
ಈ ವರ್ಷದ ಚಂದನವನದ ಮೊದಲಾರ್ಧ ಕಳೆದ ವರ್ಷದಂತೆಯೇ ಇತ್ತು. ‘ಎ’ ಶ್ರೇಣಿಯ ಸ್ಟಾರ್ಸ್‌ಗಳ ಸಿನಿಮಾವಿಲ್ಲದೆ ಸುಮಾರು ಐದಾರು ತಿಂಗಳು ಚಿತ್ರಮಂದಿರಗಳು ಬಿಕೋ ಎಂದವು. ದ್ವಿತೀಯಾರ್ಧದಲ್ಲಿ ಟಾಪ್ ಹೀರೊಗಳ ಸಿನಿಮಾಗಳು ಸಾಲು ಸಾಲಾಗಿ ತೆರೆಕಂಡು ಚಿತ್ರಮಂದಿರಗಳು ತುಂಬಿದವು. ಭಾರತದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕಾಂತಾರ–ಚಾಪ್ಟರ್ 1’ ಎರಡನೇ ಸ್ಥಾನ ಪಡೆಯಿತು. ಈ ವರ್ಷ 226 ಕನ್ನಡ ಸಿನಿಮಾಗಳು ತೆರೆಕಂಡರೂ ಈ ಪೈಕಿ ಸದ್ದು, ದುಡ್ಡು ಮಾಡಿದ್ದು ಬೆರಳೆಣಿಕೆಯಷ್ಟೇ ಸಿನಿಮಾಗಳು.
2024ರ ಡಿಸೆಂಬರ್ ಕೊನೆ ವಾರದಲ್ಲಿ ತೆರೆಕಂಡ ಉಪೇಂದ್ರ ನಟನೆಯ ‘ಯುಐ’ ಮತ್ತು ಸುದೀಪ್ ನಟನೆಯ ‘ಮ್ಯಾಕ್ಸ್’ನ ಓಟದೊಂದಿಗೆ 2025 ಆರಂಭವಾಗಿತ್ತು. ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಸುಮಾರು 90 ಸಿನಿಮಾಗಳು ತೆರೆಗೆ ಬಂದಿದ್ದವು. ಈ ಪೈಕಿ 28 ದಿನಗಳನ್ನಷ್ಟೇ ಹೊಂದಿದ್ದ ಫೆಬ್ರುವರಿಯಲ್ಲಿ 36 ಸಿನಿಮಾಗಳು ತೆರೆಕಂಡವು. ಫೆಬ್ರುವರಿ 21 ರ ಶುಕ್ರವಾದ 11 ಸಿನಿಮಾಗಳು ತೆರೆಕಂಡಿದ್ದೂ ಇದೆ! ಇವುಗಳಲ್ಲಿ ಗಳಿಕೆಯಲ್ಲಿ ಕೊಂಚ ಸದ್ದು ಮಾಡಿದ್ದು ಶರಣ್ ನಟನೆಯ ‘ಛೂ ಮಂತರ್’ ಹಾಗೂ ಅಜಯ್ ರಾವ್ ನಿರ್ದೇಶಿಸಿ ನಟಿಸಿದ್ದ ‘ಯುದ್ಧಕಾಂಡ’ ಮಾತ್ರ. ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ವ್ಯಾಪಕ ಪ್ರಚಾರ ಪಡೆಯಿತಾದರೂ ಗಳಿಕೆಯಲ್ಲಿ ಸದ್ದು ಮಾಡಲಿಲ್ಲ. ಮಾರ್ಚ್ ಮಾಸಾಂತ್ಯದಿಂದ ಸಿನಿಮಾ ಬಿಡುಗಡೆ ಪ್ರಮಾಣ ಇಳಿಕೆಯಾಯಿತು. ವಾರಕ್ಕೆ ಮೂರ್ನಾಲ್ಕು ಸಿನಿಮಾಗಳು ತೆರೆಕಂಡರೂ ಜನರು ಚಿತ್ರಮಂದಿರದತ್ತ ಸುಳಿಯದ ಸ್ಥಿತಿ ನಿರ್ಮಾಣವಾಗಿತ್ತು. ಭಿನ್ನ ನಿರೂಪಣೆಯಿಂದಾಗಿ ‘ಫೈರ್‌ಫ್ಲೈ’ ಕೊಂಚ ಗಮನ ಸೆಳೆಯಿತು.
