ADVERTISEMENT

ಚಿತ್ರರಂಗಕ್ಕೆ ಆರ್ಥಿಕ ಪರಿಹಾರ ಪ್ಯಾಕೆಜ್‌ ಅಗತ್ಯತೆ ಇದೆ: ಸುಮಲತಾ ಅಂಬರೀಷ್‌

​ಪ್ರಜಾವಾಣಿ ವಾರ್ತೆ
Published 31 ಮೇ 2021, 15:01 IST
Last Updated 31 ಮೇ 2021, 15:01 IST
ಸುಮಲತಾ ಅಂಬರೀಷ್‌
ಸುಮಲತಾ ಅಂಬರೀಷ್‌   

ಬೆಂಗಳೂರು: ‘ಕಳೆದ ನಾಲ್ಕೈದು ತಿಂಗಳಿಂದ ಸಿನಿಮಾ ಚಿತ್ರೀಕರಣವೆಲ್ಲವೂ ಸ್ಥಗಿತವಾಗಿದ್ದು, ಚಿತ್ರರಂಗ ಸಂಕಷ್ಟಕ್ಕೀಡಾಗಿದೆ. ಈ ಸಂದರ್ಭದಲ್ಲಿ ಆರ್ಥಿಕ ಪರಿಹಾರ ಪ್ಯಾಕೆಜ್‌ ನೀಡಬೇಕು ಎನ್ನುವ ಮನವಿಯನ್ನು ಮುಖ್ಯಮಂತ್ರಿಯವರಿಗೆ ಮಾಡಿದ್ದು, ಅವರು ಸಕರಾತ್ಮಕ ಭರವಸೆ ನೀಡಿದ್ದಾರೆ’ ಎಂದು ನಟಿ, ಸಂಸದೆ ಸುಮಲತಾ ಅಂಬರೀಷ್‌ ಹೇಳಿದರು.

ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಚಿತ್ರರಂಗದ ಕಲಾವಿದರಿಗೆ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕನ್ನಡ ಚಿತ್ರರಂಗದ ಸಂಕಷ್ಟದ ಪರಿಸ್ಥಿತಿ ಮನವರಿಕೆ ಮಾಡಿದ್ದೇವೆ. ಕಳೆದ ಬಾರಿ ಲಾಕ್‌ಡೌನ್‌ ಸಂದರ್ಭದಲ್ಲಿ ಚಿತ್ರರಂಗದ ಕಾರ್ಮಿಕರಿಗೆ ದಿನಸಿ ಕಿಟ್‌ ನೀಡಿದ್ದರು. ಹೀಗಾಗಿ ಈ ಬಾರಿಯೂ ಆಹಾರದ ಕಿಟ್‌ ನೀಡಲು ಮನವಿ ಸಲ್ಲಿಸಿದ್ದೇವೆ. ಈಗಾಗಲೇ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು ಫೋನ್‌ ಮುಖಾಂತರ ಆಹಾರ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ಅವರು ಆಹಾರ ಕಿಟ್‌ ನೀಡುವ ಭರವಸೆ ನೀಡಿದ್ದಾರೆ’ ಎಂದರು.

‘ಅಂಬರೀಷ್‌ ಅವರು ಕಲಾವಿದರ ಭವನವನ್ನು ಪಟ್ಟು ಹಿಡಿದು ಮಾಡಿದ್ದೇ ಕಲಾವಿದರ ಒಳಿತಿಗಾಗಿ. ಇಂದು ನೂರಾರು ಕಲಾವಿದರಿಗೆ ಲಸಿಕೆ ಹಾಕಿಸಲು ಈ ಭವನ ನೆರವಾಗಿದೆ. ಕೋವಿಡ್‌–19 ವಿಷಯದಲ್ಲಿ ನಿಯಮ ಎಲ್ಲರಿಗೂ ಒಂದೇ ಆಗಿರುವ ಕಾರಣ, ಜೂನ್‌ 7ರ ನಂತರ ಚಿತ್ರೀಕರಣಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡುವುದು ಸೂಕ್ತವಾಗುವುದಿಲ್ಲ’ ಎಂದರು.

ADVERTISEMENT

‘ಲಾಕ್‌ಡೌನ್‌ನಿಂದಾಗಿ ಎಲ್ಲರೂ ಸಂಕಷ್ಟದಲ್ಲಿ ಇದ್ದೇವೆ. ಚಿತ್ರರಂಗದಲ್ಲಿ ಲೈಟ್‌ಬಾಯ್ಸ್‌ನಿಂದ ಹಿಡಿದು ನಿರ್ಮಾಪಕರೂ ಸಂಕಷ್ಟದಲ್ಲಿದ್ದಾರೆ. ಚಿತ್ರರಂಗವನ್ನೇ ನಂಬಿಕೊಂಡಿರುವವರಿಗೆ ಜೀವನ ನಡೆಸಲು ಕಷ್ಟವಾಗಿದೆ. ಎಲ್ಲರಿಗೂ ಪ್ಯಾಕೆಜ್‌ ಘೋಷಿಸಿರುವಾಗ, ಚಿತ್ರರಂಗಕ್ಕೂ ಆರ್ಥಿಕ ಪ್ಯಾಕೆಜ್‌ ಘೋಷಿಸಬೇಕು. ಈ ಹಿಂದೆ ನಮ್ಮ ಕಷ್ಟ ಸುಖ ಹೇಳಲು ಡಾ.ರಾಜ್‌ಕುಮಾರ್‌, ಅಂಬರೀಷ್‌ ಇದ್ದರು. ನಮ್ಮ ಧ್ವನಿಯಾಗಿದ್ದ ಇವರು, ಇಂತಹ ಪರಿಸ್ಥಿತಿ ಬಂದಾಗ ನಿಭಾಯಿಸಿದ್ದರು’ ಎಂದು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.