ADVERTISEMENT

ಆಸ್ಕರ್‌ ಪ್ರವೇಶಿಸಿದ ‘ಚೆಲ್ಲೊ ಶೋ’ ಚಿತ್ರದ ಬಾಲ ನಟ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2022, 6:37 IST
Last Updated 11 ಅಕ್ಟೋಬರ್ 2022, 6:37 IST
ಚೆಲ್ಲೊ ಶೋ ಚಿತ್ರದ ಪೋಸ್ಟರ್‌
ಚೆಲ್ಲೊ ಶೋ ಚಿತ್ರದ ಪೋಸ್ಟರ್‌   

ಈ ವರ್ಷ ಆಸ್ಕರ್‌ಗೆ ಪ್ರವೇಶ ಪಡೆದ ಏಕೈಕ ಭಾರತೀಯ ಚಿತ್ರ ‘ಲಾಸ್ಟ್‌ ಫಿಲಂ ಶೋ’(ಚೆಲ್ಲೊ ಶೋ)ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಬಾಲ ನಟ ರಾಹುಲ್‌ ಕೊಲಿ(10) ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾನೆ. ರಾಹುಲ್‌ ಲುಕೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದ.

ರಾಹುಲ್‌ ಕುಟುಂಬ ಮೃತ ಬಾಲಕನಿಗೆ ಸ್ವಗ್ರಾಮ ಜಾಮ್‌ನಗರದ ಬಳಿಯ ಹಪದಲ್ಲಿ ಅಂತಿಮ ನಮನ ಸಲ್ಲಿಸಿದೆ. ‌ ರಾಹುಲ್‌ ತಂದೆ ರಾಮು ಆಟೊರಿಕ್ಷಾ ಚಾಲಕರು. ಮಗನ ಜೊತೆ ಸಿನಿಮಾ ನೋಡಲು ಕಾತುರರಾಗಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು.

‘ಅ.14ರ ಚಿತ್ರ ಬಿಡುಗಡೆ ನಂತರ ನಮ್ಮ ಬದುಕು ಬದಲಾಗಲಿದೆ ಎಂದು ಆತ ಖುಷಿಯಿಂದ ಹೇಳುತ್ತಿದ್ದ. ಅದಕ್ಕೂ ಮೊದಲೇ ಆತ ನಮ್ಮನ್ನು ಬಿಟ್ಟುಹೋಗಿದ್ದಾನೆ’ ಎಂದು ರಾಮು ಮಾಧ್ಯಮಗಳ ಎದುರು ದುಃಖ ತೋಡಿಕೊಂಡಿದ್ದಾರೆ.

ADVERTISEMENT

ಆಸ್ಕರ್‌ 2023ಕ್ಕೆ ಅಧಿಕೃತ ಪ್ರವೇಶ ಪಡೆದ ಚಿತ್ರ ಗುರುವಾರ ತೆರೆಗೆ ಬರಲಿದೆ. ನಿರ್ದೇಶಕ ನಳಿನ್‌ ಪ್ಯಾನ್‌ ಮತ್ತು ಚಿತ್ರತಂಡ ಬಾಲಕನ ಅಂತಿಮ ದಿನಗಳಲ್ಲಿ ಆಸ್ಪತ್ರೆಯಲ್ಲಿ ಆತನ ಜೊತೆಗಿತ್ತು. ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿನಿಮಾದಲ್ಲಿ ಈತ ಮನು ಎಂಬ ಪಾತ್ರ ಮಾಡಿದ್ದ. ಈತ ಚಿತ್ರದ ನಾಯಕ ಸಮಯ್‌ನ ಸ್ನೇಹಿತನಾಗಿದ್ದ ಎಂದು ನಿರ್ದೇಶಕರು ಹೇಳಿದ್ದಾರೆ.

ಸಿನಿಮಾ ಕುರಿತು ಪ್ರೀತಿ ಹೊಂದಿರುವ ಹಳ್ಳಿ ಹುಡುಗನ ಕಥೆಯಿದು. 9 ವರ್ಷದ ಗುಜರಾತ್‌ನ ಗ್ರಾಮೀಣ ಭಾಗದ ಬಾಲಕನ ಕಥೆಯನ್ನು ಚಿತ್ರ ಹೇಳುತ್ತದೆ. ರಾಯ್‌ ಕಪೂರ್‌ ಫಿಲಂಸ್‌ ಚಿತ್ರದ ನಿರ್ಮಾಪಕರು. ವಿದೇಶದ ಆಯ್ದ ಚಿತ್ರಮಂದಿರಗಳಲ್ಲಿಯೂ ಚಿತ್ರ ಬಿಡುಗಡೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.