ADVERTISEMENT

ಕೋವಿಡ್‌ 19 ಭೀತಿ | ಬೀಜಿಂಗ್‌ ಅಂತರರಾಷ್ಟ್ರೀಯ ಸಿನಿಮೋತ್ಸವ ಮುಂದೂಡಿಕೆ

ಏಜೆನ್ಸೀಸ್
Published 9 ಮಾರ್ಚ್ 2020, 12:02 IST
Last Updated 9 ಮಾರ್ಚ್ 2020, 12:02 IST
ಬೀಜಿಂಗ್‌ ಅಂತರರಾಷ್ಟ್ರೀಯ ಸಿನಿಮೋತ್ಸವದ ಲೋಗೊ
ಬೀಜಿಂಗ್‌ ಅಂತರರಾಷ್ಟ್ರೀಯ ಸಿನಿಮೋತ್ಸವದ ಲೋಗೊ   

‘ಕೋವಿಡ್‌ 19’ ಭೀತಿಯು ಕನ್ನಡ ಚಿತ್ರರಂಗದ ಮೇಲಷ್ಟೇ ಪರಿಣಾಮ ಬೀರಿಲ್ಲ. ಬಾಲಿವುಡ್‌, ಟಾಲಿವುಡ್‌, ಕಾಲಿವುಡ್, ಮಾಲಿವುಡ್‌ಗೂ ಇದರ ಬಿಸಿ ತಟ್ಟಿದೆ. ಹಾಲಿವುಡ್‌ ಕೂಡ ತತ್ತರಿಸಿ ಹೋಗಿದೆ.

ಸೋಂಕು ಹಬ್ಬುವ ಭೀತಿಯಿಂದಾಗಿ ಬಿಗ್‌ ಬಜೆಟ್‌ ಸಿನಿಮಾಗಳ ಚಿತ್ರೀಕರಣ ಹಾಗೂ ಬಿಡುಗಡೆಯ ದಿನಾಂಕವನ್ನೂ ಮುಂದೂಡಲಾಗಿದೆ. ಮುಂದಿನ ತಿಂಗಳು ನಡೆಯಬೇಕಿದ್ದ ಬೀಜಿಂಗ್‌ ಅಂತರರಾಷ್ಟ್ರೀಯ ಸಿನಿಮೋತ್ಸವದ ಮೇಲೂ ಇದು ಪರಿಣಾಮ ಬೀರಿದೆ.

ಚೀನಾದ ಬೀಜಿಂಗ್‌ನಲ್ಲಿ ಏಪ್ರಿಲ್‌ 13ರಿಂದ 19ರವರೆಗೆ ಸಿನಿಮೋತ್ಸವ ನಿಗದಿಯಾಗಿತ್ತು. ಆದರೆ, ‘ಕೋವಿಡ್‌ 19’ ಭೀತಿಯ ಹಿನ್ನೆಲೆಯಲ್ಲಿ ಸಿನಿಮೋತ್ಸವವನ್ನು ಮುಂದೂಡಲಾಗಿದೆ. ‘ಸಿನಿಮೋತ್ಸವವನ್ನು ಮುಂದೂಡಿಕೆ ಮಾಡಿದ್ದಕ್ಕಾಗಿ ಸಿನಿಪ್ರಿಯರ ಬಳಿ ನಾವು ಕ್ಷಮೆಯಾಚಿಸುತ್ತೇವೆ. ಮುಂದಿನ ದಿನಗಳಲ್ಲಿ ಸಿನಿಮೋತ್ಸವದ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ಸಿನಿಮೋತ್ಸವದ ಸಂಘಟನಾ ಸಮಿತಿ ತಿಳಿಸಿದೆ.

ADVERTISEMENT

‘ಕೋವಿಡ್ 19’ ಸೋಂಕಿನಿಂದ ಚೀನಾ ಸರ್ಕಾರ ತತ್ತರಿಸಿದೆ. ಪ್ರತಿದಿನ ಅಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದೆಡೆ ಸೋಂಕು ತಡೆಗಟ್ಟುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಹಾಗಾಗಿ, 10ನೇ ಬೀಜಿಂಗ್‌ ಅಂತರರಾಷ್ಟ್ರೀಯ ಸಿನಿಮೋತ್ಸವವನ್ನು ಮುಂದೂಡಿರುವುದು ಅಚ್ಚರಿಯ ಸಂಗತಿಯೇನಲ್ಲ.

ವಿಶ್ವದಾದ್ಯಂತ ‘ಕೋವಿಡ್‌ 19’ ಸೋಂಕಿನಿಂದಾಗಿ ಮಹತ್ವದ ಹಲವು ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ. ಹಾಲಿವುಡ್‌ ಸಿನಿಮಾಗಳ ಮೇಲೂ ಇದರ ಕರಿನೆರಳು ಬಿದ್ದಿದೆ. ಜೇಮ್ಸ್‌ ಬಾಂಡ್‌ ಸರಣಿಯ ಚಿತ್ರ ‘ನೋ ಟೈಮ್ ಟು ಡೈ’ ಚಿತ್ರ ಏಪ್ರಿಲ್ 3ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಬೇಕಿತ್ತು. ನವೆಂಬರ್‌ನಲ್ಲಿ ಈ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಮುಂದಾಗಿದ್ದಾರೆ.

ಚೀನಾದಲ್ಲಿ 70 ಸಾವಿರ ಸಿನಿಮಾ ಥಿಯೇಟರ್‌ಗಳಿವೆ. ಈ ದೇಶದ ಸಿನಿಮಾ ಮಾರುಕಟ್ಟೆಗಷ್ಟೆ ‘ಕೋವಿಡ್‌ 19’ ಸೋಂಕು ಹೊಡೆತ ನೀಡಿಲ್ಲ. ಇಟಲಿ, ದಕ್ಷಿಣ ಕೊರಿಯಾ, ಜಪಾನ್‌ ದೇಶದ ಸಿನಿಮಾ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.