ಜೂನ್ ಮೊದಲ ವಾರದಲ್ಲಿ ತೆರೆಕಂಡ ವಿನೋದ್ ಪ್ರಭಾಕರ್ ನಟನೆಯ ‘ಮಾದೇವ’ ಒಳ್ಳೆಯ ಅಭಿಪ್ರಾಯ ಹೊಂದುವ ಮೂಲಕ ಚಂದನವನದ ದ್ವಿತೀಯಾರ್ಧ ಆರಂಭವಾಯಿತು. ಭಿನ್ನ ಪಾತ್ರದಲ್ಲಿ ತೆರೆ ಮೇಲೆ ವಿನೋದ್, ಶ್ರುತಿ ಮಿಂಚಿದರು. ‘ಬ್ಯಾಂಗಲ್ ಬಂಗಾರಿ’ ಹಾಡಿನಿಂದಲೇ ಗೆದ್ದು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದ ಯುವ ರಾಜ್‌ಕುಮಾರ್ ನಟನೆಯ ‘ಎಕ್ಕ’ ಪ್ರೇಕ್ಷಕರಿಗೆ ಮನರಂಜನೆ ನೀಡಿತು. ಭರ್ಜರಿ ಪ್ರಚಾರ ನಡೆಸಿದ ರಾಧಾಕೃಷ್ಣ ರೆಡ್ಡಿ ನಿರ್ದೇಶನದ, ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ‘ಜೂನಿಯರ್’ ಯುವಜನತೆಯನ್ನು ಸೆಳೆಯಿತು.
ಪ್ರೇಕ್ಷಕರ ಸುವೃಷ್ಟಿ–ಸೃಷ್ಟಿಯಾದ ಸೋಜಿಗ
ಜುಲೈ 25ರಂದು ತೆರೆಕಂಡ ಜೆ.ಪಿ.ತೂಮಿನಾಡು ನಿರ್ದೇಶನದ ‘ಸು ಫ್ರಮ್ ಸೋ’ ಇಡೀ ಭಾರತೀಯ ಚಿತ್ರರಂಗವನ್ನು ಕರ್ನಾಟಕದತ್ತ ತಿರುಗುವಂತೆ ಮಾಡಿತು. ಶಶಿಧರ್ ಶೆಟ್ಟಿ ಬರೋಡ, ರವಿ ರೈ ಕಳಸ, ರಾಜ್ ಬಿ.ಶೆಟ್ಟಿ ನಿರ್ಮಿಸಿದ್ದ ಈ ಸಿನಿಮಾ ಸದ್ದಿಲ್ಲದೆ ಮೊದಲ ಹೆಜ್ಜೆ ಇಟ್ಟಿತ್ತು. ಸೆಲಿಬ್ರಿಟಿ ಶೋಗಳನ್ನು ನಡೆಸದೆ ಸಿನಿಮಾ ಬಿಡುಗಡೆಗೂ ಮುನ್ನ 38 ಪೇಯ್ಡ್ ಪ್ರೀಮಿಯರ್ ಆಯೋಜಿಸಿ ಜನರ ಮಾತುಗಳಿಗೆ ವೇದಿಕೆ ಕಲ್ಪಿಸಿತು. ಸಿನಿಮಾ ಅದ್ಧೂರಿಯಾಗಿದ್ದರಷ್ಟೇ ಜನ ಚಿತ್ರಮಂದಿರಗಳಿಗೆ ಬರುತ್ತಾರೆ ಎನ್ನುವ ಮಾತನ್ನು ಈ ಸಿನಿಮಾ ಹುಸಿಯಾಗಿಸಿತು. ಹೆಚ್ಚಿನ ಸೆಟ್ ಬಳಸದೆ, ಮನರಂಜನೆಗೇ ಹೆಚ್ಚಿನ ಒತ್ತು ಕೊಟ್ಟು ₹5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಸು ಫ್ರಮ್ ಸೋ’ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿತು.(ಅಧಿಕೃತವಾಗಿ ಚಿತ್ರತಂಡ ಬಾಕ್ಸ್ ಆಫೀಸ್ ಲೆಕ್ಕ ನೀಡಿಲ್ಲ) ಇತರೆ ಭಾಷೆಗಳಿಗೂ ಡಬ್ ಆಗಿ ಸಿನಿಮಾ ತಲುಪಿತು.
