
ಹನುಮಂತ, ಸಿಜೆ ರಾಯ್
ಚಿತ್ರ: ಇನ್‌ಸ್ಟಾಗ್ರಾಂ
ಬೆಂಗಳೂರು: ನಿನ್ನೆ (ಜ.30) ರಿಯಲ್ ಎಸ್ಟೇಟ್ ಕಂಪನಿಯಾದ 'ಕಾನ್ಫಿಡೆಂಟ್ ಗ್ರೂಪ್' ಮುಖ್ಯಸ್ಥ ಸಿ.ಜೆ.ರಾಯ್ (57) ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ರಾಯ್ ನಿಧನದ ಬೆನ್ನಲ್ಲೆ ಬಿಗ್‌ಬಾಸ್ ಸೀಸನ್ 11ರ ವಿಜೇತ ಹನುಮಂತ ಅವರು ಭಾವುಕರಾಗಿದ್ದಾರೆ.
ರಾಯ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಹನುಮಂತ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ‘ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು, ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯನೇ ಇಲ್ಲ ಸರ್’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಹನುಮಂತ ಪೋಸ್ಟ್
ಹನುಮಂತ ಪೋಸ್ಟ್‌ನಲ್ಲಿ ಏನಿದೆ?
‘ತುಂಬಾ ದುಃಖಕರ ಸಂಗತಿ. ಅಂದು ಸರಿಗಮಪ ಸೀಸನ್ 15ರಲ್ಲಿ ನಾನು ರನ್ನರ್ ಅಪ್ ಆಗಿದ್ದಾಗ ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು. ಅಲ್ಲಿಂದ ಹಿಡಿದು ಬಿಗ್‌ಬಾಸ್ ಸೀಸನ್ 11ರಲ್ಲೂ ಕೂಡ ವಿಜೇತನಾಗಿದ್ದಾಗ ನನಗೆ ಪ್ರೀತಿಯಿಂದ ಹಣವನ್ನು ಕೊಡುವುದರ ಮೂಲಕ ಗೆಲುವನ್ನು ಸಂಭ್ರಮಿಸಿದವರು ನೀವು. ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ ಸರ್. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್’ ಎಂದು ಬರೆದುಕೊಂಡಿದ್ದಾರೆ.
ಸಿ.ಜೆ. ರಾಯ್ ಅವರು ಸರಿಗಮಪ ಸೀಸನ್ 15ರಲ್ಲಿ ಹನುಮಂತು ರನ್ನರ್ ಅಪ್ ಆಗಿದ್ದಾಗ ಬಹುಮಾನದ ರೂಪದಲ್ಲಿ ಹಣ ನೀಡಿದ್ದರು. ಬಳಿಕ ಬಿಗ್‌ಬಾಸ್ ಸೀಸನ್ 11ರಲ್ಲಿಯೂ ಹನುಮಂತ ಗೆದ್ದಾಗ ಅವರೇ ಖುದ್ದು ಹಣವನ್ನು ನೀಡಿದ್ದರು. ಈ ಬಗ್ಗೆ ಹನುಮಂತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕೇರಳದ ರಾಯ್ ಅವರು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್, ರೆಸಾರ್ಟ್, ಹೋಟೆಲ್, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು. ಕೇರಳದಲ್ಲೂ ಹಲವು ಉದ್ಯಮಗಳನ್ನು ನಡೆಸುತ್ತಿದ್ದರು. 'ಕಾನ್ಫಿಡೆಂಟ್ ಗ್ರೂಪ್' ಕಚೇರಿ ಸೇರಿದಂತೆ ರಾಯ್ ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಪರಿಶೀಲನೆ ನಡೆಸಿದ್ದರು. ಶುಕ್ರವಾರ ಬೆಳಿಗ್ಗೆಯಿಂದಲೂ ಅವರ ಕಚೇರಿಯಲ್ಲಿ ದಾಖಲೆಗಳ ಪರಿಶೀಲನಾ ಕಾರ್ಯದಲ್ಲಿ ಕೇರಳದ ಐ.ಟಿ ಅಧಿಕಾರಿಗಳು ತೊಡಗಿದ್ದರು. ಆದಾಯ ತೆರಿಗೆ ಇಲಾಖೆಯ (ಐಟಿ) ಅಧಿಕಾರಿಗಳು ಕಚೇರಿಯಲ್ಲಿ ಇರುವ ಸಂದರ್ಭದಲ್ಲಿಯೇ ಶುಕ್ರವಾರ ಮಧ್ಯಾಹ್ನ 3.15ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.