
ಈ ಚಿತ್ರದ ಹೆಸರು ‘A+’. ಹೆಸರು ಕೇಳಿದ ತಕ್ಷಣ, ಉಪೇಂದ್ರ ಅಭಿನಯದ ‘A‘ ಚಿತ್ರದ ನೆನಪಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ, ಎರಡೂ ಚಿತ್ರಗಳ ಹೆಸರಿನಲ್ಲಿ ಸಾಮ್ಯ ಇರುವ ಕಾರಣ, ಉಪ್ಪಿ ಅಭಿನಯದ ಚಿತ್ರದ ನೆನಪಾಗುವುದು ಸಹಜ. ಅಂದಹಾಗೆ, ‘A+’ ಚಿತ್ರ ಮಾಡುವ ಆಲೋಚನೆ ನಿರ್ದೇಶಕ ವಿಜಯ್ ಸೂರ್ಯ ಅವರಿಗೆ ಬಂದಿದ್ದು ಉಪ್ಪಿ ಅಭಿನಯದ ‘A’ ಸಿನಿಮಾ ವೀಕ್ಷಿಸಿದ ನಂತರ.
ಚಿತ್ರದ ಟೀಸರ್ ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ನೀಡಲು ತಂಡ ಸುದ್ದಿಗೋಷ್ಠಿ ಕರೆದಿತ್ತು. ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರಚಾರ ಕಾರ್ಯ ಆರಂಭವಾಗಿದೆ. ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.
ವಿಜಯ್ ಸೂರ್ಯ ಅವರು ಚಿತ್ರದ ನಾಯಕಿ ಸಂಗೀತಾ ಅವರನ್ನು ಕಂಡುಕೊಂಡಿದ್ದು ಫೇಸ್‌ಬುಕ್ ಮೂಲಕ. ಈ ಚಿತ್ರಕ್ಕೆ ‘A+’ ಎನ್ನುವ ಹೆಸರಿಡುವ ಆಲೋಚನೆ ನಿರ್ದೇಶಕರಲ್ಲಿ ಮೊದಲು ಇರಲಿಲ್ಲ. ಅವರಿಗೆ ‘A1’ ಎನ್ನುವ ಹೆಸರಿಡುವ ಆಲೋಚನೆ ಇತ್ತು. ಆದರೆ, ಆ ಹೆಸರು ಅದಾಗಲೇ ನೋಂದಣಿ ಆಗಿತ್ತು. ಹಾಗಾಗಿ ‘A+’ ಎಂಬ ಶೀರ್ಷಿಕೆ ಈ ಸಿನಿಮಾಕ್ಕೆ ಅಂಟಿಕೊಂಡಿತು.
ಸಿನಿಮಾ ಕಥೆ ಸಿದ್ಧಪಡಿಸಿದ ನಂತರ ವಿಜಯ್ ಸೂರ್ಯ ಅವರು ಇದನ್ನು ಕೆಲವು ಸ್ನೇಹಿತರ ಬಳಿ ಹೇಳಿಕೊಂಡಿದ್ದರು. ಕಥೆಯಲ್ಲಿ ಕೆಲವು ಬದಲಾವಣೆ ತರುವಂತೆ ಉಪೇಂದ್ರ ಅವರು ಸೂಚಿಸಿದರು. ‘ಏನೇ ಅಡೆತಡೆಗಳು ಎದುರಾದರೂ ಮನುಷ್ಯ ಸೋಲಬಾರದು’ ಎನ್ನುವುದು ಸಿನಿಮಾದಲ್ಲಿನ ಕಥೆ. ಹಾಗೆಯೇ, ‘ವ್ಯಕ್ತಿ ಸಾಧನೆ ಮಾಡಿದಾಗ, ಅದಕ್ಕೆ ಅಕ್ಕಪಕ್ಕದವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕೂಡ ಕಥೆಯ ಭಾಗ’ ಎಂದು ವಿಜಯ್ ಸೂರ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತಿಗೆ ನಿಂತ ಅನಿಲ್, ಹಿಂದಿನ ದಿನಗಳನ್ನು ಒಮ್ಮೆ ನೆನಪಿಸಿಕೊಂಡರು. ‘ನಾನು ಸಿನಿಮಾಗಳಲ್ಲಿ ಖಳನಟನಾಗಿ ಅಭಿನಯಿಸಬೇಕು ಎಂಬ ಆಸೆ ಇದ್ದವ. ಆದರೆ, ವಿಜಯ್ ಸೂರ್ಯ ನನ್ನನ್ನು ನಾಯಕನನ್ನಾಗಿ ಮಾಡಿದ್ದಾರೆ’ ಎಂದರು. ಅನಿಲ್ ಹೇಳುವ ಪ್ರಕಾರ ಇದರಲ್ಲಿ ಇರುವುದು ಒಂದು ಪ್ರೇಮಕಥೆ. ‘ಪ್ರತಿ ವ್ಯಕ್ತಿಯೂ ಒಂದು ಗುರಿ ಹೊಂದಿರುತ್ತಾನೆ. ವ್ಯಕ್ತಿಯೊಬ್ಬ ತನ್ನ ಗುರಿಯನ್ನು ಹೇಗೆ ಸಾಧಿಸುತ್ತಾನೆ ಎಂಬುದು ಚಿತ್ರದ ಸಾರ’ ಎಂದರು ಅನಿಲ್.
‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ‘ಸತಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಂಗೀತಾ ಈ ಚಿತ್ರದ ನಾಯಕಿ. ಅವರಿಗೆ ಇದು ಮೊದಲ ಸಿನಿಮಾ ಕೂಡ ಹೌದು. ‘ನನ್ನದು ಇದರಲ್ಲಿ ಪ್ರಬುದ್ಧ ಯುವತಿಯ ಪಾತ್ರ. ಧಾರಾವಾಹಿಯಲ್ಲಿ ನಟಿಸುವುದು, ಸಿನಿಮಾದಲ್ಲಿ ನಟಿಸುವುದು ನನ್ನ ಪಾಲಿಗೆ ವಿಭಿನ್ನ ಅನುಭವಗಳು’ ಎಂದರು ಸಂಗೀತಾ. ಸಿನಿಮಾದ ಬಹುತೇಕ ಭಾಗಗಳ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಗಣೇಶ್ ನಾರಾಯಣ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.