ADVERTISEMENT

Sandalwood: ಚೈತ್ರಾ ಜೆ.ಆಚಾರ್‌ ನಟನೆಯ ಲೈಲಾಸ್‌ ಸ್ವೀಟ್‌ ಡ್ರೀಮ್‌

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 0:30 IST
Last Updated 30 ಡಿಸೆಂಬರ್ 2025, 0:30 IST
ಅವಿನಾಶ್‌, ಚೈತ್ರಾ, ಎಂ.ಡಿ.ಪಲ್ಲವಿ 
ಅವಿನಾಶ್‌, ಚೈತ್ರಾ, ಎಂ.ಡಿ.ಪಲ್ಲವಿ    

‘ತಲೆದಂಡ’, ‘ಟೋಬಿ’, ‘ಸಪ್ತಸಾಗರದಾಚೆ ಎಲ್ಲೋ’, ‘ಬ್ಲಿಂಕ್‌’, ‘3ಬಿಎಚ್‌ಕೆ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಭಿನ್ನವಾದ ಪಾತ್ರಗಳ ಮೂಲಕ ಪ್ರೇಕ್ಷಕರೆದುರಿಗೆ ಬಂದಿದ್ದ ನಟಿ ಚೈತ್ರಾ ಜೆ.ಆಚಾರ್‌, ‘ಎಲ್‌ಎಸ್‌ಡಿ’ ಅಂದರೆ ‘ಲೈಲಾಸ್‌ ಸ್ವೀಟ್‌ ಡ್ರೀಮ್‌’ ಎಂಬ ಸಿನಿಮಾ ಒಪ್ಪಿಕೊಂಡಿದ್ದಾರೆ. 

ಸುರಾಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸುತ್ತಿರುವ ಈ ಸಿನಿಮಾವನ್ನು ಶಕ್ತಿಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಯಿತು. ‘ಎಲ್‌ಎಸ್‌ಡಿ’ ಸುರಾಮ್ ಮೂವೀಸ್ ನಿರ್ಮಾಣದ ನಾಲ್ಕನೇ ಚಿತ್ರ.

‘ನಮ್ಮ ಸಂಸ್ಥೆಯ ನಿರ್ಮಾಣದ ಮೊದಲ ಸಿನಿಮಾ ಇತ್ತೀಚೆಗೆ ತೆರೆಕಂಡ ‘ನಿದ್ರಾದೇವಿ ನೆಕ್ಸ್ಟ್ ಡೋರ್’. ಶ್ರೀಮುರಳಿ ಅಭಿನಯದ ‘ಉಗ್ರಾಯುಧಮ್’ ಹಾಗೂ ‘ನೀ ನಂಗೆ ಅಲ್ವಾ’ ಸಿನಿಮಾಗಳ ಶೂಟಿಂಗ್‌ ಚಾಲ್ತಿಯಲ್ಲಿದೆ. ಶಕ್ತಿಪ್ರಸಾದ್ ಹೇಳಿದ ಈ ಸಿನಿಮಾದ ಕಥೆ ಇಷ್ಟವಾಯಿತು. ಚೈತ್ರಾ ಜೆ.ಆಚಾರ್, ಎಂ.ಡಿ.ಪಲ್ಲವಿ, ಅವಿನಾಶ್ ಮುಂತಾದವರು ಚಿತ್ರದ ಪ್ರಮುಖಪಾತ್ರದಲ್ಲಿದ್ದಾರೆ’ ಎಂದರು ಜಯರಾಮ್ ದೇವಸಮುದ್ರ.

ADVERTISEMENT

ಅನೇಕ ಕಿರುಚಿತ್ರಗಳನ್ನು ಮಾಡಿರುವ ಶಕ್ತಿಪ್ರಸಾದ್‌ ಅವರಿಗೆ ಇದು ಬೆಳ್ಳಿತೆರೆಯಲ್ಲಿ ಚೊಚ್ಚಲ ಸಿನಿಮಾ. ‘ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ತಾಯಿ-ಮಗಳ ಬಾಂಧವ್ಯದ ಕಥೆ ಸಿನಿಮಾದಲ್ಲಿದೆ. ಬಿಸ್‌ನೆಸ್‌ಮೆನ್‌ ಪಾತ್ರದಲ್ಲಿ ಅವಿನಾಶ್ ಅವರು ನಟಿಸಲಿದ್ದು, ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ರಿತೇಶ್ ಛಾಯಾಚಿತ್ರಗ್ರಹಣ ಹಾಗೂ ಬಲರಾಮ್ ಸಂಕಲನವಿರಲಿದೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ 15 ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ’ ಎನ್ನುತ್ತಾರೆ ಶಕ್ತಿಪ್ರಸಾದ್.

‘ಕೆಲವು ವರ್ಷಗಳ ನಂತರ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಚೈತ್ರಾ ಜೆ.ಆಚಾರ್ ಅವರ ಅಮ್ಮನ ಪಾತ್ರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದರು ಎಂ.ಡಿ.ಪಲ್ಲವಿ. 

ಸುಮಾರು ಒಂದೂವರೆ ವರ್ಷಗಳ ಹಿಂದೆ ಈ ಕಥೆ ಹೇಳಿದ್ದರು. ನನಗೆ ಕಥೆ ಇಷ್ಟವಾಯಿತು. ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ.
ಚೈತ್ರಾ ಜೆ.ಆಚಾರ್ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.