ADVERTISEMENT

ಮಮತೆಯ ತಾಯಿಗೆ ‘ಎ’ ಕ್ಲಾಸ್ ಮಗ!

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 16:33 IST
Last Updated 1 ನವೆಂಬರ್ 2018, 16:33 IST
ಆಶಿಕಾ ರಂಗನಾಥ್, ಅಜಯ್ ರಾವ್‌
ಆಶಿಕಾ ರಂಗನಾಥ್, ಅಜಯ್ ರಾವ್‌   

‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣ ಪತ್ರ ಕೊಟ್ಟಿದೆ. ಇದನ್ನು ರಿಯಲ್ ಸ್ಟಾರ್ ಉಪೇಂದ್ರ ವ್ಯಾಖ್ಯಾನಿಸಿದ್ದು ಹೀಗೆ; ‘ಈ ಚಿತ್ರದಲ್ಲಿ ಕೆಲಸ ಮಾಡಿದವರೆಲ್ಲ ‘ಎ’ ಕ್ಲಾಸ್ ಪ್ರತಿಭೆಗಳು. ಹಾಗಾಗಿ ಈ ಚಿತ್ರಕ್ಕೆ ಎ ಪ್ರಮಾಣಪತ್ರ ಸಿಕ್ಕಿದೆ!’.

‘ತಾಯಿಗೆ ತಕ್ಕ ಮಗ’ ಚಿತ್ರದ ಹಾಡುಗಳಿಗೆ ಒಳ್ಳೆಯ ಸ್ಪಂದನ ಸಿಗುತ್ತಿರುವ ಹಿನ್ನೆಲೆಯಲ್ಲಿ ಸಂತಸ ಹಂಚಿಕೊಳ್ಳಲಿಕ್ಕೆ ಚಿತ್ರತಂಡ ಪತ್ರಕಾಗೋಷ್ಠಿ ಕರೆದಿತ್ತು. ಜತೆಗೆ ‘ಹೃದಯಕೆ ಹೆದರಿಕೆ..’ ಎಂಬ ಹಾಡಿನ ವಿಡಿಯೊ ಬಿಡುಗಡೆಯೂ ಇತ್ತು.

ಹಾಡಿನ ಗೆಲುವಿನ ಖುಷಿಯ ಜತೆಗೆ ಸೆನ್ಸಾರ್ ಮಂಡಳಿ ವಿರುದ್ಧ ಬೇಸರವೂ ನಿರ್ದೇಶಕ ಶಶಾಂಕ್ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ‘ನಮ್ಮ ಚಿತ್ರದಲ್ಲಿ ಆ್ಯಕ್ಷನ್ ಇದೆ. ರಕ್ತ ತೋರಿಸಿದ್ದೇವೆ. ಆದರೆ ನಮ್ಮ ಕೌಟುಂಬಿಕ ಸಿನಿಮಾ. ಬೇರೆ ಭಾಷೆಯ ಸಿನಿಮಾಗಳಲ್ಲಿ ಇದಕ್ಕಿಂತ ಹೆಚ್ಚು ರಕ್ತಪಾತ ತೋರಿಸಿದರೂ ‘ಎ’ ಪ್ರಮಾಣಪತ್ರ ಕೊಡುವುದಿಲ್ಲ. ಬೆಂಗಳೂರಿನದ್ದೇ ಮಾಲ್‌ಗಳಲ್ಲಿ ಒಂದು ಕಡೆ ನಮ್ಮ ಚಿತ್ರಕ್ಕಿಂತ ಕ್ರೌರ್ಯ ಹೆಚ್ಚಿರುವ ಪರಭಾಷಾ ಸಿನಿಮಾಗಳಿಗೆ ಮಕ್ಕಳ ಜತೆ ಕುಟುಂಬದವರು ಹೋಗುತ್ತಿರುತ್ತಾರೆ.

ADVERTISEMENT

ಆದರೆ ಅದರ ಪಕ್ಕದ ಪರದೆಯಲ್ಲಿ ಪ್ರದರ್ಶಿತವಾಗುತ್ತಿರುವ ಕನ್ನಡ ಸಿನಿಮಾಗಳಿಗೆ ‘ಎ’ ಪ್ರಮಾಣಪತ್ರ ಇರುವುದರಿಂದ ಮಕ್ಕಳನ್ನು ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಒಂದೊಂದು ಕಡೆಗಳಲ್ಲಿ ಒಂದೊಂದು ನೀತಿ ಅನುಸರಿಸುವುದು ಯಾವ ನ್ಯಾಯ?’ ಎಂದು ಪ್ರಶ್ನಿಸಿದರು ಶಶಾಂಕ್.

