ADVERTISEMENT

ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ ಗುಜರಾತಿ ಚಿತ್ರ ‘ಛೆಲ್ಲೊ ಶೋ’

Gujarati Film Chhello Show

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 16:09 IST
Last Updated 20 ಸೆಪ್ಟೆಂಬರ್ 2022, 16:09 IST
   

ನವದೆಹಲಿ (ಪಿಟಿಐ): ‘ಗುಜರಾತಿ ಚಲನಚಿತ್ರ ‘ಛೆಲ್ಲೊ ಶೋ’ 95ನೇ ಅಕಾಡೆಮಿ ಪ್ರಶಸ್ತಿಗೆ (2023ರ ಆಸ್ಕರ್‌ ಪ್ರಶಸ್ತಿ) ಅಧಿಕೃತ ಪ್ರವೇಶ ಪಡೆದಿರುವ ಭಾರತೀಯ ಚಲನಚಿತ್ರವಾಗಿದೆ’ ಎಂದು ಭಾರತೀಯ ಚಲನಚಿತ್ರ ಫೆಡರೇಷನ್‌ (ಎಫ್‌ಎಫ್‌ಐ) ಮಂಗಳವಾರ ತಿಳಿಸಿದೆ.

ಪಾನ್‌ ನಳಿನ್‌ ನಿರ್ದೇಶಿಸಿರುವ ಈ ಚಿತ್ರವು ಅಕ್ಟೋಬರ್‌ 14ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಮುಖ್ಯಪಾತ್ರಗಳಲ್ಲಿ ಭವಿನ್‌ ರಾಬರಿ, ಭವೇಶ್‌ ಶ್ರೀಮಲಿ, ರಿಚಾ ಮೀನಾ, ದಿಪೇನ್‌ ರಾವಲ್‌ ಮತ್ತು ಪರೇಶ್‌ ಮೆಹ್ತಾ ಅವರು ಕಾಣಿಸಿಕೊಂಡಿದ್ದಾರೆ.

ಗುಜರಾತ್‌ನ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ಕಳೆವ ವೇಳೆ ತಾವು ಚಲನಚಿತ್ರಗಳಿಗೆ ಮನಸೋಲುತ್ತಿದ್ದ ನೆನಪುಗಳನ್ನೇ ಸ್ಫೂರ್ತಿಯಾಗಿಸಿಕೊಂಡು ನಿರ್ದೇಶಕ ನಳಿನ್‌ ಅವರು ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ADVERTISEMENT

ಅಮೆರಿಕದಲ್ಲಿ ಪ್ರತಿವರ್ಷ ನಡೆಯುವ ಟ್ರಿಬೆಕಾ ಫಿಲ್ಮ್‌ ಫೆಸ್ಟಿವಲ್‌ನ ಕಳೆದ ವರ್ಷ ಜೂನ್‌ನ ಆವೃತ್ತಿಯಲ್ಲಿ ಈ ಚಿತ್ರವನ್ನು ಮೊದಲಬಾರಿಗೆ ಪ್ರದರ್ಶಿಸಲಾಗಿತ್ತು.ಸ್ಪೇನ್‌ನಲ್ಲಿ ನಡೆದ 66ನೇ ವಲ್ಲಾಡೋಲಿಡ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಈ ಚಿತ್ರ ಪ್ರದರ್ಶನಗೊಂಡು ‘ಗೋಲ್ಡನ್‌ ಸ್ಪೈಕ್‌’ ಪ್ರಶಸ್ತಿ ಪಡೆದಿತ್ತು. ಇದರ ಜೊತೆ, ಹಲವಾರು ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನ ಕಂಡು, ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಈ ಚಿತ್ರವನ್ನು ರಾಯ್‌ ಕಪೂರ್‌ ಫಿಲ್ಮ್ಸ್‌, ಜುಗಾಡ್‌ ಮೋಷನ್‌ ಪಿಕ್ಚರ್ಸ್‌, ಮಾನ್ಸೂನ್‌ ಫಿಲ್ಮ್ಸ್‌, ಛೆಲ್ಲೊ ಶೋ ಎಲ್‌ಎಲ್‌ಪಿ ಮತ್ತು ಮಾರ್ಕ್‌ ಡ್ಯುಯೇಲ್‌ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿವೆ.

ಛೆಲ್ಲೊ ಶೋ ಎಂದರೆ ‘ಕೊನೆಯ ಚಿತ್ರ ಪ್ರದರ್ಶನ’ ಎಂದರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.