ADVERTISEMENT

ಒಂದು ಚಿತ್ರ, ಅನೇಕ ಪಾತ್ರಗಳ ‘ಸಂಜು’; ಒಂದು ಬೆಣ್ಣೆ, ಅನೇಕ ಭಕ್ಷ್ಯಗಳ ‘ಅಮುಲ್‌’

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 10:46 IST
Last Updated 3 ಜುಲೈ 2018, 10:46 IST
   

ನವದೆಹಲಿ:ಬಾಲಿವುಡ್‌ನಲ್ಲಿ ಸದ್ದುಮಾಡುತ್ತಿರುವ ‘ಸಂಜು’ ಚಿತ್ರದ ಯಶಸ್ಸನ್ನು ಅಮುಲ್‌ ತನ್ನ ಉತ್ಪನ್ನಗಳನ್ನು ಜನರತ್ತ ತಲುಪಿಸಲು ಬಳಿಸಿಕೊಂಡಿದೆ.

ಜೂನ್‌ 29ರಂದು ತೆರೆಕಂಡ, ಮುಖ್ಯಪಾತ್ರದಲ್ಲಿ ರಣಬೀರ್‌ ಕಪೂರ್‌ ಅಭಿನಯಿಸಿರುವ ರಾಜ್‌ ಕುಮಾರ್‌ ಹಿರಾನಿ ಅವರ ನಿರ್ದೇಶನದ ‘ಸಂಜು’ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಯಶಸ್ಸು ಪಡೆದಿದೆ. ಅದು ಈಗಾಗಲೇ ಬಾಹುಬಲಿಯನ್ನು ಹಿಂದಿಕ್ಕಿದೆ. ಅಗ್ರ ಸ್ಥಾನವನ್ನು ಆಕ್ರಮಿಸಿಕೊಳ್ಳುವತ್ತ ಮುನ್ನಡೆಯುತ್ತಿದೆ.

‘ಸಂಜು’ ಬಿಡುಗಡೆಯಾದ ಮೂರನೇ ದಿನ ₹46.71 ಕೋಟಿ ಅತಿ ಹೆಚ್ಚು ಗಳಿಕೆ ಮಾಡಿದೆ. ನಾಲ್ಕನೆ ದಿನಕ್ಕೆ ಒಟ್ಟು ₹145.41 ಕೋಟಿ ಗಳಿಸಿ ಮುನ್ನಡೆಯುತ್ತಿದೆ. ಈ ಹಿಂದೆ ದಾಖಲೆ ಸೃಷ್ಟಿಸಿದ್ದ ‘ಬಾಹುಬಲಿ 2’ ಮೂರನೇ ದಿನ ₹46.51 ಕೋಟಿ ಗಳಿಸಿತ್ತು.

ADVERTISEMENT

ಬಾಲಿವುಡ್‌ನಲ್ಲೀಗ ‘ಸಂಜು’ ಅಪಾರ ಯಶಸ್ಸುಗಳಿಸಿದ ಬೆನ್ನಲ್ಲೇ ಅಮುಲ್‌ ತನ್ನ ಹೊಸ ಉತ್ಪನ್ನಗಳ ಪ್ರಚಾರಕ್ಕೆ ಚಿತ್ರದ ವಿವಿಧ ಪಾತ್ರಗಳಲ್ಲಿ ಸಂಜಯ್‌ ದತ್‌ ಕಾಣಿಸಿಕೊಂಡಿರುವ ಕಾರ್ಟೂನ್‌ವೊಂದನ್ನು ಪ್ರಕಟಿಸಿದೆ. ಜತೆಗೆ, ಚಿತ್ರವನ್ನು ತಪ್ಪದೆ ನೋಡಿ, ಅಷ್ಟರಮಟ್ಟಿಗೆ ಅದು ಉತ್ತಮವಾಗಿದೆ ಎಂದಿದೆ.

'ಒಂದು ಬೆಣ್ಣೆ. ಅನೇಕ ಭಕ್ಷ್ಯ/ತಿನಿಸುಗಳು' ಎಂಬ ಶೀರ್ಷಿಕೆಯೊಂದಿಗೆ ಹೊಸ ಉತ್ಪನ್ನದ ಚಿತ್ರವನ್ನು ಅಮುಲ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿದೆ.

