
ಪೃಥ್ವಿ ಅಂಬರ್, ಧನ್ಯಾ ರಾಮ್‌ಕುಮಾರ್ ಜೋಡಿಯಾಗಿ ನಟಿಸಿರುವ ‘ಚೌಕಿದಾರ್’ ಚಿತ್ರ ಇಂದು (ಜ.30) ತೆರೆ ಕಾಣುತ್ತಿದೆ. ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಸಿನಿಪಯಣ ಕುರಿತು ಧನ್ಯಾ ಮಾತನಾಡಿದ್ದಾರೆ.
ಇದೊಂದು ಮಹಿಳಾ ಪ್ರಧಾನ ಕಥೆಯೇ?
ಇಲ್ಲ, ಒಟ್ಟಾರೆ ಕೌಟುಂಬಿಕ, ಮನರಂಜನೆ ಹೊಂದಿರುವ ಕಥೆ. ಪ್ರೀತಿ ಸೇರಿದಂತೆ ಹಲವು ಅಂಶಗಳಿವೆ. ಇಲ್ಲಿ ‘ಚೌಕಿದಾರ್’ ಎಂದರೆ ರಕ್ಷಕ. ದೇವರು ಎಂಬ ಅರ್ಥದಲ್ಲಿ ಬಳಸಲಾಗಿದೆ. ಈ ಸಿನಿಮಾದಲ್ಲಿ ಸಾಯಿಕುಮಾರ್ ಚೌಕಿದಾರ್ ಆಗಿ ನಿಂತಿರುತ್ತಾರೆ. ಅವರು ಕುಟುಂಬದ ರಕ್ಷಕನಾಗಿರುತ್ತಾರೆ.
ನಿಮ್ಮ ಸಿನಿಪಯಣ ಹೇಗಿದೆ?
ಇದು ನನ್ನ ಆರನೇ ಸಿನಿಮಾ. ಒಳ್ಳೊಳ್ಳೆ ಪಾತ್ರಗಳು ಸಿಗುತ್ತಿವೆ. ಆ ಖುಷಿಯಿದೆ. ಇನ್ನೂ ಸ್ವಲ್ಪ ವಿಭಿನ್ನವಾದ ಪಾತ್ರಗಳನ್ನು ಎದುರು ನೋಡುತ್ತಿರುವೆ. ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುವ ಇರಾದೆಯಿದೆ. ನಿರ್ದೇಶಕರು ನನ್ನತ್ತಲೂ ತಿರುಗಿ ನೋಡಲಿ ಎಂದು ಕಾಯುತ್ತಿರುವೆ.
ನೀವು ಅಂದುಕೊಂಡ ಮಟ್ಟಿಗೆ ಯಶಸ್ಸು ಸಿಕ್ಕಿಲ್ಲವೇ?
ಒಂದಷ್ಟು ಸಿನಿಮಾಗಳು ಚೆನ್ನಾಗಿ ಓಡಿವೆ. ಎಲ್ಲಿಗೇ ಹೋದರೂ ನನ್ನನ್ನು ಗುರುತಿಸುವವರು ಇದ್ದೇ ಇರುತ್ತಾರೆ. ನನಗೆ ಯಶಸ್ಸು ಅಂತಿಮ ಗುರಿಯಲ್ಲ. ನನಗೆ ತೃಪ್ತಿ ಸಿಗಬೇಕು. ಮನಸ್ಸಿಗೆ ಖುಷಿ ನೀಡುವ ಪಾತ್ರಗಳನ್ನು ಮಾಡುತ್ತೇನೆ.
ಮುಂದಿನ ಯೋಚನೆ, ಯೋಜನೆಗಳು...
ತಕ್ಷಣಕ್ಕೆ ಯಾವುದೂ ಮನಸಿನಲ್ಲಿ ಇಲ್ಲ. ಈ ಸಿನಿಮಾ ಬಿಡುಗಡೆಯ ನಂತರ ನೋಡಬೇಕು. ಮತ್ತೊಂದು ಸಿನಿಮಾ ಮಾತುಕತೆಯಲ್ಲಿದೆ. ಶೀಘ್ರದಲ್ಲಿಯೇ ಅಧಿಕೃತವಾಗಿ ಘೋಷಣೆಯಾಗಲಿದೆ. ಆ ಬಳಿಕ ಮಾತನಾಡುವೆ.
ಇಲ್ಲಿ ನಿಮಗೆ ಸವಾಲು ಎನ್ನಿಸುತ್ತಿರುವ ಸಂಗತಿಗಳು...
ಸವಾಲು ಎನ್ನುವಂಥದ್ದೇನಿಲ್ಲ. ಆದರೆ ಇಲ್ಲಿ ಕೆಲವು ಸಿನಿಮಾವನ್ನು ಜನ ನೋಡುತ್ತಾರೆ. ಇನ್ನು ಕೆಲವನ್ನು ನೋಡುವುದಿಲ್ಲ. ಪ್ರತಿ ಶುಕ್ರವಾರ ಒಂದು ಸಿನಿಮಾ ನೋಡುವ ಸಂಸ್ಕೃತಿ ನಮ್ಮಲ್ಲಿ ಬೆಳೆಯಬೇಕು. ವಾರಕ್ಕೊಮ್ಮೆ ಔಟಿಂಗ್‌ನಂತೆ ಸಿನಿಮಾ ನೋಡುವ ಹವ್ಯಾಸ ಬೆಳೆದರೆ ಚಿತ್ರೋದ್ಯಮ ಬೆಳೆಯುತ್ತದೆ. ಒಳ್ಳೆಯ ಸಿನಿಮಾಗಳನ್ನು ಜನ ಚಿತ್ರಮಂದಿರಗಳಿಗಿಂತ ಹೆಚ್ಚಾಗಿ ಒಟಿಟಿಯಲ್ಲಿ ನೋಡುತ್ತಾರೆ. ಅಂಥ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿಯೇ ನೋಡಿದರೆ ನಿರ್ಮಾಪಕರು ಬದುಕುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.