ADVERTISEMENT

‘ಮಜ್ಜಿಗೆ ಹುಳಿ’ ಅಸ್ತವ್ಯಸ್ತ ಪ್ರಸ್ತ ಪುರಾಣ

ಕೆ.ಎಚ್.ಓಬಳೇಶ್
Published 9 ಜೂನ್ 2019, 5:17 IST
Last Updated 9 ಜೂನ್ 2019, 5:17 IST
‘ಮಜ್ಜಿಗೆ ಹುಳಿ’ ಚಿತ್ರದಲ್ಲಿ ರೂಪಿಕಾ ಮತ್ತು ದೀಕ್ಷಿತ್‌ ವೆಂಕಟೇಶ್‌
‘ಮಜ್ಜಿಗೆ ಹುಳಿ’ ಚಿತ್ರದಲ್ಲಿ ರೂಪಿಕಾ ಮತ್ತು ದೀಕ್ಷಿತ್‌ ವೆಂಕಟೇಶ್‌   

ಚಿತ್ರ: ಮಜ್ಜಿಗೆ ಹುಳಿ
ನಿರ್ಮಾಣ: ಎಸ್‌. ರಾಮಚಂದ್ರ
ನಿರ್ದೇಶನ: ರವೀಂದ್ರ ಕೊಟಕಿ
ತಾರಾಗಣ: ದೀಕ್ಷಿತ್‌ ವೆಂಕಟೇಶ್‌, ರೂ‍ಪಿಕಾ, ಸುಚೇಂದ್ರಪ್ರಸಾದ್‌, ರಮೇಶ್‌ ಭಟ್‌, ತರಂಗ ವಿಶ್ವ, ಕೆಂಪೇಗೌಡ

ಗೋವಾದ ವೈಭವೊಪೇತ ಹೋಟೆಲ್‌ ಕೊಠಡಿ. ಅಂದು ನಾಯಕನ ಮೊದಲ ರಾತ್ರಿ. ಹೆಂಡತಿಯ ಬರುವಿಕೆಗಾಗಿ ಅವನ ಕಾತರ. ಅದೇ ವೇಳೆಗೆ ಕೊಠಡಿಗೆ ಅಪರಿಚಿತರಿಬ್ಬರ ಪ್ರವೇಶವಾಗುತ್ತದೆ. ಬಳಿಕ ಮತ್ತೊಬ್ಬನ ಪ್ರವೇಶ. ಎಲ್ಲರನ್ನೂ ಹರಸಾಹಸಪಟ್ಟು ಸಾಗಹಾಕುತ್ತಾನೆ.

ಕೈಯಲ್ಲಿ ಹಾಲು ಹಿಡಿದು ಮನದನ್ನೆ ಮೆಲ್ಲನೆ ಒಳಗೆ ಬರುತ್ತಾಳೆ. ನಾಯಕನ ಹಲವು ನಿರೀಕ್ಷೆಗಳ ರಾತ್ರಿ ಜೀವ ತಳೆಯುವ ವೇಳೆಗೆ ಹಲವು ಮಂದಿ ಕೊಠಡಿಯೊಳಗೆ ಬರುತ್ತಾರೆ. ಅವರನ್ನು ಹೊರಗೆ ಕಳುಹಿಸಲು ಪ್ರತಿ ಬಾರಿಯೂ ನಾಯಕ ಸುಸ್ತಾಗುತ್ತಾನೆ ಎಂದರೆ ತೆರೆಯ ಮೇಲೆ ಪದೇ ಪದೇ ಇದನ್ನೇ ತೋರಿಸಿದರೆ ನೋಡುಗರ ಪಾಡೇನು?

ADVERTISEMENT

ಮೊದಲ ರಾತ್ರಿಯೇ ಕಾಮಿಡಿ ವಸ್ತು ಎನ್ನುವ ಹಳೆಯ ಸೂತ್ರಕ್ಕೆ ಜೋತುಬಿದ್ದು ‘ಮಜ್ಜಿಗೆ ಹುಳಿ’ ಚಿತ್ರದಲ್ಲಿ ಬದುಕಿನ ಪಾಠ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರವೀಂದ್ರ ಕೊಟಕಿ. ಆದರೆ, ಅವರ ಸ್ಥಿತಿಯು ಹೂರಣಕ್ಕೆ ಉಪ್ಪು ಹಾಕಿ ಸಾಂಬರಿಗೆ ಒಗ್ಗರಣೆ ಹಾಕಲು ಹೊರಟಂತಾಗಿದೆ.