ಸದ್ಯಕ್ಕೆ ಸೆನ್ಸಾರ್ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುವಷ್ಟು ಸಮಯ ಇಲ್ಲ. ಈಗ ಈ ಪ್ರಮಾಣಪತ್ರದೊಂದಿಗೇ ಸಿನಿಮಾ ಬಿಡುಗಡೆ ಮಾಡುತ್ತೇನೆ. ಆದರೆ ನಂತರ ಇದರ ವಿರುದ್ಧ ಹೋರಾಡುತ್ತೇನೆ ಎಂದೂ ಅವರು ಹೇಳಿದರು.

ನಾಯಕನ ತಾಯಿ ಪಾತ್ರದಲ್ಲಿ ನಟಿಸಿರುವ ಸುಮಲತಾ ಕೂಡ ‘ಸೆನ್ಸಾರ್ ಮಂಡಳಿಯವರು ಹಳೆಯ ನೀತಿ ನಿಯಮಗಳನ್ನೇ ಇಂದಿಗೂ ಅನುಸರಿಸುತ್ತಿರುವುದು ಸರಿಯಲ್ಲ’ ಎಂದರು.

ಇದು ನಾಯಕ ಅಜಯ್ ರಾವ್ ಅವರ 25ನೇ ಸಿನಿಮಾ. ‘ನನ್ನ ಮೊದಲ ಸಿನಿಮಾ ಎಕ್ಸ್‌ಕ್ಯೂಸ್ ಮೀ’. ಅದರಲ್ಲಿಯೂ ಸುಮಲತಾ ನನ್ನ ಅಮ್ಮನಾಗಿ ನಟಿಸಿದ್ದರು. ಇಪ್ಪತ್ತೈದನೇ ಸಿನಿಮಾದಲ್ಲಿಯೂ ಅವರು ನನ್ನ ಅಮ್ಮ’ ಎಂದು ಖುಷಿಯಿಂದ ಹೇಳಿಕೊಂಡರು ಅಜಯ್. ಇಂಥದ್ದೊಂದು ಕಥೆಯ ಮೂಲಕ ತಮ್ಮ ನಟನಾಪ್ರಯಾಣ ಆರಂಭವಾಗಬೇಕು ಎಂಬ ಆಸೆ ಅವರಿಗಿತ್ತಂತೆ. ಆ ಆಸೆ 25ನೇ ಸಿನಿಮಾದಲ್ಲಿ ನೆರವೇರಿದ್ದು ಅವರಿಗೆ ಹೆಚ್ಚು ತೃಪ್ತಿ ಕೊಟ್ಟಿದೆ. ‘ಈ ಚಿತ್ರದಲ್ಲಿ ನಾನು ಮಹಾನ್ ಕೋಪಿಷ್ಠನಾಗಿ ಕಾಣಿಸಿಕೊಂಡಿದ್ದೇನೆ’ ಎಂದೂ ಹೇಳಿಕೊಂಡರು ಅಜಯ್. ಆಶಿಕಾ ರಂಗನಾಥ್, ಅಜಯ್ ಜತೆ ತೆರೆ ಹಂಚಿಕೊಂಡಿದ್ದಾರೆ.

ಚಿತ್ರಕ್ಕೆ ಹಾಡು ಬರೆದಿರುವ ಜಯಂತ ಕಾಯ್ಕಿಣಿ, ‘ಶಶಾಂಕ್ ಮತ್ತು ನನ್ನ ಸ್ನೇಹ ಹಳೆಯದು. ಅವರ ನಿರ್ದೇಶನದ ‘ಮೊಗ್ಗಿನ ಮನಸು’ ಚಿತ್ರಕ್ಕೂ ಹಾಡು ಬರೆದಿದ್ದೆ. ಕಮರ್ಷಿಯಲ್ ಚಿತ್ರವನ್ನು ಮಾಡುವ ಕಲೆ ಅವರಿಗೆ ಸಿದ್ಧಿಸಿದೆ. ಅದರಲ್ಲಿ ಭಾವುಕವಾಗಿ ಹೊಸದೇನನ್ನೋ ಹೇಳುವ ಪ್ರಯತ್ನವನ್ನೂ ಅವರು ಮಾಡುತ್ತಾರೆ’ ಎಂದರು. ಈ ಚಿತ್ರದಲ್ಲಿ ರಾಘವೇಂದ್ರ ಸಿ.ವಿ. ಒಂದು ಹಾಡು ಬರೆದಿದ್ದಾರೆ. ಹೊಸ ಬರಹಗಾರರಿಗೆ ಬರೆಯುವ ಅವಕಾಶ ಕೊಟ್ಟಿದ್ದಕ್ಕಾಗಿ ಶ್ಲಾಘನೆಯನ್ನೂ ವ್ಯಕ್ತಪಡಿಸಿದರು ಜಯಂತ್.

ಜ್ಯೂಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ನವೆಂಬರ್ 16ಕ್ಕೆ ‘ತಾಯಿಗೆ ತಕ್ಕ ಮಗ’ ತೆರೆಯ ಮೇಲೆ ಬರಲಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.