‘ಕಾಟೇರ’ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ನಿರ್ಮಾಣದ, ಪುನೀತ್ ರಂಗಸ್ವಾಮಿ ನಿರ್ದೇಶನದ ‘ಏಳುಮಲೆ’ 25 ದಿನಗಳನ್ನು ಪೂರೈಸಿತು. ಸಿನಿಮಾದ ಥ್ರಿಲ್ಲರ್ ಅಂಶ, ಪ್ರೇಮಕಥೆ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ವಿನಯ್ ರಾಜ್‌ಕುಮಾರ್ ನಟನೆಯ ‘ಅಂದೊಂದಿತ್ತು ಕಾಲ’ ಕಥೆ ಹಲವರಿಗೆ ಹಿಡಿಸಿತು.
₹800 ಕೋಟಿ ದಾಟಿದ ‘ಕಾಂತಾರ’
ಅಕ್ಟೋಬರ್‌ನಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ–ಚಾಪ್ಟರ್ 1’ ರಾಜ್ಯದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಕೊಂಡಿತ್ತು. ಈ ಸಿನಿಮಾ ಚಿತ್ರಮಂದಿರಗಳನ್ನು ಪ್ರೇಕ್ಷಕರಿಂದ ಭರ್ತಿಯಾಗಿಸಿತು. ಬಿಡುಗಡೆಯಾದ ಮೊದಲ ವಾರದಲ್ಲಿ ವಿಶ್ವದಾದ್ಯಂತ ₹509.25 ಕೋಟಿ ಗಳಿಸಿದ ಈ ಸಿನಿಮಾ, ₹818 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತು. ಕರ್ನಾಟಕವೊಂದರಲ್ಲೇ ಗಳಿಕೆ ₹250 ಕೋಟಿ ದಾಟಿತು. ರಾಜ್ಯದಲ್ಲಿ ಇಷ್ಟು ಹಣ ಗಳಿಸಿದ ಮೊದಲ ಕನ್ನಡ ಚಲನಚಿತ್ರ ಎಂಬ ದಾಖಲೆ ಈ ಸಿನಿಮಾ ಪಾಲಾಯಿತು.
ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಅಂಜಿ ನವೆಂಬರ್‌ನಲ್ಲೇ ಸುಮಾರು 27 ಕನ್ನಡ ಸಿನಿಮಾಗಳು ಬಿಡುಗಡೆಯಾದವು. ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’, ಚಂದನ್ ನಟಿಸಿ, ನಿರ್ದೇಶಿಸಿದ ‘ಫ್ಲರ್ಟ್’ ಪ್ರೇಕ್ಷಕರನ್ನು ಸೆಳೆದವು.
