ADVERTISEMENT

ಕಾಮಿಡಿ, ಥ್ರಿಲ್ಲರ್ ಕಥನದ ಮಾಯಾಬಜಾರ್‌ 2016

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 19:30 IST
Last Updated 20 ಫೆಬ್ರುವರಿ 2020, 19:30 IST
‘ಮಾಯಾಬಜಾರ್‌’ ಚಿತ್ರದಲ್ಲಿ ಚೈತ್ರಾ ರಾವ್
‘ಮಾಯಾಬಜಾರ್‌’ ಚಿತ್ರದಲ್ಲಿ ಚೈತ್ರಾ ರಾವ್   

‘ಮಾಯಾಬಜಾರ್‌ 2016’ –ಪಿಆರ್‌ಕೆ ಪ್ರೊಡಕ್ಷನ್‌ನ ದ್ವಿತೀಯ ಚಿತ್ರ. ಹೇಮಂತ್‌ರಾವ್‌ ನಿರ್ದೇಶನದ ಮೊದಲ ಚಿತ್ರ ‘ಕವಲುದಾರಿ’ಯ ಯಶಸ್ಸಿನ ಬಳಿಕ ತೆರೆ ಕಾಣುತ್ತಿರುವ ಇದರ ಮೇಲೆ ನಿರೀಕ್ಷೆ ಹೆಚ್ಚಿದೆ. ಇದನ್ನು ನಿರ್ದೇಶಿಸಿರುವುದು ರಾಧಾಕೃಷ್ಣ ರೆಡ್ಡಿ. ಅವರೇ ಕಥೆ ಹೆಣೆದಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್‌ ಧರಿಸುತ್ತಿರುವ ಖುಷಿಯಲ್ಲೂ ಇದ್ದಾರೆ. ಫೆ. 28ರಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಕಾಮಿಡಿ ಥ್ರಿಲ್ಲರ್‌ ಕಥನ ಇದು. ನೋಟು ಅಮಾನ್ಯೀಕರಣದ ಬಳಿಕ ನಾಲ್ವರ ಬದುಕಿನಲ್ಲಿ ನಡೆಯುವ ತವಕ, ತಲ್ಲಣವೇ ಇದರ ತಿರುಳು. ಕಾಮಿಡಿ, ಎಮೋಷನ್‌ ಎಲ್ಲವೂ ಚಿತ್ರದಲ್ಲಿದೆ. ಇದೊಂದು ನ್ಯೂಏಜ್‌ ಕಂಟೆಂಟ್‌ ಸಿನಿಮಾ ಎಂಬುದು ರಾಧಾಕೃಷ್ಣ ರೆಡ್ಡಿ ಅವರ ವಿವರಣೆ.

‘ರಾಜ್‌ ಬಿ. ಶೆಟ್ಟಿ ಮತ್ತು ವಸಿಷ್ಠ ಸಿಂಹ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಜ್‌ ಶೆಟ್ಟಿ ಅವರು ಇಲ್ಲಿಯವರೆಗೂ ಅಮಾಯಕನ ಪಾತ್ರದಲ್ಲಿಯೇ ಕಾಣಿಸಿಕೊಂಡಿರುವುದು ಹೆಚ್ಚು. ಖಳನಟನಾಗಿಯೇ ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಈ ಇಬ್ಬರದ್ದೂ ತದ್ವಿರುದ್ಧವಾದ ಪಾತ್ರ’ ಎಂದು ವಿವರಿಸುತ್ತಾರೆ ಅವರು.

ADVERTISEMENT

ಚಿತ್ರದ ಬಹುತೇಕ ಶೂಟಿಂಗ್‌ ನಡೆದಿರುವುದು ಬೆಂಗಳೂರಿನಲ್ಲಿಯೇ. ಬ್ಯಾಂಕಾಕ್‌ನಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಎಲ್ಲಾ ಸಾಂಗ್‌ಗಳು ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಇವೆಯಂತೆ. ಒಟ್ಟು ನಾಲ್ಕು ಹಾಡುಗಳಿದ್ದು, ಮಿಧುನ್‌ ಮುಕುಂದನ್‌ ಸಂಗೀತ ನೀಡಿದ್ದಾರೆ.

ನಟ ಪುನೀತ್‌ ರಾಜ್‌ಕುಮಾರ್‌ ಅವರ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ ಗಾಯಕ ಎಸ್‌.ಪಿ. ಬಾಲಸುಬ್ರಮಣ್ಯ ಹಾಡಿರುವುದು ಈ ಚಿತ್ರದ ವಿಶೇಷ. ಜೊತೆಗೆ, ಈ ಹಾಡಿಗೆ ಅಪ್ಪು ಅವರೇ ಹೆಜ್ಜೆ ಹಾಕಿದ್ದಾರೆ. ಈ ಹಾಡು ತೆರೆಯ ಮೇಲೆ ಬರುವುದು ಕ್ಲೈಮ್ಯಾಕ್ಸ್‌ನಲ್ಲಿಯಂತೆ. ಇದು ರೆಟ್ರೊ ಮತ್ತು ಚಮತ್ಕಾರಿ ಹಾಡು ಎಂಬ ಮಾಹಿತಿಯೂ ಇದೆ. ಯೋಗರಾಜ್ ಭಟ್‌ ಸಾಹಿತ್ಯ ಬರೆದಿದ್ದಾರೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ಬಿ. ಗೋವಿಂದ ಬಂಡವಾಳ ಹೂಡಿದ್ದಾರೆ. ಅಭಿಷೇಕ್‌ ಜಿ. ಕಾಸರಗೋಡು ಅವರ ಛಾಯಾಗ್ರಹಣವಿದೆ. ಜಗದೀಶ್‌ ಎನ್‌. ಅವರ ಸಂಕಲನವಿದೆ. ಪ್ರಕಾಶ್ ರಾಜ್, ಸುಧಾರಾಣಿ, ಸಾಧುಕೋಕಿಲ, ಅಚ್ಯುತ್‌ಕುಮಾರ್, ಹೊನ್ನವಳ್ಳಿ ಕೃಷ್ಣ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.