ADVERTISEMENT

ಖಾಲಿದ್ ಕಾ ಶಿವಾಜಿ ‌| ಬಲಪಂಥೀಯರ ವಿರೋಧ, ಚಿತ್ರ ಬಿಡುಗಡೆ ಸ್ಥಗಿತ; ಏನಿದು ವಿವಾದ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಆಗಸ್ಟ್ 2025, 12:33 IST
Last Updated 25 ಆಗಸ್ಟ್ 2025, 12:33 IST
Shwetha Kumari
   Shwetha Kumari

ಮುಂಬೈ: 'ಖಾಲಿದ್ ಕಾ ಶಿವಾಜಿ' ಮರಾಠಿ ಚಿತ್ರಕ್ಕೆ ನೀಡಿದ ಸೆನ್ಸಾರ್ ಪ್ರಮಾಣಪತ್ರವನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಚಿತ್ರದ ನಿರ್ದೇಶಕ ರಾಜ್ ಪ್ರೀತಮ್ ಮೋರೆ ಅವರು ಶನಿವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಆರೋಪಿಸಿ ಬಲ ಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಚಿತ್ರ ಬಿಡುಗಡೆಗೆ ಒಂದು ದಿನದ ಮೊದಲು ಆಗಸ್ಟ್‌ 7ರಂದು ಚಿತ್ರದ ಸೆನ್ಸಾರ್‌ ಪ್ರಮಾಣ ಪತ್ರವನ್ನು ಸಿಬಿಎಫ್‌ಸಿ(ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ) ಒಂದು ತಿಂಗಳ ಅವಧಿಗೆ ಅಮಾನತುಗೊಳಿಸಿತ್ತು.

ಸಿಬಿಎಫ್‌ಸಿಯ ಈ ಕ್ರಮವನ್ನು ಕಾನೂನುಬಾಹಿರ, ಸಂವಿಧಾನ ವಿರೋಧಿ ಎಂದು ಕರೆದಿರುವ ರಾಜ್ ಪ್ರೀತಮ್, ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ತಕ್ಷಣಕ್ಕೆ ಪರಿಹಾರ ಒದಗಿಸಲು ನಿರಾಕರಿಸಿರುವ ನ್ಯಾಯಾಲಯವು, ಹೆಚ್ಚಿನ ವಿಚಾರಣೆಗೆ ಅವಕಾಶ ನೀಡದೆ ಅಮಾನತು ಅವಧಿಯನ್ನು ವಿಸ್ತರಿಸಬಾರದು ಎಂದು ಮೌಖಿಕವಾಗಿ ಸೂಚಿಸಿದೆ.

ADVERTISEMENT

ಏನಿದು ವಿವಾದ:

ಆಗಸ್ಟ್ 5ರಂದು ಸಿಬಿಎಫ್‌ಸಿಗೆ ಪತ್ರ ಬರೆದಿದ್ದ ಪುಣೆ ಮೂಲದ ಬಲಪಂಥೀಯ ಸಂಘಟನೆ ಹಿಂದೂ ಮಹಾಸಂಘ, ಆಗಸ್ಟ್‌ 8ರಂದು ‘ಖಾಲಿದ್‌ ಕಾ ಶಿವಾಜಿ’ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬಾರದು ಎಂದು ಕೋರಿತ್ತು. ಶಿವಾಜಿ ಮಹಾರಾಜರ ಇತಿಹಾಸವನ್ನು ತಿರುಚುವ ಉದ್ದೇಶ ಹೊಂದಿರುವ ಈ ಚಿತ್ರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದೂ ಒತ್ತಾಯಿಸಿತ್ತು.

ಚಿತ್ರ ಬಿಡುಗಡೆಗೆ ಅವಕಾಶ ನೀಡಿದಲ್ಲಿ, ಅದು ಪ್ರದರ್ಶನಗೊಳ್ಳುವ ಚಿತ್ರಮಂದಿಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದೂ ಎಚ್ಚರಿಕೆ ನೀಡಿತ್ತು.

‘ಛತ್ರಪತಿ ಶಿವಾಜಿ ಮಹಾರಾಜರು ಕೇವಲ ನಮಗೆ, ಹಿಂದೂಗಳಿಗೆ ಮತ್ತು ಮರಾಠರಿಗೆ ಸೇರಿದವರು. ಖಾಲಿದ್ ಕಾ ಶಿವಾಜಿಯ ಕಲ್ಪನೆಗೆ ನಮ್ಮ ಆಕ್ಷೇಪಣೆ ಇದೆ’ ಎಂದು ಸಂಘದ ಅಧ್ಯಕ್ಷ ಆನಂದ್ ಡೇವ್ ಹೇಳಿದ್ದರು.

ಖಾಲಿದ್‌ ಕಾ ಶಿವಾಜಿ, ಮುಸ್ಲಿಂ ಹುಡುಗನೊಬ್ಬ ಶಿವಾಜಿ ಮಹಾರಾಜರ ಬಗ್ಗೆ ತಿಳಿದುಕೊಳ್ಳುವ ಕಥಾಹಂದರವನ್ನು ಹೊಂದಿದೆ ಎಂದು ನಿರ್ದೇಶಕ ರಾಜ್ ಪ್ರೀತಮ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.