ಡಿಸೆಂಬರ್‌ನಲ್ಲಿ ಸ್ಟಾರ್ಸ್ ಮಿಂಚು
ಡಿ.11ರಂದು ಬಿಡುಗಡೆಗೊಂಡ ದರ್ಶನ್ ನಟನೆಯ, ಪ್ರಕಾಶ್ ವೀರ್ ನಿರ್ದೇಶನದ ‘ಡೆವಿಲ್’ ಮೊದಲ ದಿನ ಸುಮಾರು ₹13 ಕೋಟಿ ಕಲೆಕ್ಷನ್ ಮಾಡಿದರೂ ನಂತರ ಗಳಿಕೆ ಇಳಿಕೆಯಾಯಿತು. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಹೀಗೆ ಮೂವರು ಸ್ಟಾರ್ ನಟರು ಇರುವ ‘45’ ಹಾಗೂ ಸುದೀಪ್ ನಟನೆಯ, ವಿಜಯ್ ಕಾರ್ತಿಕೇಯ ನಿರ್ದೇಶನದ ‘ಮಾರ್ಕ್’ ತೆರೆಕಂಡಿದ್ದು ಇದರ ಭವಿಷ್ಯ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಕಾಕತಾಳೀಯ ಎಂಬಂತೆ 2024ರಲ್ಲಿ ‘ಮ್ಯಾಕ್ಸ್’ ತೆರೆಕಂಡ ದಿನದಂದೇ (ಡಿ.25) ‘ಮಾರ್ಕ್’ ತೆರೆಕಾಣುತ್ತಿದೆ.
ಯಶ್, ರಕ್ಷಿತ್ ಶೆಟ್ಟಿ, ಗಣೇಶ್, ಧ್ರುವ ಸರ್ಜಾ, ಶ್ರೀಮುರಳಿ, ದುನಿಯಾ ವಿಜಯ್ ತೆರೆಯಿಂದ ದೂರವಿದ್ದ ಸ್ಟಾರ್‌ಗಳು.
ಚಂದನವನವು ಈ ವರ್ಷ ಅಭಿನೇತ್ರಿ ಬಿ.ಸರೋಜಾದೇವಿ, ನಟರಾದ ಎಂ.ಎಸ್.ಉಮೇಶ್, ಹರೀಶ್ ರಾಯ್, ರಾಜು ತಾಳಿಕೋಟೆ, ಯಶವಂತ ಸರದೇಶಪಾಂಡೆ, ಬ್ಯಾಂಕ್ ಜನಾರ್ದನ್, ರಾಕೇಶ್ ಪೂಜಾರಿ, ಗಡ್ಡಪ್ಪ, ಶ್ರೀಧರ್ ನಾಯಕ್, ಸರಿಗಮ ವಿಜಿ, ದಿನೇಶ್ ಮಂಗಳೂರು, ನಿರ್ದೇಶಕ, ನಟ ಎ.ಟಿ.ರಘು, ನಿರ್ದೇಶಕ ಎಸ್.ಉಮೇಶ್ ಇವರನ್ನು ಕಳೆದುಕೊಂಡಿತು.
ವಾಸ್ತವ ತೆರೆದಿಟ್ಟ ಸಿನಿಮಾಗಳು
ಭೀಮರಾವ್ ಪಿ. ನಿರ್ದೇಶನದ ‘ಹೆಬ್ಬುಲಿ ಕಟ್’ ಸಿನಿಮಾ ಸಮಾಜದಲ್ಲಿ ಇನ್ನೂ ಜೀವಂತವಿರುವ ಅಸ್ಪೃಶ್ಯತೆ, ಜಾತಿ ತಾರತಮ್ಯ, ದಬ್ಬಾಳಿಕೆಯ ಘಟನೆಗಳನ್ನು ಕಮರ್ಷಿಯಲ್ ಮಾದರಿಯಡಿ ಪ್ರೇಕ್ಷಕರಿಗೆ ಮುಟ್ಟಿಸಿತು. ಆಯುಷ್ ಮಲ್ಲಿ ನಿರ್ದೇಶನದ ‘ಪಪ್ಪಿ’ ಸಿನಿಮಾ ಹಳ್ಳಿಯ ಜನರ ಕಥೆಗಳನ್ನು ಮನರಂಜನಾತ್ಮಕವಾಗಿ, ಭಾವನಾತ್ಮಕವಾಗಿ ತೆರೆ ಮೇಲೆ ತಂದಿತು.
