ಮಧುಗಿರಿ: ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ (39) ತೀವ್ರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಭಾನುವಾರ ನಿಧನರಾದರು.
ಚಲನಚಿತ್ರ ನಟ ದಿ.ಶಕ್ತಿಪ್ರಸಾದ್ ಮತ್ತು ಲಕ್ಷ್ಮೀದೇವಮ್ಮ ಅವರ ಮಗಳು ಅಮ್ಮಾಜಿ ಹಾಗೂ ವಿಜಯಕುಮಾರ್ ಹಿರಿಯ ಪುತ್ರ ಚಿರಂಜೀವಿ ಸರ್ಜಾ. 22 ಕ್ಕೂ ಹೆಚ್ಚು ಚಲನಚಿತ್ರ ಅಭಿನಯ ಮಾಡಿದ್ದರು.ಕನ್ನಡದ ಖ್ಯಾತ ನಟರಾಗಿರುವ ಚಿರಂಜೀವಿ ಸರ್ಜಾ ವಾಯುಪುತ್ರ,ವರದನಾಯಕ, ಕೆಂಪೇಗೌಡ, ಚಂದ್ರಲೇಖ, ಅಜಿತ್, ರುದ್ರತಾಂಡವ,ಗಂಡೆದೆ, ಚಿರು, ದಂಡಂ ದಶಗುಣಂ, ಆಟಗಾರ, ರಾಮಲೀಲಾ, ಭರ್ಜರಿ, ಅಮ್ಮ ಐ ಲವ್ ಯು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್ ಅವರ ಜೊತೆ 2 ವರ್ಷದ ಹಿಂದೆ ಮದುವೆಯಾಗಿತ್ತು.
ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಜಕ್ಕೇನಹಳ್ಳಿಯಲ್ಲಿ ನಟ ದಿ.ಶಕ್ತಿ ಪ್ರಸಾದ್ ಅವರ ತೋಟ, ಮನೆ ಹಾಗೂ ಮುಖ್ಯವಾಗಿ ಅಹೋಬಲ ಲಕ್ಷ್ಮೀನರಸಿಂಹ ಸ್ಚಾಮಿ ದೇವಾಲಯ ನಿರ್ಮಿಸಿದ್ದ ಹೆಗ್ಗಳಿಕೆ ಇವರ ಕುಟುಂಬಕ್ಕೆ ಸೇರುತ್ತದೆ. ಪ್ರತಿ ವರ್ಷ ಗ್ರಾಮದಲ್ಲಿ ನಡೆಯುವಅಹೋಬಲ ಲಕ್ಷ್ಮೀನರಸಿಂಹ ಸ್ಚಾಮಿಯ ಬ್ರಹ್ಮರಥೋತ್ಸವಕ್ಕೆ ತಪ್ಪದೇ ದಿ.ಶಕ್ತಿ ಪ್ರಸಾದ್ ಕುಟುಂಬದವರು ಭಾಗಿಯಾಗಿ ದೇವರಿಗೆ ಆರತಿ ಸೇವೆ ಮಾಡುತ್ತಿದ್ದರು.
ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನಿಂದ ಹೊರಟು ಜಕ್ಕೇನಹಳ್ಳಿಯ ತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.
ತಾಲ್ಲೂಕಿನ ಜಕ್ಕೇನಹಳ್ಳಿಯ ತೋಟದಲ್ಲಿ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ಮಾಡಲಾಗುತ್ತಿದೆ. ಕೋವಿಡ್ 19 ಇರುವುದರಿಂದ ಚಿರಂಜೀವಿ ಸರ್ಜಾಅವರ ಕುಟುಂಬ, ಚಲನ ಚಿತ್ರ ನಟ - ನಟಿಯರು,ಅಭಿಮಾನಿಗಳು ಹಾಗೂ ಗ್ರಾಮಸ್ತರಿಗೆ ಅಂತ್ಯಕ್ರಿಯೆ ಅವಕಾಶ ಮಾಡಿಕೊಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.