿ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರನ್ನು ದುಬೈ ಪೊಲೀಸರು ತೀವ್ರ ವಿಚಾರಣೆ ನಡೆಸಿ ಶ್ರೀದೇವಿ ಸಾವು ಕೊಲೆಯಲ್ಲ ಎಂದು ಹೇಳಿತ್ತು.

ಆದರೆ, ಭಾರತೀಯ ಅನೇಕ ಮಾಧ್ಯಮಗಳಲ್ಲಿ ಇದೊಂದು ಸಹಜ ಸಾವೇ? ಕೊಲೆಯೇ? ಎಂಬ ಅರ್ಥದಲ್ಲಿ ವ್ಯಾಪಕ ಚರ್ಚೆಗಳು ನಡೆದಿದ್ದವು. ಈ ಬಗ್ಗೆ ಬೋನಿ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇತ್ತೀಚೆಗೆ ಖಾಸಗಿ ಮಾಧ್ಯಮ ಸಂಸ್ಥೆ ‘ದಿ ನ್ಯೂ ಇಂಡಿಯನ್‌ಗೆ’ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಬೋನಿ ಕಪೂರ್, ಶ್ರೀದೇವಿ ಸಾವಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

‘ಶ್ರೀದೇವಿ ಸಾವಾದ ನಂತರ ನಾನು ದುಬೈ ಪೊಲೀಸರ ವಿಚಾರಣೆಯನ್ನು ಹೊರತುಪಡಿಸಿ ಏನನ್ನೂ ಮಾತನಾಡಿರಲಿಲ್ಲ. ಆದರೂ, ಸರ್ವಾಧಿಕಾರಿ ಮನೋಭಾವದ ಕೆಲ ಭಾರತೀಯ ಮಾಧ್ಯಮಗಳು ಅವಳ ಸಾವಿಗೆ ಊಹಾಪೋಹಗಳನ್ನು ಸೇರಿಸಿ ವರದಿ ಮಾಡಿದ್ದವು. ಆದರೆ, ನಾನು ಏನನ್ನೂ ಮಾತನಾಡಿರಲಿಲ್ಲ‘ ಎಂದಿದ್ದಾರೆ.

‘ಶ್ರೀದೇವಿ ವಿಪರೀತ ಡಯಟ್ ಮಾಡುತ್ತಿದ್ದಳು. ಅದರಲ್ಲೂ ಇಂಗ್ಲಿಷ್–ವಿಂಗ್ಲಿಷ್ ಸಿನಿಮಾ ಸಂದರ್ಭದಲ್ಲಿ 45 ಕೆ.ಜಿಗೆ ತೂಕ ಇಳಿಸಿಕೊಂಡಿದ್ದಳು. ಕಡೆಗೆ ಆಹಾರದಲ್ಲಿ ಉಪ್ಪು ಬಳಸುವುದನ್ನೂ ನಿಲ್ಲಿಸಿದ್ದಳು. ಇದರಿಂದ ಅವಳ ಬಿಪಿ ತುಂಬಾ ಕಡಿಮೆ ಆಗಿತ್ತು’ ಎಂದು ಹೇಳಿದ್ದಾರೆ.

‘ನಟ ನಾಗಾರ್ಜುನ್ ನನ್ನ ಬಳಿ ಒಮ್ಮೆ ಹೇಳಿದ್ದರು. ಶೂಟಿಂಗ್ ಸಂದರ್ಭದಲ್ಲಿ ವಿಪರೀತ ಡಯಟ್‌ನಿಂದ ಶ್ರೀದೇವಿ ಬಾತ್‌ರೂಮಿನಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದಳು. ಆ ವಿಷಯ ನನಗೆ ಶ್ರೀದೇವಿಯನ್ನು ಮದುವೆಯಾದ ಮೇಲೆ ಗೊತ್ತಾಗಿತ್ತು. ಆ ನಂತರವೂ ಕೂಡ ಅವಳು ವಿಪರೀತ ಡಯಟ್ ಮಾಡುತ್ತಿದ್ದಳು’ ಎಂದು ಹೇಳಿದ್ದಾರೆ.

‘ಶ್ರೀದೇವಿ ಸಾವನ್ನು ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವಳ ಸಾವು ಸಹಜ ಸಾವಲ್ಲ, ಅದೊಂದು ಆಕಸ್ಮಿಕ’ ಸಾವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಈ ವಿಚಾರದಲ್ಲಿ ದುಬೈ ಪೊಲೀಸರು ನನಗೆ ಕ್ಲೀನ್ ಚೀಟ್ ಕೊಟ್ಟರೂ ಭಾರತೀಯ ಮಾಧ್ಯಮಗಳಿಂದ ಸಿಕ್ಕಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.