ಗಮನ ಸೆಳೆದವರು
‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’, ‘ಅನಾಮಧೇಯ ಅಶೋಕ ಕುಮಾರ್’ ‘ಭಾವ ತೀರ ಯಾನ’, ‘ಅಪಾಯವಿದೆ ಎಚ್ಚರಿಕೆ’, ‘ಎಲ್ಲೋ ಜೋಗಪ್ಪ ನಿನ್ನರಮನೆ’, ‘ಅಜ್ಞಾತವಾಸಿ’, ‘ನೋಡಿದವರು ಏನಂತಾರೆ?’, ‘ಪಾರು ಪಾರ್ವತಿ’
ಪ್ರಯೋಗಮುಖಿ ಸಿನಿಮಾ
ರವಿ ಬಸ್ರೂರು ಮತ್ತು ತಂಡದ ‘ವೀರ ಚಂದ್ರಹಾಸ’ ಹೊಸ ಪ್ರಯತ್ನವಾಗಿ ಕಂಡಿತು. ಯಕ್ಷಗಾನದ ಕಥೆಗೆ ಸಿನಿಮಾ ರೂಪ ನೀಡಿದ ರವಿ ಬಸ್ರೂರು ಪ್ರಯತ್ನಕ್ಕೆ ನಟ ಶಿವರಾಜ್‌ಕುಮಾರ್ ಕೂಡಾ ಸಾಥ್ ನೀಡಿದ್ದರು.
2025ರ ವಿವಾದಗಳು ಸುದ್ದಿಯಾದ ಘಟನೆಗಳು
*ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದಾಗ ಅದನ್ನು ಪಹಲ್ಗಾಮ್ ದಾಳಿಗೆ ತಳಕು ಹಾಕಿದ ಗಾಯಕ ಸೋನು ನಿಗಮ್ ಹೇಳಿಕೆ ಭಾರಿ ಚರ್ಚೆಗೆ ಒಳಗಾಯಿತು. ಸೋನು ನಿಗಮ್‌ಗೆ ಅಸಹಕಾರ ತೋರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿತು. ಸೋನು ನಿಗಮ್ ಕ್ಷಮೆ ಕೇಳಿದ ಬಳಿಕ ಇದು ತಣ್ಣಗಾಯಿತು.
*‘ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ’ ಎನ್ನುವ ನಟ ಕಮಲ್ ಹಾಸನ್ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಕ್ಷಮೆ ಕೇಳದ ಕಾರಣಕ್ಕೆ ಅವರ ‘ಥಗ್‌ಲೈಫ್’ ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾಗಲೇ ಇಲ್ಲ.
*ನಟ ರಣ್‌ವೀರ್ ಸಿಂಗ್ ‘ಕಾಂತಾರ’ ಸಿನಿಮಾದಲ್ಲಿನ ದೈವವನ್ನು ‘ದೆವ್ವ’ ಎಂದಿದ್ದು ಜೊತೆಗೆ ದೈವದ ಅನುಕರಣೆ ಮಾಡಿದ್ದೂ ವಿರೋಧ ಎದುರಿಸಿತು.
*ಜನವರಿಯಲ್ಲಿ ತೆರೆಕಂಡ ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ–2’ ಸಿನಿಮಾ ಮೂರೇ ದಿನಗಳಲ್ಲಿ ಪ್ರದರ್ಶನ ನಿಲ್ಲಿಸಿತ್ತು. ಮತ್ತಷ್ಟು ದೃಶ್ಯಗಳನ್ನು ಸೇರಿಸಿ ಜೂನ್‌ನಲ್ಲಿ ಸಿನಿಮಾವನ್ನು ಮರು ಬಿಡುಗಡೆಗೊಳಿಸಲಾಗಿತ್ತು.
2026ರ ನಿರೀಕ್ಷಿತ ಕನ್ನಡ ಸಿನಿಮಾಗಳು
*ಜ.23ಕ್ಕೆ ‘ಲ್ಯಾಂಡ್‌ಲಾರ್ಡ್’ *ಮಾರ್ಚ್ 19ಕ್ಕೆ ‘ಟಾಕ್ಸಿಕ್’.
*ಧ್ರುವ ಸರ್ಜಾ ನಟನೆಯ ‘KD’.
*ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’.
*ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷಾ’
*ಹೇಮಂತ್ ಎಂ.ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’
ಪರಭಾಷೆಗಳಲ್ಲಿ ಹಿಟ್ ಆದ ಚಿತ್ರಗಳು
ರಣ್‌ವೀರ್ ಸಿಂಗ್ ನಟನೆಯ ‘ಧುರಂದರ್’ ಈ ವರ್ಷ ಭಾರತದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ. ವಿಕ್ಕಿ ಕೌಶಲ್ ನಟನೆಯ ‘ಛಾವಾ’ ಹೊಸಬರ ‘ಸೈಯಾರಾ’ ರಜನಿಕಾಂತ್ ನಟನೆಯ ‘ಕೂಲಿ’ ಆ್ಯನಿಮೇಟೆಡ್ ಸಿನಿಮಾ ‘ಮಹಾವತಾರ್ ನರಸಿಂಹ’ ಕಲ್ಯಾಣಿ ಪ್ರಿಯದರ್ಶನ್ ನಟನೆಯ ‘ಲೋಖಾ: ಚಾಪ್ಟರ್ 1’ ಪರಭಾಷೆಗಳಲ್ಲಿ ಹಿಟ್ ಆದ ಸಿನಿಮಾಗಳು.
ಬಗೆಹರಿಯದ ಟಿಕೆಟ್ ದರ ನಿಗದಿ
ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು (ತೆರಿಗೆ ಬಿಟ್ಟು) ಗರಿಷ್ಠ ₹200ಕ್ಕೆ ನಿಗದಿಪಡಿಸಿ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಿಡುಗಡೆ ಹೊಸ್ತಿಲಲ್ಲೇ ಈ ಆದೇಶ ಹೊರಬಿದ್ದಿತ್ತು. ಇದನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಮತ್ತು ಪಿವಿಆರ್ ಐನಾಕ್ಸ್ ಲಿಮಿಟೆಡ್ ಕಂಪನಿ ಹೊಂಬಾಳೆ ಫಿಲ್ಮ್ಸ್ ಕೋರ್ಟ್ ಮೆಟ್ಟಲೇರಿತ್ತು. ರಾಜ್ಯ ಸರ್ಕಾರದ ಈ ಆದೇಶಕ್ಕೆ ಏಕಸದಸ್ಯ ನ್ಯಾಯಪೀಠ ಮಧ್ಯಂತರ ತಡೆ ನೀಡಿತು.
ಮರುಬಿಡುಗಡೆ ಸಂಭ್ರಮ
ಈ ವರ್ಷ ಪುನೀತ್ ರಾಜ್‌ಕುಮಾರ್ ನಟನೆಯ ‘ಅಪ್ಪು’ ಸೇರಿದಂತೆ ಆರು ಚಿತ್ರಗಳು ಮರುಬಿಡುಗಡೆ ಆದವು. ಈ ಪೈಕಿ ‘ಅಪ್ಪು’ ಕರ್ನಾಟಕದಾದ್ಯಂತ ನೂರಕ್ಕೂ ಅಧಿಕ ಏಕಪರದೆ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಮರು ಬಿಡುಗಡೆಯಾಗಿ ಒಳ್ಳೆಯ ಗಳಿಕೆಯನ್ನೂ ಮಾಡಿತು.
ಅಂಕಿತಾ ವಿಜಯ್ ಮುಡಿಗೆ ಗರಿ
ಚಂದನವನದ ಚಂದದ ಘಮಲನ್ನು ಪಸರಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿ ಜೂನ್ 27ರಂದು ನಡೆಯಿತು. ‘ಭೀಮ’ ಸಿನಿಮಾಗಾಗಿ ದುನಿಯಾ ವಿಜಯ್ ‘ಅತ್ಯುತ್ತಮ ನಟ’ ಹಾಗೂ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾಗಾಗಿ ಅಂಕಿತಾ ಅಮರ್ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದರು. ‘ಭೈರತಿ ರಣಗಲ್’ ಸಿನಿಮಾಗಾಗಿ ನರ್ತನ್ ‘ಅತ್ಯುತ್ತಮ ನಿರ್ದೇಶನ’ ಪ್ರಶಸ್ತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.