ಕಾರ್ಟೂನ್‌ನಲ್ಲಿ ಸಂಜಯ್‌ ದತ್‌ ಅವರ ಐದು ಪಾತ್ರಗಳನ್ನು ಬಿಂಬಿಸಲಾಗಿದ್ದು, ಒಬ್ಬೊಬ್ಬ ಪಾತ್ರದಾರಿಯೂ ಒಂದೊಂದು ಬಗೆಯ ತಿನಿಸುಗಳನ್ನು ಹಿಡಿದು ತಿನ್ನುತ್ತಿರುವಂತೆ ಚಿತ್ರಿಸಲಾಗಿದೆ. ಅಮುಲ್‌ ಬೆಣ್ಣೆಯನ್ನು ಬಳಸಿದ ಹಲವು ಬಗೆಯ ತಿನಿಸುಗಳು ಗ್ರಾಹಕರಿಗೆ ಲಭ್ಯವಿವೆ ಎನ್ನುವಂತೆ ತೋರಿಸಲಾಗಿದೆ.

‘ಸಂಜು’ದಲ್ಲಿ ಸ್ಟಾರ್‌ ನಟ ಸಂಜಯ್‌ ದತ್‌ ಅವರ ಜೀವನನ್ನು ಚಿತ್ರಿಸಲಾಗಿದೆ. ಈ ಚಿತ್ರ ಮುಖ್ಯವಾಗಿ ಮೂರು ಹಂತಗಳ ಮೂಲಕ ಸಂಜಯ್‌ ದತ್‌ ಅವರ ಜೀವನನ್ನು ತೆರದಿಡಲಾಗಿದೆ. ರಣಬೀರ್‌ ಕಪೂರ್‌ ಅವರು ದತ್‌ ಅವರ ಪಾತ್ರಕ್ಕೆ ಜೀವತುಂಬಿದ್ದು, ಅಭಿನಯಕ್ಕಾಗಿ ವ್ಯಾಪಕವಾಗಿ ಮೆಚ್ಚುಗೆ ಗಳಿಸಿದ್ದಾರೆ.

ರಾಜ್‌ ಕುಮಾರ್‌ ಹಿರಾನಿ, ವಿದು ವಿನೋದ್ ಚೋಪ್ರಾ ಅವರು ಸಂಜು ನಿರ್ಮಿಸಿದ್ದಾರೆ. ಖ್ಯಾತ ನಟ ಪರೇಶ್‌ ರಾವಲ್‌ ಅವರು ಸುನಿಲ್‌ ದತ್‌(ಸಂಜಯ್‌ ತಂದೆ) ಮತ್ತು ಮನಿಶಾ ಕೊಯಿರಾಲಾ ಅವರು ಪ್ರಖ್ಯಾತ ನಟ ನರ್ಗಿಸ್‌(ದತ್‌ ಅವರ ತಾಯಿ) ಪಾತ್ರವನ್ನು ನಿರ್ವಹಿಸಿದ್ದಾರೆ.

ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಸೋನಮ್‌ ಕಪೂರ್‌, ದಿಯಾ ಮಿರ್ಜಾ, ಬೋಮನ್‌ ಇರಾನಿ, ಕರಿಶ್ಮಾ ತನ್ನಾ, ವಿಕಿ ಕೌಶಲ್‌ ಮತ್ತು ಜಿಮ್‌ ಸರ್ಬ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಮುಲ್‌ ಪ್ರಸ್ತುತ ಘಟನಾವಳಿಗಳನ್ನು ಇರಿಸಿಕೊಂಡು ಪ್ರಚಾರ ನಡೆಸುತ್ತಿದೆ. ವಿಶ್ವ ಫುಟ್‌ಬಾಲ್‌ ಪಂದ್ಯಾವಳಿಯ ಪ್ರಮುಖ ಘಟ್ಟಗಳನ್ನೂ ತನ್ನ ಪ್ರಚಾರದ ಸಂಗತಿಗಳಾಗಿ ಬಳಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.