ADVERTISEMENT

‘100 ಕೋಟಿ’ಯ ಹಿಂದೆ ಚೇತನ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 7:53 IST
Last Updated 16 ಫೆಬ್ರುವರಿ 2021, 7:53 IST
100 ಕ್ರೋರ್‌ ಚಿತ್ರದ ಪೋಸ್ಟರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು.
100 ಕ್ರೋರ್‌ ಚಿತ್ರದ ಪೋಸ್ಟರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು.   

ಆ ದಿನಗಳು ಖ್ಯಾತಿಯ ಚೇತನ್‌ ಅವರು ‘100 ಕ್ರೋರ್ಸ್‌’ ಚಿತ್ರದಲ್ಲಿ ಭ್ರಷ್ಟ ಪೊಲೀಸ್‌ ಅಧಿಕಾರಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್‌ ಬಿಡುಗಡೆ ನಡೆದಿದೆ. ನಿರ್ದೇಶಕ ಸಿಂಪಲ್‌ ಸುನಿ ಪೋಸ್ಟರ್‌ ಬಿಡುಗಡೆ ಮಾಡಿದರು. ಟಾಲಿವುಡ್‌ ಸಂಗೀತ ನಿರ್ದೇಶಕ ಸಾಯಿ ಕಾರ್ತಿಕ್‌ ಅವರು ಈ ಚಿತ್ರದ ನಿರ್ಮಾಪಕರು. ಸಂಗೀತವೂ ಅವರದ್ದೇ.ನಾಗಂ ತಿರುಪತಿ ರೆಡ್ಡಿ, ಶ್ರೀಕಾಂತ್ ದೀಪಾಲ್ ಸಹ ನಿರ್ಮಾಪಕರು. ವಿರಾಟ್ ಚಕ್ರವರ್ತಿ ನಿರ್ದೇಶಕರು. ಎಸ್ಎಸ್ ಸ್ಟುಡಿಯೋಸ್ ಮತ್ತು ವಿಷನ್ ಸಿನಿಮಾಸ್ ಬ್ಯಾನರ್ ಅಡಿ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ.

ಸಾಯಿ ಕಾರ್ತಿಕ್‌ ಅವರು ತೆಲುಗಿನಲ್ಲಿ 75ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಇತ್ತೀಚೆಗೆ ಗಣೇಶ್‌ ಅಭಿನಯದ ‘ತ್ರಿಬಲ್‌ ರೈಡಿಂಗ್‌’ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಗಣೇಶ್ ನಟಿಸುತ್ತಿರುವ ತ್ರಿಬಲ್ ರೈಡಿಂಗ್ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ ಹಾಗೂ ಈ ಹಿಂದೆ ಕನ್ನಡದ ಕೆಲವು ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.

ನಟ ಚೇತನ್‌ ಪ್ರತಿಕ್ರಿಯಿಸಿ, ‘ದುಡ್ಡಿಗೋಸ್ಕರ ಏನು ಬೇಕಾದರೂ ಮಾಡುವ ಪಾತ್ರ ನನ್ನದು. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಏಕಕಾಲದಲ್ಲಿ ಎರಡೂ ಅವತರಣಿಕೆಯ ಶೂಟಿಂಗ್ ಮಾಡಿದ್ದೇವೆ. ಕನ್ನಡದ ಜತೆಗೆ ತೆಲುಗು ಕಲಾವಿದರೂ ಈ ಸಿನಿಮಾದಲ್ಲಿದ್ದಾರೆ. ಒಂದೊಳ್ಳೆ ಹೊಸ ಅನುಭವ. ಅಷ್ಟೇ ಸಾಹಸ ದೃಶ್ಯಗಳೂ ಸಿನಿಮಾದ ಹೈಲೈಟ್’ ಎಂದರು.
‘ಒಂದು ಐಟಂ ಹಾಡು ಮತ್ತೊಂದು ಥೀಮ್ ಹಾಡು ಚಿತ್ರದಲ್ಲಿ ಇರಲಿದೆ’ ಎಂದು ಸಾಯಿ ಕಾರ್ತಿಕ್‌ ಮಾಹಿತಿ ನೀಡಿದರು.

ADVERTISEMENT

ಕರ್ನಾಟಕದ ವಿವಿಧ ಸ್ಥಳಗಳು ಮತ್ತು ಹೈದರಾಬಾದ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಚೇತನ್ ಮತ್ತು ಹ್ಯಾಪಿಡೇಸ್ ಸಿನಿಮಾ ಖ್ಯಾತಿಯ ಟೈಸನ್ ರಾಹುಲ್ ಮುಖ್ಯಭೂಮಿಕೆಯಲ್ಲಿದ್ದಾರೆ. ಸಾಕ್ಷಿ ಚೌಧರಿ, ಎಮಿ ಎಲಿ ಮತ್ತು ಐಶ್ವರ್ಯಾ ರಾಜ್ ನಾಯಕಿಯರಾಗಿದ್ದಾರೆ. ಇನ್ನುಳಿದಂತೆ ಇಂತುರಿ ವಾಸು, ಶರತ್ ಲೋಹಿತಾಶ್ವ, ಶೇಕಿಂಗ್ ಶೇಷು, ಭದ್ರಂ, ಅನ್ನಪೂರ್ಣಮ್ಮ, ಸಮೀರ್ ಸೇರಿ ಹಲವರು ತಾರಾಗಣದಲ್ಲಿದ್ದಾರೆ ಎಂದರು ಕಾರ್ತಿಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.