ಕಾರ್ತಿಕ್‌ ಸಾಫ್ಟ್‌ವೇರ್‌ ಕಂಪನಿಯ ಉದ್ಯೋಗಿ. ವೈಶಾಲಿ ಜೊತೆಗೆ ಸ‍ಪ್ತಪದಿ ತುಳಿಯುತ್ತಾನೆ. ಆತ ಸಂಪ್ರದಾಯವಾದಿ. ಆಕೆಯದು ಇದಕ್ಕೆ ತದ್ವಿರುದ್ಧ ಮನಸ್ಥಿತಿ. ಕಿಡಿಗೇಡಿಗಳು ಹೋಟೆಲ್‌ನಲ್ಲಿ ಅಳವಡಿಸುವ ರಹಸ್ಯ ಕ್ಯಾಮೆರಾಗಳಿಂದ ನವದಂಪತಿ ಅನುಭವಿಸುವ ಸಂಕಷ್ಟವೇ ಈ ಚಿತ್ರದ ತಿರುಳು.

ತೆರೆಯ ಮೇಲೆ ಕಾರ್ತಿಕ್‌ ಮತ್ತು ವೈಶಾಲಿಯ ಪ್ರಣಯ ಚೇಷ್ಟೆಗಳು ಬೇಸರ ಮೂಡಿಸುತ್ತವೆ. ಮೊದಲ ರಾತ್ರಿಯಲ್ಲಿ ಅಂತ್ಯಾಕ್ಷರಿ ಹಾಡಿಸುತ್ತಾರೆ ನಿರ್ದೇಶಕರು. ಅವರ ಈ ಹೊಸ ಅನ್ವೇಷಣೆ ಅಷ್ಟಕ್ಕೇ ಕೊನೆಯಾಗುವುದಿಲ್ಲ. ನಾಯಕನ ಸೊಂಟ ಉಳುಕಿಸಿ ನಾಯಕಿಯನ್ನು ಪರಪುರುಷನೊಟ್ಟಿಗೆ ಅದೇ ಕೊಠಡಿಯಲ್ಲಿ ಇಸ್ಪೀಟ್‌ ಆಡಿಸಲು ಕಳುಹಿಸುತ್ತಾರೆ. ನಿರ್ದೇಶಕನ ಅವಶ್ಯಕತೆಗೆ ತಕ್ಕಂತೆ ಕೆಲವು ಪಾತ್ರಗಳು ಪೆದ್ದು ಪೆದ್ದಾಗಿ ವರ್ತಿಸುವುದು ಚೋದ್ಯ.

ಬಿಗಿಯಾದ ನಿರೂಪಣೆ, ಗಟ್ಟಿಯಾದ ಹಿನ್ನೆಲೆ ಸಂಗೀತ ಇಲ್ಲ. ಹಾಗಾಗಿ, ಈ ಕಾಮಿಡಿ ಕಥೆ ಸಪ್ಪೆಯಾಗಿದೆ. ಕೆಲವೆಡೆ ಸಂಭಾಷಣೆ, ಚಿತ್ರಕಥೆಯ ನಿರೂಪಣಾ ಶೈಲಿ ಧಾರಾವಾಹಿಯ ಜಾಡು ಹಿಡಿಯುತ್ತದೆ. ಅಲ್ಲಲ್ಲಿ ನಗು ಉಕ್ಕಿಸುವ ಕೆಲವು ದೃಶ್ಯಗಳಿವೆ. ಆದರೆ, ಅವು ಪ್ರೇಕ್ಷಕರ ಮನಸ್ಸಿನಾಳಕ್ಕೆ ಇಳಿಯದೆ ಸೋಲುತ್ತವೆ.

ನಾಯಕನ ತಾತ ರಸಿಕ ಶಿರೋಮಣಿ. ಮಧ್ಯರಾತ್ರಿ ಮೊಮ್ಮಗನ ಕೋಣೆ ಪ್ರವೇಶಿಸುವ ಆತ ತನ್ನ ಹಳೆಯ ಅನೈತಿಕ ಪ್ರಣಯ ಪ್ರಸಂಗಗಳನ್ನು ರಸವತ್ತಾಗಿ ವರ್ಣಿಸುತ್ತಾನೆ. ಕೊನೆಗೆ, ದಾಂಪತ್ಯದ ಮೌಲ್ಯದ ಬಗ್ಗೆ ನವದಂಪತಿಗೆ ತಿಳಿಹೇಳುವುದು ದೊಡ್ಡ ಪ್ರಹಸನ. ಇದು ನಿರ್ದೇಶಕರ ಅಭಿರುಚಿಯ ಬಗ್ಗೆ ನೋಡುಗರಲ್ಲಿ ಅಸಹ್ಯ ಮೂಡಿಸುತ್ತದೆ.

ದೀಕ್ಷಿತ್‌ ವೆಂಕಟೇಶ್‌ ನಟನೆಯಲ್ಲಿ ಸಾಕಷ್ಟು ಪಳಗಬೇಕಿದೆ. ರೂಪಿಕಾ ಕೂಡ ನಟನೆಯಲ್ಲಿ ಹೊಸ ಭರವಸೆ ಹುಟ್ಟಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.