
ಮುಂಬೈ: ಕಳೆದ 8 ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ನನಗೆ ಅಷ್ಟಾಗಿ ಕೆಲಸಗಳು ಸಿಗುತ್ತಿಲ್ಲ. ಈ ಬದಲಾವಣೆಗೆ ಕೋಮುವಾದದ ಕಾರಣ ಇರಬಹುದು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹೇಳಿದ್ದಾರೆ. ನೇರವಾಗಿ ಇದು ನನಗೆ ಅನುಭವಕ್ಕೆ ಬಂದಿಲ್ಲ ಎಂದೂ ಅವರು ಹೇಳಿದ್ದಾರೆ.
ಬಿಬಿಸಿ ಏಷಿಯನ್ ನೆಟ್ವರ್ಕ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಅಂತಹ ಅನುಭವಗಳು ನನಗೆ ಪರೋಕ್ಷವಾಗಿ ಆಗಿವೆ ಎಂದಿದ್ದಾರೆ.
ಯಾವುದೇ ಅವಕಾಶಗಳನ್ನು ನಾನು ಹುಡುಕಿಕೊಂಡು ಹೋಗುವುದಿಲ್ಲ. ನನಗೆ ಬರುವ ಕೆಲಸಗಳನ್ನು ಶ್ರದ್ಧೆ ಇಟ್ಟು ಮಾಡುತ್ತೇನೆ. ಕೆಲಸ ಹುಡುಕಿ ಹೊರಟರೆ ಅದು ನಮಗೆ ಕೆಟ್ಟದಾಗಬಹುದು ಎಂದಿದ್ದಾರೆ.
1990ರ ದಶಕದಲ್ಲಿ ಹಿಂದಿ ಸಿನಿಮಾಗಳಿಗಾಗಿ ಕೆಲಸ ಮಾಡುತ್ತಾ ವೃತ್ತಿ ಜೀವನ ಆರಂಭಿಸಿದಾಗ ಪೂರ್ವಾಗ್ರಹದ ವರ್ತನೆ ಅನುಭವಕ್ಕೆ ಬಂದಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತಾ ಇಲ್ಲ ಎಂದಿದ್ದಾರೆ.
'ಬಹುಶಃ ಇಂತಹುದೆಲ್ಲ ನನ್ನ ಗಮನಕ್ಕೆ ಬರದೇ ಇರಬಹುದು. ದೇವರು ಇದನ್ನೆಲ್ಲಾ ಮರೆಮಾಡಿರಬಹುದು. ನಾನು ಅಂತಹ ಯಾವುದನ್ನೂ ಅನುಭವಿಸಲಿಲ್ಲ, ಆದರೆ, ಕಳೆದ ಎಂಟು ವರ್ಷಗಳಲ್ಲಿ, ಆಗಿರುವ ಬದಲಾವಣೆಗಳು ಬಹುಶಃ, ಕೋಮು ಧೋರಣೆಯಿಂದಲೇ ಸಂಭವಿಸಿರಬಹುದು’ಎಂದು ಅವರು ವಿವರಿಸಿದ್ದಾರೆ.
‘ಸೃಜನಶೀಲರಲ್ಲದ ಜನರು ಈಗ ಅಲ್ಲಿನ ಸಂಗತಿಗಳನ್ನು ನಿರ್ಧರಿಸುವ ಅಧಿಕಾರ ಹೊಂದಿದ್ದಾರೆ. ಇದು ಸಾಮುದಾಯಿಕ ವಿಷಯವೂ ಆಗಿರಬಹುದು. ಆದರೆ, ನನಗೆ ನೇರವಾಗಿ ಅನುಭವಕ್ಕೆ ಬಂದಿಲ್ಲ. ಸಂಗೀತ ಸಂಯೋಜನೆಗೆ ನಿಮ್ಮ ಹೆಸರು ಅಂತಿಮಗೊಂಡಿತ್ತು. ಆದರೆ, ಮ್ಯೂಸಿಕ್ ಕಂಪನಿಯು ಅವರಿಗೆ ಬೇಕಾದ ಸಂಯೋಜಕರನ್ನು ನಿಯೋಜಿಸಿಕೊಂಡರು ಎಂಬುದು ನನ್ನ ಕಿವಿಗೆ ಬಿದ್ದಿತ್ತು. ಆಗ ನಾನು, ಪರವಾಗಿಲ್ಲ. ನನ್ನ ಕುಟುಂಬದ ಜೊತೆ ಕಾಲ ಕಳೆಯಲು ನನಗೆ ಸಮಯ ಸಿಕ್ಕಿತು ಎಂದು ಹೇಳಿದೆ’ ಎಂಬುದಾಗಿ ರೆಹಮಾನ್ ಉತ್ತರಿಸಿದ್ಧಾರೆ.
ತಾವು ವೃತ್ತಿಜೀವನ ಆರಂಭಿಸಿದ 1990ರ ದಶಕದ ಬಾಲಿವುಡ್ ಅನ್ನು ಅಸಾಮಾನ್ಯ ಎಂದು ಬಣ್ಣಿಸಿದ ಅವರು, ‘ಅದು ಸಂಪೂರ್ಣವಾಗಿ ಹೊಸ ಸಂಸ್ಕೃತಿ, ಅಲ್ಲಿಯವರೆಗೆ ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಬೇರೆ ಯಾವ ಸಂಗೀತ ಸಂಯೋಜಕರಿರಲಿಲ್ಲ. ಇಳಯರಾಜ ಒಂದೆರಡು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಆದರೆ, ಅವು ಮುಖ್ಯವಾಹಿನಿಯ ಚಿತ್ರಗಳಾಗಿರಲಿಲ್ಲ. ಆದ್ದರಿಂದ, ಅದನ್ನು ದಾಟಿ ಅವರು ನನಗೆ ಅವಕಾಶ ನೀಡಿದ್ದು ದೊಡ್ಡ ಅನುಭವವಾಗಿತ್ತು’ಎಂದು ಅವರು ಹೇಳಿದ್ದಾರೆ.
ರೋಜಾ, ಬಾಂಬೆ ಮತ್ತು ದಿಲ್ ಸೇ ಚಿತ್ರಗಳಿಗೆ ನೀಡಿದ್ದ ಸಂಗೀತ ಜನಪ್ರಿಯತೆಯನ್ನು ಗಳಿಸಿದರೂ, ಉತ್ತರ ಭಾರತದಲ್ಲಿ ತಮ್ಮನ್ನು ಮನೆಮಾತಾಗಿಸಿದ ಕೀರ್ತಿ ಸುಭಾಷ್ ಘಾಯ್ ಅವರ ತಾಲ್‌ಗೆ ಸಲ್ಲುತ್ತದೆ ರೆಹಮಾನ್ ಹೇಳಿದ್ದಾರೆ.
ನಾನು ಚಿತ್ರಗಳ ಆಯ್ಕೆಯಲ್ಲಿ ಅತ್ಯಂತ ಜಾಗರೂಕನಾಗಿರುತ್ತೇನೆ. ಕೆಟ್ಟ ಉದ್ದೇಶದಿಂದ ಮಾಡುವ ಚಿತ್ರಗಳಿಂದ ಅಂತರ ಕಾಯ್ದುಕೊಳ್ಳುತ್ತೇನೆ ಎಂದಿದ್ದಾರೆ.
ಛಾವಾ ಸಿನಿಮಾದಲ್ಲಿ ಕೆಲಸ ಮಾಡಿದ ಬಗ್ಗೆ ಕೇಳಿದಾಗ, ಆ ಸಿನಿಮಾ ವಿಭಜನೆಗೆ ಕಾರಣವಾಗುತ್ತದೆ ಎಂದು ಟೀಕೆಗಳು ಬಂದವು. ಆದರೆ, ಅದರ ಮೂಲ ಉದ್ದೇಶ ಧೈರ್ಯವನ್ನು ತೋರಿಸುವುದು ಎಂದು ನಾನು ಭಾವಿಸುತ್ತೇನೆ...ಇದಕ್ಕೆ ನಾನು ಏಕೆ ಬೇಕು? ಎಂದು ನಿರ್ದೇಶಕರನ್ನು ಕೇಳಿದ್ದೆ. ಅದಕ್ಕೆ ಅವರು, ಇದಕ್ಕೆ ನೀವು ಮಾತ್ರ ಬೇಕು ಎಂದು ಹೇಳಿದರು. ಪ್ರೇಕ್ಷಕರು ಬುದ್ಧಿವಂತರಿದ್ದಾರೆ. ಸಿನಿಮಾ ನೋಡಿ ವಿಭಜನೆಗೊಳಗಾಗುತ್ತಾರಾ? ಎಂದರು ಎಂಬುದಾಗಿ ರೆಹಮಾನ್ ಉತ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.